ಸ್ವರ್ಣಸಂದ್ರ ಬಡಾವಣೆಯ ಸೋಂಕಿತನ ಕುಟುಂಬದ ನಾಲ್ವರಿಗೂ ನೆಗೆಟಿವ್
ಮಂಡ್ಯ

ಸ್ವರ್ಣಸಂದ್ರ ಬಡಾವಣೆಯ ಸೋಂಕಿತನ ಕುಟುಂಬದ ನಾಲ್ವರಿಗೂ ನೆಗೆಟಿವ್

April 13, 2020

ಮಂಡ್ಯ ಜಿಲ್ಲೆಯೊಳಗೆ ಎಲ್ಲಿಯೂ ಸೀಲ್‍ಡೌನ್ ಇಲ್ಲ್ಲ: ಡಿಸಿ ಸ್ಪಷ್ಟನೆ

ಮಂಡ್ಯ,ಏ.12(ನಾಗಯ್ಯ)- ಇಲ್ಲಿನ ಸ್ವರ್ಣಸಂದ್ರ ಬಡಾ ವಣೆಯ ಕೊರೊನಾ ಸೋಂಕಿತನ ಕುಟುಂಬದ ನಾಲ್ವರ ರಕ್ತಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಮಂಡ್ಯದ ಜನತೆ ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸ್ವರ್ಣಸಂದ್ರದ 32 ವರ್ಷದ ಯುವಕನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ತಂದೆ, ತಾಯಿ, ತಂಗಿ ಹಾಗೂ ತಂಗಿಯ ಮಗಳನ್ನು ಆಸ್ಪತ್ರೆ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಅವರೆಲ್ಲರ ರಕ್ತ ಮತ್ತು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದರು. ಮಳವಳ್ಳಿಯ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರೂ ಸೇರಿದಂತೆ ಆಸ್ಪತ್ರೆ, ಹಾಸ್ಟೆಲ್ ಹಾಗೂ ಹೋಂ ಕ್ವಾರಂಟೈನ್‍ಲ್ಲಿರುವ ಸುಮಾರು 200 ಮಂದಿಯ ರಕ್ತದ ಮಾದರಿಯನ್ನು 12 ದಿನದ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅವರ ಫಲಿತಾಂಶ ಬರಬೇಕಾಗಿದೆ ಎಂದು ಅವರು ತಿಳಿಸಿದರು.

ಸೀಲ್‍ಡೌನ್ ಇಲ್ಲ್ಲ; ಸೋಂಕು ಕಾಣಿಸಿಕೊಂಡಿರುವ ಮಳವಳ್ಳಿ ಹಾಗೂ ಸ್ವರ್ಣಸಂದ್ರ ಬಡಾವಣೆಯಲ್ಲಿ ಸೀಲ್‍ಡೌನ್ ಮಾಡಿಲ್ಲ, ಕಂಟೋನ್‍ಮೆಂಟ್ ಝೋನ್‍ನಷ್ಟೇ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಗೊಂದಲ ಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯೊಳಗೂ ಸಹ ಪಾಸಿಟಿವ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಸ್ತರಣೆಯಾಗಿದೆ. ಈ ಲಾಕ್‍ಡೌನ್ ತೆರವುಗೊಳಿಸುವ ಮುಂದಿನ ದಿನಾಂಕದವರೆಗೂ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸ್ಪಂದಿಸಬೇಕು. ಅನವಶ್ಯಕವಾಗಿ ಓಡಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾ ಗುವುದು ಎಂದು ಎಚ್ಚರಿಕೆ ನೀಡಿದರು.

ಸಾಮಗ್ರಿ ಎಲ್ಲರಿಗೂ ಉಚಿತವಿಲ್ಲ: ಸ್ವರ್ಣಸಂದ್ರ ಬಡಾವಣೆಯನ್ನು ಕಂಟೋನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲಿಗೆ ನಿತ್ಯವೂ ಹಾಪ್‍ಕಾಮ್ಸ್ ಮೂಲಕ ಹಣ್ಣು ತರಕಾರಿ ಮತ್ತು ಅವಶ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ, ಆದರೆ ಬಡ ಕುಟುಂಬಗಳನ್ನು ಹೊರತುಪಡಿಸಿ ಎಲ್ಲರಿಗೂ ಇವುಗಳನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ. ನಿಗದಿಪಡಿಸಿರುವ ದರ ನೀಡಿ ವಸ್ತುಗಳನ್ನು ಕೊಂಡು ಕೊಳ್ಳಬೇಕೆಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Translate »