ಪ್ರೊ.ಭಗವಾನ್ ವಿರುದ್ಧ ವ್ಯವಸ್ಥಿತ ಸಂಚು  ಪರಿಷತ್ ಸದಸ್ಯ ಪುಟ್ಟಸಿದ್ದಶೆಟ್ಟಿ ಆರೋಪ
ಮೈಸೂರು

ಪ್ರೊ.ಭಗವಾನ್ ವಿರುದ್ಧ ವ್ಯವಸ್ಥಿತ ಸಂಚು ಪರಿಷತ್ ಸದಸ್ಯ ಪುಟ್ಟಸಿದ್ದಶೆಟ್ಟಿ ಆರೋಪ

January 7, 2019

ಮೈಸೂರು: ಚಿಂತಕ ಕೆ.ಎಸ್.ಭಗವಾನ್ ವಿರುದ್ಧ ಸಮಾಜದಲ್ಲಿ ಅಸಹನೆ ಮೂಡುವಂತೆ ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರ್ನಾಟಕ ದಲಿತ ವೇಲ್‍ಫೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಯಜಮಾನರು ಎಂದುಕೊಂಡವರು ಪ್ರೊ.ಭಗವಾನ್ ಅವರ ವಿರುದ್ಧ ಸಮಾಜವನ್ನು ಕೆರಳಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.

ಕೆಲ ವಿದ್ಯುನ್ಮಾನ ಮಾಧ್ಯಮಗಳೂ ಕೆ.ಎಸ್.ಭಗವಾನ್ ವಿರುದ್ಧ ಸಮರ ಸಾರಿ ದಂತೆ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಜನತೆಯನ್ನು ಅವರ ವಿರುದ್ಧ ಪ್ರಚೋ ದಿಸುವ ಪ್ರಯತ್ನಗಳು ನಡೆಯುತ್ತಿವೆ. ಭಗವಾನ್ ಅವರು ಮಾಡಿದ ತಪ್ಪಾದರೂ ಏನು? ಎಂದು ಪ್ರಶ್ನಿಸಿದ ಅವರು, ಭಗವಾನ್ ಸಂವಿಧಾನದತ್ತವಾಗಿ ದೊರೆತ ಹಕ್ಕುಗಳನ್ನು ಬಳಸಿ ಕೊಂಡು ವಿಮರ್ಶೆ, ಸಂಶೋಧನೆ ಮೂಲಕ ಸತ್ಯಗಳನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ. ಆದರೆ ಹಿಂದೂ ಧರ್ಮದ ವಾರಸುದಾರರು ಎಂದು ಕೊಂಡವರಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ರೀತಿಯ ಯಾವುದೇ ಕುತಂತ್ರಗಳಿಗೆ ನಾವು ಹೆದರುವುದಿಲ್ಲ. ದೇಶದಲ್ಲಿ ಎಲ್ಲಾ ಧರ್ಮೀಯರ ಸಹಿಷ್ಣುತೆ ಹಾಗೂ ಸಾಮರಸ್ಯದಿಂದ ಬದುಕುವುದಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ದೇವರು, ಕಂದಾಚಾರ, ಮೌಢ್ಯತೆ ಹೆಸರಿನಲ್ಲಿ ಮುಗ್ಧರನ್ನು ಬಲಿ ತೆಗೆದುಕೊಳ್ಳುವ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಹಿರಿಯ ವಕೀಲ ನಂಜುಂಡಸ್ವಾಮಿ ಮಾತನಾಡಿ, 2018ರ ಡಿ.29ರಂದು ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಪೇಜಾವರ ಶ್ರೀಗಳು ಭಗವಾನ್ ವಿಷಯ ಪ್ರಸ್ತಾಪಿಸಿ ಅವರಿಗೆ ಕಷ್ಟವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಸೂಕ್ಷ್ಮ ಮಾತುಗಳ ಬಗ್ಗೆ ಸ್ವಾಮೀಜಿಯವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ದಲಿತ ವೇಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ರವೀಶ್, ಮುಖಂಡರಾದ ಬೋರಪ್ಪಶೆಟ್ಟಿ, ಚಿಕ್ಕಂದಾನಿ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »