ತಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ನಾಮಪತ್ರ ಸಲ್ಲಿಕೆ
ಮೈಸೂರು

ತಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ನಾಮಪತ್ರ ಸಲ್ಲಿಕೆ

April 24, 2018

ತಿ.ನರಸೀಪುರ, ಏ.23(ಎಸ್‍ಕೆ)- ವಿಧಾನ ಸಭಾ ಚುನಾವಣೆ ರಂಗೇರುತ್ತಿದ್ದು, ಲೋಕೋ ಪಯೋಗಿ ಸಚಿವ ಡಾ.ಹೆಚ್.ಸಿ. ಮಹ ದೇವಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿದ ಮಹದೇವಪ್ಪ ವಿಶೇಷ ಪೂಜೆ ಸಲ್ಲಿಸಿ, ನಂತರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಐದು ವರ್ಷಗಳ ಸಾಧನೆ ಮತ್ತು ಸ್ಥಿರ ಸರ್ಕಾರ ನೀಡಿದ್ದರಿಂದ ಚುನಾವಣೆ ಫಲಿತಾಂಶದಲ್ಲಿ 120 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕ್ಷೇತ್ರ ದಲ್ಲಿಯೂ ಕೂಡ ವ್ಯಾಪಕವಾದ ಜನ ಬೆಂಬಲವನ್ನು ನೋಡಿದಾಗ ನಾನು ಅತ್ಯಧಿಕ ಮತಗಳ ಅಂತರದಲ್ಲಿ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸ ಇಮ್ಮುಡಿಗೊಳ್ಳುತ್ತಿದೆ ಎಂದರು.
ನರಸೀಪುರ ಸೇರಿದಂತೆ ವರುಣಾ, ನಂಜನಗೂಡು ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ. ಸುನೀಲ್ ಬೋಸ್ ಶಾಸಕರಾಗಬೇಕು ಎಂದು ಎಲ್ಲಿಯೂ ಪ್ರಸ್ತಾಪಿಸಿಲ್ಲ. ರಾಜಕೀಯ ಅಧಿಕಾರವಿಲ್ಲದಿದ್ದರೂ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಸಮಾಜ ಸೇವೆಯನ್ನು ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್, ಮಾಜಿ ಶಾಸಕ ಎಸ್.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನಾ, ಜಿಪಂ ಸದಸ್ಯ ಮಂಜುನಾಥನ್, ತಾಪಂ ಅಧ್ಯಕ್ಷ ಆರ್.ಚಲುವರಾಜು, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಬಿ.ಎಸ್.ರವೀಂದ್ರ ಕುಮಾರ್, ಪುರಸಭೆ ಅಧ್ಯಕ್ಷ ಸಿ.ಉಮೇಶ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಶಂಕರೇ ಗೌಡ, ಜಿಪಂ ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಎನ್.ಕೆ.ಫರೀದ್, ಸಂಚಾಲಕ ಬಿ.ಮನ್ಸೂರ್ ಆಲಿ, ಡಿ.ಪದ್ಮ ನಾಭ, ಬಿ.ಆರ್.ರಂಗಸ್ವಾಮಿ, ಲಕ್ಷ್ಮೀ ನಾರಾಯಣ, ಕುಕ್ಕೂರು ಪ್ರಸನ್ನ, ಎ.ಎನ್. ಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು.

Translate »