ತಿ. ನರಸೀಪುರ: ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಇಂದು 11ನೇ ಕುಂಭಮೇಳಕ್ಕೆ ಚಾಲನೆ ದೊರೆಯಲಿದೆ.
ಇಂದಿನಿಂದ (ಫೆ.17) ಮೂರು ದಿನಗಳವರೆಗೆ ಜರುಗುವ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ದಕ್ಷಿಣ ಗಂಗೆ ಎನಿಸಿ ಕೊಂಡಿರುವ ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮಗೊಳ್ಳುವ ದಕ್ಷಿಣದ ಪ್ರಯಾಗ ಎಂದೇ ಕರೆಯಲ್ಪಡುವ ತಿರುಮಕೂಡಲು ನರಸೀಪುರದಲ್ಲಿ ಜರುಗುತ್ತಿರುವ ಕುಂಭಮೇಳದಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದ ಮುತುವರ್ಜಿಯಿಂದಾಗಿ ಎಲ್ಲಾ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ.17, 18 ಹಾಗೂ 19ರವರೆಗೆ ನಡೆಯುವ ಧಾರ್ಮಿಕ ಉತ್ಸವದ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ.
ಸಾರಿಗೆ ವ್ಯವಸ್ಥೆ: ಭಕ್ತರ ಅನುಕೂಲಕ್ಕಾಗಿ ಪಟ್ಟಣದಲ್ಲಿ 3 ತಾತ್ಕಾಲಿಕ ನಿಲ್ದಾಣಗಳಿಂದ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. 5 ಕಡೆ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.