ಜ.9ರಂದು ತಿ.ನರಸೀಪುರ ತಾಲೂಕು ಸಾಹಿತ್ಯ ಸಮ್ಮೇಳನ ಶಾಸಕ ದ್ವಯರ ಅಧ್ಯಕ್ಷತೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಮೈಸೂರು

ಜ.9ರಂದು ತಿ.ನರಸೀಪುರ ತಾಲೂಕು ಸಾಹಿತ್ಯ ಸಮ್ಮೇಳನ ಶಾಸಕ ದ್ವಯರ ಅಧ್ಯಕ್ಷತೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

December 22, 2019

ತಿ.ನರಸೀಪುರ, ಡಿ.21(ಎಸ್‍ಕೆ)-ತಾಲೂಕಿನ ಐತಿಹ್ಯ, ಸಾಹಿತ್ಯ ಲೋಕದ ದಿಗ್ಗಜರ ಹಿನ್ನೆಲೆ, ಸಾಹಿತ್ಯ ಪರಂಪರೆ ಅನಾವರಣಗೊಳಿಸುವಂತೆ ಜ.9ರಂದು ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಶಾಸಕದ್ವಯರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಲು ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಎಂ.ಅಶ್ವಿನ್‍ಕುಮಾರ್, ಸಭೆಯಲ್ಲಿ ಪ್ರತಿಯೊಬ್ಬರೂ ನೀಡುವ ಸಲಹೆ ಸೂಚನೆಗಳನ್ನು ಗ್ರಹಿಸಿಕೊಂಡು ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ಶಿಸ್ತುಬದ್ಧವಾಗಿ ಕಾರ್ಯಕ್ರಮ ರೂಪುಯರೇಷೆ ಸಿದ್ಧಪಡಿಸಿಕೊಳ್ಳಬೇಕು. ಸನ್ಮಾನಿತರ ಆಯ್ಕೆಗೆ ಸಮಿತಿ ರಚಿಸಲಾಗುವುದು. ತಾಲೂಕು ಕೇಂದ್ರೀಕರಿಸಿ ಸಾಹಿತ್ಯದಲ್ಲಿ ಅಭೂತಪೂರ್ವ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸವಾಗಬೇಕು ಎಂದ ಅವರು, ವರುಣಾ ಶಾಸಕ ಡಾ.ಎಸ್.ಯತೀಂದ್ರರ ಜೊತೆಗೂಡಿ ಸಮ್ಮೇಳದ ಯಶಸ್ವಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವರುಣಾ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರು ಸೇರಿದಂತೆ ತಾಲೂಕಿನ ಚಾರಿತ್ರಿಕ ಮಹತ್ವ ಹಾಗೂ ಧಾರ್ಮಿಕ ಕ್ಷೇತ್ರಗಳ ಪರಿಚಯಿಸುವ ಕೆಲಸವಾಗಬೇಕು. ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸಂಘಟನೆಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ಧತೆ ಕಾರ್ಯಗಳನ್ನು ನಡೆಸಬೇಕು. ಶಿಷ್ಟಾಚಾರ ಮತ್ತು ಕಾರ್ಯಕ್ರಮ ರೂಪುರೇಷೆಯ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು. ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ರಾಜು ಮಾತನಾಡಿ, ಜಿಲ್ಲಾ ಕಸಾಪ ಮಾರ್ಗಸೂಚಿಯಂತೆ ಪಟ್ಟಣದಲ್ಲಿ ಜ.9ರಂದು ತಾಲೂಕು ಮಟ್ಟದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮ ಸ್ಥಳ ಆಯ್ಕೆ ಹಾಗೂ ಸನ್ಮಾನಿತ ಸಾಧಕರ ಆಯ್ಕೆಯನ್ನು ಶಾಸಕರ ನಿರ್ಧಾರಕ್ಕೆ ಬಿಡಲಾಗಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಮೈಸೂರು ವಿಶ್ವವಿದ್ಯಾಲಯ ಜೈನಶಾಸ್ತ್ರದ ಮುಖ್ಯಸ್ಥೆ ಸೋಮನಾಥಪುರದ ಬಿ.ಪದ್ಮಾವತಿ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿನ ಮುಖಂಡರು ಹಾಗೂ ಸಾಹಿತ್ಯಾಸಕ್ತರು ನೀಡುವ ಸಲಹೆಯನ್ನು ಪರಿಗಣಿಸಲಾಗುವುದು. ಒಂದು ದಿನದ ಮಟ್ಟಿಗೆ ನಡೆಯುವ ಕಾರ್ಯಕ್ರಮದ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಬಾಬೂಜಿ ಸಂಘದ ಅಧ್ಯಕ್ಷ ಮೂಗೂರು ಸಿದ್ದರಾಜು ಹಾಗೂ ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ಷಣ್ಮುಖಸ್ವಾಮಿ ಸಾಹಿತ್ಯ ಸಮ್ಮೇಳನದಲ್ಲಿ ಆಗಬೇಕಿರುವ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು.

ತಾಪಂ ಅಧ್ಯಕ್ಷ ಹೆಚ್.ಎನ್.ಉಮೇಶ, ಜಿಪಂ ಸದಸ್ಯರಾದ ಮಂಜುನಾಥನ್, ಎಸ್.ವಿ.ಜಯಪಾಲ ಭರಣಿ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕುಕ್ಕೂರು ಗಣೇಶ, ಸದಸ್ಯರಾದ ಎಂ.ರಮೇಶ, ರಾಮಲಿಂಗಯ್ಯ, ಕಾರ್ಯನಿರ್ವಹಕ ಅಧಿಕಾರಿ ಎಂ.ಜರಾಲ್ಡ್ ರಾಜೇಶ್, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಆರ್.ಲವ, ವರುಣಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕುಪ್ಯ ಭಾಗ್ಯಮ್ಮ, ಮಾಜಿ ಪ್ರಧಾನ ಹೆಚ್.ವಿ.ಶೇಷಾಧ್ರಿ, ಗ್ರಾಪಂ ಮಾಜಿ ಅಧ್ಯಕ್ಷ ಶಂಭುದೇವನಪುರ ಎಂ.ರಮೇಶ, ಡಿವೈಎಫ್‍ಐ ಅಧ್ಯಕ್ಷ ಸಿ.ಪುಟ್ಟಮಲ್ಲಯ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಸಂಚಾಲಕ ಬಿ.ಮನ್ಸೂರ್ ಆಲಿ, ಮುಖಂಡರಾದ ಆಲಗೂಡು ನಾಗರಾಜು, ಬೆನಕನಹಳ್ಳಿ ಗಂಗಾಧರ, ಎಸ್.ಮಹದೇವಶೆಟ್ಟಿ, ಮಹದೇವಮ್ಮ, ಜಯಲಕ್ಷ್ಮೀ, ಜಾನಕಮ್ಮ, ಸ್ವಾಮಿ, ಗೋವಿಂದೇಗೌಡ, ಅಕ್ಬರ್ ಪಾಷ, ಮಸ್ರೂರ್ ಅಹಮ್ಮದ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇನ್ನಿತರರಿದ್ದರು.

Translate »