ಬಜೆಟ್‍ನಲ್ಲಿ ಕೊಡವ ಸಮುದಾಯಕ್ಕೆ ಕೊಡುಗೆ: ರಾಜ್ಯ ಸರ್ಕಾರಕ್ಕೆ ಕೊಡವ ಸಮಾಜಗಳ ಒಕ್ಕೂಟ ಕೃತಜ್ಞತೆ
ಕೊಡಗು

ಬಜೆಟ್‍ನಲ್ಲಿ ಕೊಡವ ಸಮುದಾಯಕ್ಕೆ ಕೊಡುಗೆ: ರಾಜ್ಯ ಸರ್ಕಾರಕ್ಕೆ ಕೊಡವ ಸಮಾಜಗಳ ಒಕ್ಕೂಟ ಕೃತಜ್ಞತೆ

February 10, 2019

ಮಡಿಕೇರಿ: ಕೊಡವ ಸಮುದಾಯದ ಏಳಿಗೆಗಾಗಿ ರೂ.10 ಕೋಟಿ ಮತ್ತು ಕೊಡಗಿನ ಹಾಕಿಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿರಾಜಪೇಟೆಯ ಬಾಳುಗೋಡು ವಿನಲ್ಲಿ ಖಾಯಂ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ 5 ಕೋಟಿ ರೂ.ಗಳನ್ನು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಕೊಡವ ಸಮಾಜಗಳ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಮುಕ್ಕಾಟಿರ ಕುಟುಂಬದ ಮುಖ್ಯಸ್ಥ, ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟಿರ ಉತ್ತಯ್ಯ ಅವರಿಗೆ ಒಕ್ಕೂಟ ಆಭಾರಿಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ತಿಳಿಸಿದ್ದಾರೆ.

ಬಾಳುಗೋಡುವಿನಲ್ಲಿ ನಡೆಯಲಿರುವ “ಮುಕ್ಕಾಟಿರ ಕಪ್” ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಗೆ ಸಂಬಂ ಧಪಟ್ಟಂತೆ ಖಾಯಂ ಹಾಕಿ ಕ್ರೀಡಾಂಗಣ ಬೇಕೆಂದು ಮುಕ್ಕಾಟಿರ ಉತ್ತಯ್ಯ ಅವರ ಸಲಹೆಯಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ದೇವೇಗೌಡರನ್ನು ಭೇಟಿಯಾಗಿದ್ದ ಒಕ್ಕೂಟದ ಮಾಜಿ ಅಧ್ಯಕ ಮಲ್ಲೆಂಗಡ ದಾದಾ ಬೆಳ್ಯಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ, ಮುಕ್ಕಾಟಿರ ಕುಟುಂಬದ ಕಾರ್ಯಾ ಧ್ಯಕ್ಷ ಮುಕ್ಕಾಟಿರ ರೋಹಿತ್ ಹಾಗೂ ಮುಕ್ಕಾಟಿರ ಪೂಣಚ್ಚ ಅವರುಗಳಿದ್ದ ನಿಯೋಗ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿತ್ತು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ದೇವೇಗೌಡರು ಕ್ರೀಡಾಂಗಣ ಮಾತ್ರವಲ್ಲದೆ ಕೊಡವರ ಶ್ರೇಯೋಭಿವೃದ್ಧಿ ಗಾಗಿಯೂ ಹೆಚ್ಚುವರಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಬಜೆಟ್‍ನಲ್ಲಿ ಸಮುದಾಯಕ್ಕಾಗಿ 10 ಕೋಟಿ ಹಾಗೂ ಕ್ರೀಡಾಂಗಣಕ್ಕೆ 5 ಕೋಟಿ ರೂ.ಗಳನ್ನು ನೀಡುವ ಮೂಲಕ ನುಡಿದಂತೆ ನಡೆದುಕೊಂಡಿರುವ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಹೆಚ್.ವಿಶ್ವನಾಥ್ ಅವರ ಕಾಳಜಿ ಶ್ಲಾಘನಾರ್ಹವೆಂದು ವಿಷ್ಣು ಕಾರ್ಯಪ್ಪ ತಿಳಿಸಿದ್ದಾರೆ. ಕ್ರೀಡಾಂಗಣಕ್ಕೆ ಫೀ.ಮಾ.ಕಾರ್ಯಪ್ಪ ಅವರ ಹೆಸರಿಡುವಂತೆ ದೇವೇಗೌಡರು ಸಲಹೆ ನೀಡಿದ್ದಾರೆ ಎಂದು ಅವರು ಇದೇ ಸಂದರ್ಭ ನೆನಪಿಸಿಕೊಂಡಿದ್ದಾರೆ.

Translate »