22 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಕೊಡಗು

22 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

October 27, 2018

ಮಡಿಕೇರಿ: ಬೀಟೆ ಮರ ಕಳವು ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀ ನಿನ ಮೇಲೆ ಹೊರ ಬಂದು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 22 ವರ್ಷ ಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1996ರಲ್ಲಿ ಮೂರ್ನಾಡುವಿನ ಹೊದ್ದೂರು ಸಮೀಪ ಬೀಟೆ ಮರ ಕಳವು ಪ್ರಕರಣ ನಡೆದಿತ್ತು. ಅಕ್ರಮ ಮರ ಸಾಗಾಟ ಪ್ರಕರಣದಲ್ಲಿ ಮೂರ್ನಾಡು ನಿವಾಸಿ ಇ.ಪಿ.ಇಬ್ರಾಹಿಂ ಅಲಿಯಾಸ್ ಉಂಬಾಯಿ ಎಂಬಾತ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ. ಆ ಬಳಿಕ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರ ಬಂದ ಇಬ್ರಾಹಿಂ, ನ್ಯಾಯಾಲ ಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡು ನೆರೆಯ ಕೇರಳಕ್ಕೆ ಪಲಾಯನ ಗೈದಿದ್ದ.

ಕೇರಳದ ಕಾಸರಗೋಡುವಿನ ಚಂದೇರಾ ಎಂಬ ಗ್ರಾಮದಲ್ಲಿ ಆರೋಪಿ ಇಬ್ರಾಹಿಂ ನೆಲೆ ಕಂಡುಕೊಂಡಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಕಳೆದ 6 ತಿಂಗಳಿಂದ ಆರೋಪಿ ಇಬ್ರಾಹಿಂ ಅಲಿಯಾಸ್ ಉಂಬಾಯಿಯ ಚಲನ ವಲನಗಳ ಬಗ್ಗೆ ನಿಗಾವಹಿಸಿದ ಪೊಲೀಸರು ಬುಧವಾರ ಸಂಜೆ 6 ಗಂಟೆಗೆ ಕಾಸರಗೋಡುವಿನ ಚಂದೇರ ಗ್ರಾಮದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಇಬ್ರಾಹಿಂ 1996 ರಲ್ಲಿ ಹೊದ್ದೂರು ಸಮೀಪ ಬೀಟೆ ಮರ ಕಳ್ಳ ಸಾಗಾಟ ಮಾಡಲು ಬಳಸಿದ ವಾಹನಕ್ಕೆ ಚಾಲಕನಾಗಿ ಹೋಗಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಇಬ್ರಾಹಿಂ ಕಾಸರ ಗೋಡಿನ ಚಂದೇರಾ ಗ್ರಾಮದಲ್ಲಿ ತರಕಾರಿ ವ್ಯಾಪಾರಿಯ ಸೋಗಿನಲ್ಲಿ ತಲೆ ಮರೆಸಿಕೊಂಡಿದ್ದ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಮಾರ್ಗದರ್ಶನದಲ್ಲಿ, ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ನೇತೃತ್ವದಲ್ಲಿ, ಗ್ರಾಮಾಂತರ ಠಾಣಾ ಪ್ರಭಾರ ವೃತ್ತ ನಿರೀಕ್ಷಕ ಭರತ್, ಠಾಣಾಧಿಕಾರಿ ಚೇತನ್ ಸಿಬ್ಬಂದಿಗಳಾದ ಇಬ್ರಾಹಿಂ, ಸತೀಶ್, ರವಿ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »