ಅರಣ್ಯ ಕಾಯ್ದೆ ಅಪರಾಧ ಪ್ರಕರಣದಲ್ಲಿ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರ ಬಂಧನ
ಕೊಡಗು

ಅರಣ್ಯ ಕಾಯ್ದೆ ಅಪರಾಧ ಪ್ರಕರಣದಲ್ಲಿ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರ ಬಂಧನ

February 1, 2019

ಮಡಿಕೇರಿ: ಅರಣ್ಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಿ.ಜಿ. ರಾಜಪ್ಪನ್, ಕುಂಞÂಕೃಷ್ಣ ಮತ್ತು ಪಿ.ಸಿ. ವಿಜು ಅವರುಗಳು ಬಂಧಿತ ಆರೋಪಿಗಳು. ಮೂಲತಃ ಕೇರಳ ರಾಜ್ಯದ ಅಶೋಕ್ ಚಾಲ್, ಕೊನ್ನೆಕಾಡುವಿನ ಗೋಪಾಲನ್ ಎಂಬುವವರ ಪುತ್ರ ಪಿ.ಜಿ. ರಾಜಪ್ಪನ್ (68), ರಾಮನ್ ಎಂಬುವರ ಪುತ್ರ ಕುಂಞÂಕೃಷ್ಣ (54) ಮತ್ತು ಜೇಕಬ್ ಎಂಬುವರ ಪುತ್ರ ಪಿ.ಸಿ. ವಿಜು (44) ಹಾಗೂ ಮಂಜಚಾಲುವಿನ ದೇವಸ್ಯ ಎಂಬುವರ ಪುತ್ರ ವಿ.ಡಿ. ಜೋಸ್ ಎಂಬುವರ ವಿರುದ್ಧ 2001ರಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕೆ.ಎಫ್. ಕಾಯಿದೆ 1962 ರೆ.ವಿ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಬಂಧಿತ ಆರೋಪಿಗಳು ಕಳೆದ 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ವಿ.ಡಿ. ಜೋಸ್ ಎಂಬುವರು 15-07-2013 ರಂದು ಮೃತಪಟ್ಟಿದ್ದರು.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಡಿ. ಪನ್ನೇಕರ್ ಮತ್ತು ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್. ಸಿದ್ದಯ್ಯ ಮತ್ತು ಭಾಗಮಂಡಲ ಠಾಣಾ ಎಎಸ್‍ಐ ಅಪ್ಪಾಜಿ ಅವರುಗಳು ತನಿಖೆ ಕೈಗೊಂಡಿದ್ದರು.
ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು, ಜ.31 ರಂದು ಕೇರಳ ರಾಜ್ಯದ ಬೊಳ್ಳರಿಕುಂಡು ಎಂಬಲ್ಲಿ ತಲೆಮರೆಸಿ ಕೊಂಡಿದ್ದ ಆರೋಪಿಗಳಾದ ಪಿ.ಜಿ. ರಾಜಪ್ಪನ್, ಕುಂಞÂಕೃಷ್ಣ ಮತ್ತು ಪಿ.ಸಿ. ವಿಜು ಅವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಫೆ.1 ರಂದು ಮಡಿಕೇರಿಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಆರೋಪಿಗಳ ಪೈಕಿ ವಿ.ಡಿ. ಜೋಸ್ ಎಂಬಾತ ಮೃತಪಟ್ಟಿರುವುದರಿಂದ ಈ ಕುರಿತು ಮರಣ ದೃಢೀಕರಣ ಪತ್ರವನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀ ಕ್ಷಕ ಹೆಚ್.ಎನ್.ಸಿದ್ದಯ್ಯ ನೇತೃತ್ವದಲ್ಲಿ ಭಾಗಮಂಡಲ ಠಾಣಾ ಎಎಸ್‍ಐ ಪಿ.ಎ. ಅಪ್ಪಾಜಿ, ಸಿಬ್ಬಂದಿ ಮೋಹನ್, ಚಾಲಕರಾದ ಸುನಿಲ್, ಅಯ್ಯಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಶ್ಲಾಘಿಸಿದ್ದಾರೆ.

Translate »