ಮೈಸೂರು: ಅಲ್ಲಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ, ಇಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಬಿಜೆಪಿ ಪೂರ್ಣ ವಿಫಲವಾಗಿವೆ ಎಂದು ಜೆಡಿಎಸ್ ರಾಜ್ಯಾ ಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಟೀಕಿಸಿದರು.
ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಮೋದಿ ನೀಡಿದ್ದ ಭರವಸೆಗಳೆಲ್ಲಾ ಹುಸಿಯಾಗಿದ್ದು, ನರೇಂದ್ರ ಮೋದಿ ಸುಳ್ಳುಗಾರ ಎಂಬುದು ಅರಿವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯದು ಅತಂತ್ರ ಸ್ಥಿತಿ ಎಂದು ಸಮೀಕ್ಷೆಗಳು ಹೇಳಿವೆ ಎಂದರು.
ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಜೊತೆಗೇ ಮೋದಿ ಅಲೆಯೂ ಕೊಚ್ಚಿ ಹೋಗಿದೆ. ದೇಶಕ್ಕೆ ಮೋದಿ ಒಬ್ಬರೇ ನಾಯಕರಲ್ಲ. ಹೆಚ್.ಡಿ.ದೇವೇಗೌಡ ಸೇರಿ ದಂತೆ ಪ್ರಧಾನಿ ಹುದ್ದೆಗೇರಬಲ್ಲ ಸಾಕಷ್ಟು ನಾಯಕರು ದೇಶದಲ್ಲಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಒಟ್ಟಾಗಿ ಮೋದಿ ವಿರುದ್ಧ ತೃತೀಯ ಶಕ್ತಿಯಾಗಿ ರೂಪು ಗೊಳ್ಳುತ್ತಿವೆ. ಬಿಜೆಪಿಯ ಹಿರಿಯ ನಾಯಕರೇ ಮೋದಿ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ ಎಂದರು.
ನಾಲ್ಕೂವರೆ ವರ್ಷಗಳಿಂದ ಸುಮ್ಮನಿದ್ದ ಮೋದಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮಮಂದಿರದ ವಿಷಯ ಎತ್ತಿದ್ದಾರೆ. ಮೇಲ್ವರ್ಗದವರಿಗೆ ಶೇ.10 ಮೀಸ ಲಾತಿ ಘೋಷಿಸಿದ್ದಾರೆ. ಇದೊಂದು ಸುಳ್ಳಿನ ಕಂತೆ ಎಂದು ಖಂಡಿಸಿದರು. ರಾಜ್ಯದಲ್ಲಿಯೂ ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿಲ್ಲ. ಮೈತ್ರಿ ಸರ್ಕಾರ ಬೀಳಿಸಲು ರೆಸಾರ್ಟ್ ರಾಜಕಾರಣ ಮಾಡಿ ಅರಾಜ ಕತೆ ಉಂಟು ಮಾಡುತ್ತಿದೆ. ಈಗ ಬರದ ಹೆಸರಲ್ಲಿ ಪ್ರವಾಸ ಹೋಗು ತ್ತಿರುವ ಬಿಜೆಪಿಯವರಿಗೆ ಅಧಿಕಾರದ ಬರ ಬಂದಿದೆ ಎಂದು ಅಣಕವಾಡಿದರು.
ರಾಜ್ಯಕ್ಕೆ ಏನೇನು ಕೇಳಿದ್ದೀರಿ?: ರಾಜ್ಯದಲ್ಲಿ ಸರ್ಕಾರ ಬೀಳಿಸುವುದಷ್ಟೇ ಒಂದಂಶದ ಕಾರ್ಯ ಕ್ರಮದಂತೆ ಹೊರಟಿರುವ ಬಿ.ಎಸ್.ಯಡಿಯೂರಪ್ಪ ನವರೇ, ಫೆ.1ರಂದು ಮೋದಿಯವರು ಮಂಡಿಸಲಿರುವ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಏನೇನು ಕೇಳಿದ್ದೀರಿ? ಇದನ್ನು ಬಾಯಿ ಬಿಟ್ಟಿದ್ದೀರಾ? ಬಜೆಟ್‍ಗೆ ಕೇವಲ 3-4 ದಿನ ಬಾಕಿ ಇದೆ. ಈಗಲೂ ಬಜೆಟ್ ಬಗ್ಗೆ ಪ್ರಸ್ತಾಪವಿಲ್ಲ ಎಂದು ಅವರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್, ಉಪ ಮೇಯರ್ ಶಫಿ ಅಹಮದ್, ನಗರಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್ ಆರ್. ಲಿಂಗಪ್ಪ, ಮುಖಂಡರಾದ ಆರ್.ರಾಜಣ್ಣ, ಆರ್. ಸೋಮಸುಂದರ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಅಬ್ದುಲ್ಲಾ, ಪ್ರಕಾಶ್ ಪ್ರಿಯದರ್ಶಿನಿ, ನರ ಸಿಂಹಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.