ಕಡೆಗೂ ಫೆ.28ಕ್ಕೆ ಪಾಲಿಕೆ ಬಜೆಟ್ ಸಭೆ ನಿಗದಿ
ಮೈಸೂರು

ಕಡೆಗೂ ಫೆ.28ಕ್ಕೆ ಪಾಲಿಕೆ ಬಜೆಟ್ ಸಭೆ ನಿಗದಿ

February 22, 2019

ಅಷ್ಟರೊಳಗೆ ಲೋಕಸಭೆ
ಚುನಾವಣೆ ಘೋಷಣೆಯಾದರೆ ಆಯವ್ಯಯ ಮಂಡನೆ ರದ್ದು
ಮೈಸೂರು: ಪದೇ ಪದೆ ಮುಂದೂಡುತ್ತಾ ಬಂದಿದ್ದ 2019-20ನೇ ಸಾಲಿನ ಬಜೆಟ್ ಸಭೆಯನ್ನು ಕಡೆಗೂ ಫೆಬ್ರವರಿ 28ಕ್ಕೆ ಮೈಸೂರು ಮಹಾನಗರ ಪಾಲಿಕೆ ನಿಗದಿಗೊಳಿಸಿದೆ. ಇಂದು ಮಧ್ಯಾಹ್ನ ಬಜೆಟ್ ಮಂಡನಾ ದಿನಾಂಕವನ್ನು ಫೆಬ್ರವರಿ 28ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಡೆಸಲು ನಿಗದಿಗೊಳಿಸಲಾಗಿದ್ದು, ಎಲ್ಲಾ 65 ಮಂದಿ ಕಾರ್ಪೊರೇಟರ್ ಗಳಿಗೂ ಸಭೆಯ ತಿಳುವಳಿಕೆ ನೋಟೀಸ್ ನೀಡಲಾಗುತ್ತಿದೆ.

ಅಂದು ಮೇಯರ್ ಪುಷ್ಪಲತಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಸುನೀಲ್ ಅವರು 2019-20ನೇ ಸಾಲಿನ ಮೈಸೂರು ಮಹಾನಗರ ಪಾಲಿಕೆ ಆಯವ್ಯಯ ವರದಿಯನ್ನು ಮಂಡಿಸುವರು. ಸ್ವಚ್ಛತೆ, ಕುಡಿಯುವ ನೀರು, ನೈರ್ಮಲ್ಯ, ಪಾರ್ಕುಗಳ ಅಭಿವೃದ್ಧಿ, ಬಿಡಾಡಿ ದನಗಳು, ಕುದುರೆಗಳಿಗೆ ಆಶ್ರಯ ತಾಣ ಸೇರಿದಂತೆ ಹಲವು ಯೋಜನೆಗಳ ಪ್ರಸ್ತಾಪಿಸಲಿದ್ದು, ಹೊಸ ಹಾಗೂ ಮಹತ್ವದ ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಜೋಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಫೆಬ್ರವರಿ 23ಕ್ಕೆ ನಿಗದಿಯಾಗಿದ್ದ ಸಭೆಯನ್ನು ಸದಸ್ಯರಿಗೆ ಕಡಿಮೆ ಅವಧಿಯಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಫೆಬ್ರವರಿ 26ಕ್ಕೆ ಮುಂದೂಡಲಾಗಿತ್ತು. ಫೆಬ್ರವರಿ 27ರಂದು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗಬಹುದೆಂಬ ಆತಂಕ ಇತ್ತಾದರೂ, ಚುನಾವಣಾ ಅಧಿಸೂಚನೆ ಮಾರ್ಚ್ 5ರ ನಂತರ ಪ್ರಕಟವಾಗುತ್ತದೆ ಎಂಬ ಮಾಹಿತಿ ಮೇರೆಗೆ ಇಂದು ಪಾಲಿಕೆ ಆಯವ್ಯಯ ಮಂಡನೆ ಸಭೆಯನ್ನು ಫೆಬ್ರವರಿ 28ಕ್ಕೆ ಅಂತಿಮಗೊಳಿಸಲಾಯಿತು ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಒಂದು ವೇಳೆ ಫೆಬ್ರವರಿ 27ಕ್ಕೆ ಚುನಾವಣಾ ವೇಳಾಪಟ್ಟಿ ಘೋಷಣೆಯಾದಲ್ಲಿ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಫೆಬ್ರವರಿ 28ಕ್ಕೆ ನಿಗದಿ ಮಾಡಿರುವ ನಗರಪಾಲಿಕೆ ಬಜೆಟ್ ಸಭೆ ರದ್ದಾಗಲಿದೆ.

Translate »