ನೇಣು ಹಾಕಿಕೊಂಡು ಸಿಎಆರ್ ಕಾನ್ಸ್‍ಟೇಬಲ್ ಆತ್ಮಹತ್ಯೆ
ಮೈಸೂರು

ನೇಣು ಹಾಕಿಕೊಂಡು ಸಿಎಆರ್ ಕಾನ್ಸ್‍ಟೇಬಲ್ ಆತ್ಮಹತ್ಯೆ

January 10, 2019

ಮೈಸೂರು: ನೇಣು ಹಾಕಿಕೊಂಡು ಮೈಸೂರು ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕಾನ್ಸ್‍ಟೇಬಲ್‍ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಯೋತಿನಗರ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮೂಲತಃ ತಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದವರಾದ ಮಹದೇವು(46) ಆತ್ಮಹತ್ಯೆಗೆ ಶರಣಾದವರು. ಮೈಸೂರಿನ ಸಿಎಆರ್‍ನಲ್ಲಿ ಪೊಲೀಸ್ ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಕೆಲ ತಿಂಗಳಿಂದ ಅನಾರೋಗ್ಯ ದಿಂದ ನರಳುತ್ತಿದ್ದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಮನೆಯವರೆಲ್ಲರೂ ಊಟ ಮಾಡಿ ಮಲಗಿದ ಮೇಲೆ ಮನೆಯ ಹಿಂಭಾಗದ ಶೆಡ್‍ನಲ್ಲಿ ನೇಣು ಹಾಕಿಕೊಂಡು ಮಹದೇವು ಆತ್ಮಹತ್ಯೆ ಮಾಡಿಕೊಂಡಿ ರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ದೇಹವನ್ನು ಒಪ್ಪಿಸಿದರು. ಮೃತರು ಪತ್ನಿ ಶಿವಮ್ಮ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Translate »