ಕಲಾ ಕೌಶಲ್ಯದಲ್ಲಿ ಅರಳಿದ ಸಾಂಪ್ರದಾಯಿಕ ವೈಭವ
ಮೈಸೂರು

ಕಲಾ ಕೌಶಲ್ಯದಲ್ಲಿ ಅರಳಿದ ಸಾಂಪ್ರದಾಯಿಕ ವೈಭವ

January 14, 2019

ಮೈಸೂರು: ಬಹುಬಗೆಯ ಬಣ್ಣ ಗಳ ಚಿತ್ತಾರ… ಎತ್ತ ನೋಡಿದರೂ ಕಲಾ ತ್ಮಕತೆಯ ವೈಯ್ಯಾರ… ಮಾದಕ ಚೆಲುವೆ ನೋಟ-ಮೈ ಮಾಟ… ಐತಿಹಾಸಿಕ ಸ್ಮಾರಕಗಳ ಸೊಗಸಾದ ದರ್ಶನ… ನಿಸರ್ಗದ ರಮಣೀಯ ತಾಣಗಳ ಮೆರುಗು… ಕಲಾ ಕೌಶಲ್ಯದಲ್ಲಿ ಅರಳಿದ ನಾಡಿನ ಸಾಂಪ್ರದಾಯಿಕ ವೈಭವ…
ಇಂತಹ ಬಗೆಬಗೆಯ ಚಿತ್ರ ಕಲಾಕೃತಿ ಗಳ ಮನಮೋಹಕ ತಾಣವಾಗಿದೆ ಮೈಸೂರಿನ ರಂಗಾಯಣದ ಆವರಣ. ಹೌದು, ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಇಲ್ಲಿನ ಅಂಗಳ ವೀಗ ಕಲೆಯ ಕಲರವದಲ್ಲಿ ಕಂಗೊಳಿಸುತ್ತಿದೆ.

ಇದೇ ಮೊದಲ ಬಾರಿಗೆ ಕಲಾ ಮೇಳ ಪರಿಕಲ್ಪನೆಯಲ್ಲಿ ಬಹುರೂಪಿ ನಾಟಕೋ ತ್ಸವ ಅಂಗವಾಗಿ ಇಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟವು ಕಲಾರಸಿಕರನ್ನು ಆಕರ್ಷಿಸಿಸುತ್ತಿದೆ. ವೈವಿ ಧ್ಯತೆಯೊಂದಿಗೆ ಭೂರಮೆಯ ಮಡಿಲಲ್ಲಿ ನೆಲೆನಿಂತ ನಿಸರ್ಗದ ಸೊಬಗು ಇಲ್ಲಿನ ಚಿತ್ರಕಲೆಯಲ್ಲಿ ಮೈದೆಳೆದಿದ್ದು, ಹಂಪಿಯ ಉಗ್ರ ನರಸಿಂಹ ವಿಗ್ರಹ ಸೇರಿದಂತೆ ಹಲವು ಐತಿಹಾಸಿಕ ವಿಗ್ರಹಗಳು ಕಲೆಯಾಗಿ ಮೂಡಿಬಂದಿವೆ.

ಲ್ಯಾಂಡ್‍ಸ್ಕೇಪ್ ಚಿತ್ರಕಲೆ, ಸಂಪ್ರದಾ ಯಿಕ, ಸೃಜನಾತ್ಮಕ, ಸಮಕಾಲೀನ ಹಾಗೂ ಅಮೂರ್ತ ಚಿತ್ರಕಲೆಗಳ ಕಲಾಕೃತಿಗಳು ನಾನಾ ಬಗೆಯ ಅಳತೆಗಳಲ್ಲಿ ಶೃಂಗಾರ ಗೊಂಡು ಕಲಾ ಪೋಷಕರನ್ನು ಕಾಯು ತ್ತಿವೆ. ಮೈಸೂರಿನ ನುರಿತ 20ಕ್ಕೂ ಹೆಚ್ಚು ಕಲಾವಿದರ ಕೈಚಳಕದಲ್ಲಿ ಅರಳಿದ ಕಲಾ ಕೃತಿಗಳು ಬಣ್ಣದೋಕುಳಿಯಲ್ಲಿ ಮಿಂದೆದ್ದು ಕಣ್ಮನ ಸೆಳೆಯುತ್ತಿವೆ.

`ಕಲಾ ಮೇಳದಲ್ಲಿ ಪ್ರದರ್ಶನಗೊಂಡಿ ರುವ ಚಿತ್ರ ಕಲಾಕೃತಿಗಳು ಕಲಾರಸಿಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಕಲಾಕೃತಿಗಳ ಖರೀದಿಗೆ ಕಲಾಪೋಷಕರು ಮುಂದಾಗಿದ್ದಾರೆ. ಇಲ್ಲಿ 5 ಸಾವಿರ ರೂ. ನಿಂದ 5 ಲಕ್ಷ ರೂ.ವರೆಗೆ ಬೆಲೆಬಾಳುವ ಕಲಾಕೃತಿಗಳಿದ್ದು, 1ಘಿ1 ಅಡಿಯಿಂದ 6ಘಿ4 ಅಡಿಯ ಅಳತೆಯಲ್ಲಿ ಕಲಾಕೃತಿಗಳಿಗೆ ಕಲಾ ಸ್ಪರ್ಶ ನೀಡಲಾಗಿದೆ. ಜ.18ರವರೆಗೆ ಬೆಳಿಗ್ಗೆ 10ರಿಂದ ಸಂಜೆ 10ರವರೆಗೆ ಸಾರ್ವಜನಿಕರು ಕಲಾ ಮೇಳಕ್ಕೆ ಭೇಟಿ ನೀಡಿ ಇಷ್ಟವಾದ ಕಲಾಕೃತಿಯನ್ನು ಕೊಂಡುಕೊಳ್ಳಬಹುದು’ ಎಂದು ಕಲಾ ಮೇಳದ ಸಂಚಾಲಕರೂ ಆದ ಮೈಸೂ ರಿನ ಕಲಾನಿಕೇತನ ಸ್ಕೂಲ್ ಆಫ್ ಆಟ್ರ್ಸ್‍ನ ಪ್ರಾಂಶುಪಾಲ ಮಹದೇವಶೆಟ್ಟಿ ತಿಳಿಸಿದರು.

ಅನೇಕ ಕಲಾವಿದರ ಅಮೂರ್ತ ಚಿತ್ರ ಕಲಾಕೃತಿಗಳು ನೋಡುಗರಲ್ಲಿ ಬಹು ಬಗೆಯ ಭಾವ ಅರಳಿಸುತ್ತಿದ್ದು, ಕುಂಚ ದಿಂದ ಚಿಮ್ಮಿದ ವೈವಿಧ್ಯ ಬಣ್ಣಗಳು ಕಲಾ ವಿದನ ಭಾವ ಕಣಜದಲ್ಲಿ ಹುದುಗಿದ್ದ ಕಲಾನೈಪುಣ್ಯತೆಯ ಸಮ್ಮಿಲನದೊಂದಿಗೆ ಅನಾವರಣಗೊಂಡು ನೋಡುಗರಲ್ಲಿ ಪುಳಕ ಉಂಟು ಮಾಡುತ್ತಿವೆ.

ಕಲಾವಿದ ಟಿ.ಎಸ್.ಮುರುಳಿ ಅವರ ಕುಂಚದಲ್ಲಿ ಕಳೆಗಟ್ಟಿದ ಲ್ಯಾಂಡ್‍ಸ್ಕೇಪ್ ಚಿತ್ರಕಲಾಕೃತಿಗಳು ನಾಡಿನ ವಿವಿಧ ತಾಣ ಗಳ ಪ್ರತಿಬಿಂಬವನ್ನು ಇಲ್ಲಿ ಮೂಡಿಸಿವೆ. ವರುಣ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲೆ ಶಿಕ್ಷಕರಾದ ಮುರುಳಿ ಅವರು ಡಾಟ್ (ಚುಕ್ಕಿ) ಚಿತ್ರ ಕಲೆ, ಮಸಿ ಬಳಕೆಯಿಂದ ಚಿತ್ರಕಲೆ ಮೂಡಿಸುವ ಕಪ್ಪು ಬಿಳುಪು ಶೈಲಿಯನ್ನು ಕರಗತ ಮಾಡಿ ಕೊಂಡಿದ್ದಾರೆ. ಇಲ್ಲಿನ ಪ್ರದರ್ಶನದಲ್ಲೂ ಅವರ ಚುಕ್ಕಿ ಚಿತ್ರ ಕಲೆಯಲ್ಲಿ ವ್ಯಕ್ತಿ ಯೊಬ್ಬರ ಭಾವಚಿತ್ರ, ನಾಯಿ ಸೇರಿದಂತೆ ನಾನಾ ಚಿತ್ರಗಳು ಕೌತುಕ ಕೆರಳಿಸುತ್ತಿವೆ.

ಕಲಾವಿದನ ಕಣ್ಣಲ್ಲಿ ಬೃಹತ್
ಬಂಡೆಗಳ ಚಿತ್ತಾರ…
ಸ್ಥಳದಲ್ಲೇ ಕುಳಿತು ಚಿತ್ರಕಲೆ ಮಾಡಿದ ಹಂಪಿಯ ಅಕ್ಕ-ತಂಗಿ ಬಂಡೆ ಸೇರಿದಂತೆ ತಮ್ಮ ನಾನಾ ಲ್ಯಾಂಡ್‍ಸ್ಕೇಪ್ ಚಿತ್ರಗಳನ್ನು ಕಲಾವಿದ ಟಿ.ಎಸ್.ಮುರುಳಿ ಪ್ರದರ್ಶಿಸಿದ್ದಾರೆ.
ಅಕ್ಕ-ತಂಗಿ ಬಂಡೆಯ ಬಗ್ಗೆ ವಿವರಿಸಿದ ಮುರುಳಿ ಅವರು ಕಳೆದ 6 ವರ್ಷಗಳ ಹಿಂದೆ ಹಂಪಿಯ ಅಕ್ಕ-ತಂಗಿ ಬಂಡೆ ನೈಸರ್ಗಿಕ ಏರುಪೇರುಗಳಿಂದ ಒಡೆದು ಹೋಗಿದೆ. ಈಗ ಅಲ್ಲಿ ನೋಡಿದರೆ ಆ ಜೋಡಿ ಬಂಡೆ ಗಳು ಮೊದಲಿನಂತೆ ಕಾಣುವುದಿಲ್ಲ. ಹಂಪಿ ಮಾರ್ಗ ದಲ್ಲಿದ್ದ ಈ ಬಂಡೆಗಳು ಒಂದಕ್ಕೊಂದು ಆಸರೆಯಾಗಿ ನಿಂತಿದ್ದವು. ಇದೀಗ ಸೀಳಿಕೊಂಡು ಬೇರೆಯಾಗಿವೆ’ ಎಂದರು. ಮಂತ್ರಾಲಯದ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಬಳಿಯವಿಮಾನ ಬಂಡೆ’ಯ ನೈಜ ನೋಟವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವ ಮುರುಳಿ, ಪ್ರಕೃತಿಯ ವಿಸ್ಮಯತೆಯಲ್ಲಿ ಮೂಡಿದ ಕಲಾ ವೈಭವಕ್ಕೆ ಚಿತ್ತಾರದ ಸ್ಪರ್ಶ ನೀಡಿದ್ದಾರೆ.

ಮೈಸೂರು ಸಾಂಪ್ರದಾಯಿಕ ಚಿತ್ರಕಲೆ…
ಹಿಂದೂ ದೇವಾನುದೇವತೆಗಳ ಚಿತ್ರಕಲಾಕೃತಿಗಳು ಮೈಸೂರು ಸಾಂಪ್ರ ದಾಯಿಕ ಶೈಲಿಯಲ್ಲಿ ಇಲ್ಲಿ ಅನಾವರಣಗೊಂಡಿವೆ. ಕಲಾವಿದ ಆರ್.ಶಿವ ಕುಮಾರ್ ಅವರ ಕೈಚಳಕದಲ್ಲಿ ಚಾಮುಂಡೇಶ್ವರಿ, ವಿಷ್ಣು, ಲಕ್ಷ್ಮಿ, ಸರಸ್ವತಿ, ಕೃಷ್ಣ ಸೇರಿದಂತೆ ದೇವರುಗಳ ಚಿತ್ರಗಳು ಈ ಶೈಲಿಯಲ್ಲಿ ರೂಪುತಾಳಿವೆ. ಭಕ್ತಿಭಾವ ಮೂಡಿಸುವ ಈ ಕಲಾಕೃತಿಗಳು ಆಸ್ತಿಕರನ್ನು ತನ್ನತ್ತ ಸೆಳೆಯುತ್ತಿವೆ.

ಎಂ.ಬಿ.ಪವನ್‍ಮೂರ್ತಿ

Translate »