ಕೇಳುಗರನ್ನು ರಂಜಿಸಿದ ಸರ್ವಜ್ಞನ ತ್ರಿಪದಿಯ ವಾಚನ, ಗಾಯನ, ವ್ಯಾಖ್ಯಾನ ಕಾರ್ಯಕ್ರಮ
ಮೈಸೂರು

ಕೇಳುಗರನ್ನು ರಂಜಿಸಿದ ಸರ್ವಜ್ಞನ ತ್ರಿಪದಿಯ ವಾಚನ, ಗಾಯನ, ವ್ಯಾಖ್ಯಾನ ಕಾರ್ಯಕ್ರಮ

June 15, 2018

ಮೈಸೂರು:  ಮೈಸೂರು ಆಕಾಶವಾಣಿಯಲ್ಲಿ ಒಂದು ವರ್ಷದಿಂದ ಪ್ರತಿದಿನ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಸರ್ವಜ್ಞನ ತ್ರಿಪದಿಗಳನ್ನು ಒಳಗೊಂಡ `ಅರಿವಿನ ಶಿಖರ’ ವಾಚನ, ಗಾಯನ, ವ್ಯಾಖ್ಯಾನ ಸರಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಗುರುವಾರ ಆಕಾಶವಾಣಿಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ನಡೆಯಿತು.

ಆಕಾಶವಾಣಿ ಮೈಸೂರು, ಸಮುದ್ಯತಾ ಶ್ರೋತೃ ಬಳಗ, ದೀಪ್ತಿ ಸಾಂಸ್ಕøತಿಕ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳು ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಗಾಯಕ ನಿತಿನ್ ರಾಜಾರಾಮಶಾಸ್ತ್ರಿ ಅವರು ಕಾವ್ಯಾನಂದರ ರಚನೆ `ಕನ್ನಡಿಗ ತಾನೆಂಬ ಸತ್ಯವನು ಅರಿತವಗೆ…, ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.

ಜಿ.ಪುಷ್ಪಲತಾ ಅವರ ವಚನ ಗಾಯನಕ್ಕೆ ಪ್ರೊ.ಮೈಸೂರು ಕೃಷ್ಣಮೂರ್ತಿ ವ್ಯಾಖ್ಯಾನ ಮಾಡಿದರು. ಹಂಸಿನಿ ಎಸ್.ಕುಮಾರ್ ಗಾಯನಕ್ಕೆ ಕೆ.ಎಲ್.ಪದ್ಮಿನಿ ಹೆಗಡೆ, ನಿತಿನ್ ರಾಜಾರಾಮಶಾಸ್ತ್ರಿ ವಚನ ಗಾಯನಕ್ಕೆ ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಹಾಗೂ ಪಿ.ಸುರಭಿ ಅವರ ವಚನ ಗಾಯನಕ್ಕೆ ಡಾ.ಪ್ರದೀಪ್‍ಕುಮಾರ್ ಹೆಬ್ರಿ ವ್ಯಾಖ್ಯಾನ ನೀಡಿದರು.

ಈ ಮಧ್ಯೆ ಒಂದು ವರ್ಷದ ಅವಧಿಯಲ್ಲಿ ಅರಿವಿನ ಶಿಖರ ಕಾರ್ಯಕ್ರಮದಲ್ಲಿ ವ್ಯಾಖ್ಯಾನ ಮಾಡಿದ 17 ಮಂದಿ ವಿದ್ವಾಂಸರು ಹಾಗೂ ಗಾಯನ ಮಾಡಿದ 15 ಮಂದಿ ಗಾಯಕ, ಗಾಯಕಿಯರನ್ನು ಸನ್ಮಾನಿಸಲಾಯಿತು. ವ್ಯಾಖ್ಯಾನಕಾರರಾದ ಪ್ರೊ.ಸಿ.ನಾಗಣ್ಣ, ಬಿ.ವಿ.ವಸಂತಕುಮಾರ್, ಡಾ.ಹೆಚ್.ಎಂ.ಕಲಾಶ್ರೀ, ಸಿ.ವಿಶ್ವನಾಥ್, ಪಿ.ಎಸ್.ರಂಜಿನಿ, ಶೋತೃಗಳಾದ ವಿ.ಗೋವಿಂದಾಚಾರಿ, ವೀಣಾ ಶ್ರೀಕಾಂತ್, ರಮಾ ಅಜಿತ್, ಪುಷ್ಪಲತಾ ಫಣಿರಾಜ್ ಗಾಯಕ ಪುತ್ತೂರು ಕುಮಾರಸ್ವಾಮಿ, ಗಾಯಕಿ ರೋಹಿಣಿ ಸುಧಾಮ್, ದೀಪಿಕಾ ಪಾಂಡುರಂಗಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸರ್ವಜ್ಞನ ವಚನಗಳನ್ನು ಆಕಾಶವಾಣಿ ಮೂಲಕ ಸಾವಿರಾರು ಶ್ರೋತೃಗಳಿಗೆ ತಲುಪಿಸುವ ಕೆಲಸ ಸಂತಸ ತಂದಿದೆ. ಜನಪದ ಕಾವ್ಯದ ಪ್ರಭಾವ ಸರ್ವಜ್ಞನ ಮೇಲೆ ಆಗಿದೆ. ಈ ಕಾರ್ಯಕ್ರಮದ ಗಾಯನ ಮತ್ತು ವ್ಯಾಖ್ಯಾನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕೆಲಸ ಆಗಬೇಕು. ಅದೇ ರೀತಿ ಪಂಪ, ರನ್ನ, ನಾಗವರ್ಮ ಇನ್ನಿತರರ ಹಳೆ ಗಳನ್ನಡ ಕಾವ್ಯವನ್ನು ಗಾಯನ ಮತ್ತು ವ್ಯಾಖ್ಯಾನದ ಮೂಲಕ ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಆಕಾಶವಾಣಿ ಮಾಡಬೇಕು. – ಡಾ.ರಾಮೇಗೌಡ(ರಾಗೌ), ಹಿರಿಯ ಸಾಹಿತಿ.

ಕಾರ್ಯಕ್ರಮಕ್ಕೂ ಮುನ್ನ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ ಅವರಿಗೆ ಮೌನಾಂಜಲಿ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅತಿಥಿಯಾಗಿದ್ದರು. ಆಕಾಶವಾಣಿ ಸಹಾಯಕ ನಿರ್ದೇಶಕ ಹೆಚ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ನಿರ್ವಾಹಕ ಡಾ.ಮೈಸೂರು ಉಮೇಶ್, ದೀಪ್ತಿ ಸಾಂಸ್ಕøತಿಕ ವೇದಿಕೆ ಮುಖ್ಯಸ್ಥ ಕಾಳಿಹುಂಡಿ ಶಿವಕುಮಾರ್, ಸಮುದ್ಯತಾ ಶ್ರೋತೃ ಬಳಗದ ಭಗವತಿ ಇನ್ನಿತರರು ಉಪಸ್ಥಿತರಿದ್ದರು.

‘ಅರಿವಿನ ಶಿಖರ’ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸಹಸ್ರಾರು ಕೇಳುಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆಯೂ ಪದ ಸಂಸ್ಕೃತಿ ಎಂಬ ವಿನೂತನ ಕಾರ್ಯಕ್ರಮದ ಜೊತೆಗೆ ಸ್ತ್ರೀಶಕ್ತಿ ಸಂಘಗಳ ಪ್ರಮುಖರಿಂದ ಅನುಭವ ಹಂಚಿಕೆ, ಕೃಷಿ ಬೆಳಗು ಕಾರ್ಯಕ್ರಮದಲ್ಲಿ ವಿವಿಧ ಬೆಳೆಗಳ ಸಾಧಕ ರೈತರ ಅನುಭವ ಹಂಚಿಕೊಳ್ಳುವ ಕಾರ್ಯಕ್ರಮ ಪ್ರಸಾರ ಮಾಡುವ ಸಿದ್ಧತೆ ನಡೆಸಿದ್ದೇವೆ. – ಹೆಚ್.ಶ್ರೀನಿವಾಸ್, ಸಹಾಯಕ ನಿರ್ದೇಶಕ, ಆಕಾಶವಾಣಿ ಮೈಸೂರು.

Translate »