ಎಚ್‍ಡಿಕೆಯ ವಿಷಕಂಠ ಹೇಳಿಕೆ ಕಾಂಗ್ರೆಸ್‍ಗೆ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್
ಮಂಡ್ಯ

ಎಚ್‍ಡಿಕೆಯ ವಿಷಕಂಠ ಹೇಳಿಕೆ ಕಾಂಗ್ರೆಸ್‍ಗೆ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

July 16, 2018

ಮಂಡ್ಯ:  ಜೆಡಿಎಸ್ ಅಭಿನಂದನಾ ವೇದಿಕೆಯಲ್ಲಿ ಸಿಎಂ ಕಣ್ಣೀರಿಟ್ಟು, ವಿಷ ಕಂಠನಾಗಿದ್ದೇನೆ ಎಂದಿರುವ ಎಚ್‍ಡಿಕೆಯ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಠಪಡಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅವರ ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿ ಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಏನೇ ಪಕ್ಷದ ವೇದಿಕೆಯಲ್ಲಿ ಹೇಳಿದ್ದ ಮಾತುಗಳು ಕಾಂಗ್ರೆಸ್‍ಗೆ ಅನ್ವಯಿಸಲ್ಲ. ನಾವು ಜೆಡಿಎಸ್‍ಗೆ ನಮ್ಮ ಪೂರ್ಣ ಸಹಕಾರ ನೀಡುತ್ತಿದ್ದೇವೆ. ಸಿಎಂ ಯಾವ ಕಾರಣಕ್ಕೆ ಕಣ್ಣೀರಿಟ್ಟಿದಾರೋ ಗೊತ್ತಿಲ್ಲ. ಈ ಬಗ್ಗೆ ಸಿಎಂ ಅವರನ್ನೇ ಕೇಳಬೇಕು ಎಂದು ಅವರು ಹೇಳಿದರು.

ಅನ್ಯಾಯವಾಗಲು ಬಿಡಲ್ಲ; ನಗರದ ಬಂದೀಗೌಡ ಬಡಾವಣೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ನಾಯ ಕರು ಮುಖ್ಯಮಂತ್ರಿಯಾಗಿರಬಹುದು. ಉಪಮುಖ್ಯಮಂತ್ರಿ ಕಾಂಗ್ರೆಸ್‍ನವರಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡಲ್ಲ, ಒಂದು ವೇಳೆ ಅಂತಹದ್ದೇನಾದರೂ ತೊಂದರೆಯಾದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ನಾಯಕತ್ವ ದಲ್ಲಿ ಹೋರಾಡುವುದಾಗಿ ತಿಳಿಸಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿ ರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಸಮನ್ವ ಯತೆಯಿಂದ ಪಕ್ಷಕ್ಕೆ ಹೊಸ ಶಕ್ತಿ ತುಂಬುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸ ನಾಯಕತ್ವ ಬೆಳೆಸುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಅನೇಕ ಮುಖಂಡರಿದ್ದಾರೆ. ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್, ರಮೇಶ್ ಬಂಡಿಸಿದ್ದೇಗೌಡ ಅವರಂತಹ ಪ್ರಮುಖರಿದ್ದಾರೆ. ಅವರೆಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ ಜಿಲ್ಲೆಯಲ್ಲಿ ಮುಂದೇನು ಮಾಡಬೇಕೆಂಬ ಬಗ್ಗೆ ಆಲೋಚಿಸಬೇಕು. ಮೊದಲು ನಮ್ಮಲ್ಲಿ ಸಮನ್ವಯ ಸಾಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಮ್ಮಿಶ್ರ ಸರ್ಕಾರವಿರುವ ಪರಿಸ್ಥಿತಿಯಲ್ಲಿ ಅಸಹನೆಯನ್ನು ಸಹಿಸಿಕೊಂಡು ಪಕ್ಷವನ್ನು ಸಂಘಟಿಸಬೇಕಿದೆ. ಪಕ್ಷ ಅಧಿಕಾರ ಇದ್ದಾಗ ಕಚ್ಚಾಡುವುದು ಸಾಮಾನ್ಯ. ಆದರೆ, ಮೈತ್ರಿ ಸರ್ಕಾರದೊಳಗೆ ಇದ್ದುಕೊಂಡು ವಿರೋಧ ಗಳನ್ನು ಎದುರಿಸುವ ಸಮಯದಲ್ಲಿ ಎಲ್ಲರೂ ವೈಮನಸ್ಸನ್ನು ಮರೆತು ಒಟ್ಟಾಗಬೇಕಿದೆ.

ಲೋಕಸಭೆ ಚುನಾವಣೆ ಎದುರಿಸುವ ಸಮಯದಲ್ಲಿ ನಾವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ನಮ್ಮ ನೇರ ಎದು ರಾಳಿಯಾಗಿತ್ತು. ಮೈಸೂರು, ಮಂಡ್ಯ, ರಾಮ ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷದೊಂದಿಗೆ ಸೆಣಸಾಟ ನಡೆಸಿದ್ದೆವು. ಚುನಾವಣಾ ನಂತರದಲ್ಲಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿರುವುದರಿಂದ ಪಕ್ಷದೊಳಗೆ ಒಗ್ಗಟ್ಟು ಕಾಯ್ದುಕೊಳ್ಳ ಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ಸಂಪಂಗಿ, ಮಾಜಿ ಸಂಸದ ಜಿ.ಮಾದೇ ಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್, ನಗರ ಸಭೆ ಅಧ್ಯಕ್ಷೆ ಷಹಜಹಾನ್, ಎಪಿಎಂಸಿ ಅಧ್ಯಕ್ಷೆ ಪಲ್ಲವಿ, ಮುಖಂಡ ರವಿಕುಮಾರ್ ಗಣಿಗ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ, ಖಜಾಂಚಿ ಅಮರಾವತಿ ಚಂದ್ರ ಶೇಖರ್, ಬೇಲೂರು ಸೋಮಶೇಖರ್, ಸಂಪತ್‍ಕುಮಾರ್ ಸೇರಿದಂತೆ ಇತರರಿದ್ದರು.

ವರಿಷ್ಠರ ಸಮ್ಮುಖದಲ್ಲೇ ಬಣಗಳ ಭಿನ್ನಮತ ಸ್ಫೋಟ

ಮಂಡ್ಯ ಜಿಲ್ಲಾ ಕಾಂಗ್ರೆಸ್‍ನಲ್ಲಿ ಚುನಾವಣೆ ಮುಗಿದರೂ ಇನ್ನೂ ಗುಂಪುಗಾರಿಕೆ ಹೋಗಿಲ್ಲ, ಬಹಿರಂಗ ಸಭೆಯಲ್ಲೇ ಪರಸ್ಪರ ಆರೋಪ ಮಾಡುವ, ಕಿತ್ತಾಡುವ ಕಾರ್ಯಕರ್ತರನ್ನು ಯಾವ ನಾಯಕರೂ ಹದ್ದುಬಸ್ತಿಗೆ ತರುವ ಪ್ರಯತ್ನ ಮಾಡೊಲ್ಲ ಎಂಬ ಹಿರಿಯ ಕಾಂಗ್ರೆಸ್ಸಿಗರ ಅನಿಸಿಕೆಗೆ ಇಂದಿನ ಸಭೆಯೂ ನಿದರ್ಶನವಾಗಿತ್ತು.

ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲೇ ಕಾರ್ಯಕರ್ತರು ವಾಗ್ವಾದಕ್ಕಿಳಿದು ಮುಜುಗರ ಉಂಟು ಮಾಡಿದ ಘಟನೆ ಜರುಗಿತು. ಸಭೆಯನ್ನುದ್ದೇಶಿಸಿ ದಿನೇಶ್ ಗುಂಡೂರಾವ್ ಅವರು ಮಾತನಾಡುತ್ತಿದ್ದ ವೇಳೆ, ಕಾರ್ಯಕರ್ತನೊಬ್ಬ ಎದ್ದು ನಿಂತು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್ ಚುನಾವಣೆ ಯಲ್ಲಿ ಸೋತ ನಂತರ ಕಾರ್ಯಕರ್ತರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಿಲ್ಲ. ಚುನಾವಣೆ ವೇಳೆ ಸರಿಯಾಗಿ ಕೆಲಸವನ್ನೂ ಮಾಡಲಿಲ್ಲ. ಇವರನ್ನ ನಂಬಿ ಊರಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಬಹಿರಂಗವಾಗಿ ಅಸಮಾಧಾನ ಪ್ರದರ್ಶಿಸಿದರು. ಇದಕ್ಕೆ ಸಭೆಯಲ್ಲಿ ಗಣಿಗ ರವಿಕುಮಾರ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದಾಗ, ಎರಡೂ ಗುಂಪಿನ ನಡುವೆ ವಾಗ್ವಾದ, ಮಾತಿನ ಚಕಮಕಿ ಆರಂಭವಾಯಿತು. ಇದರಿಂದ ವಿಚಲಿತರಾದ ದಿನೇಶ್ ಗುಂಡೂರಾವ್ ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರನಡೆದರು.

Translate »