ಮೈಸೂರು: ನೂರು ವರ್ಷ ಕಳೆದರೂ ಸ್ತ್ರೀ ಸಮಾನತೆ ಸಾಧ್ಯ ವಾಗಿಲ್ಲ. ಇಂದಿಗೂ ಶೋಷಣೆ, ದಬ್ಬಾಳಿಕೆ, ದೌರ್ಜನ್ಯದಂತಹ ಸಮಸ್ಯೆಗಳ ಸುಳಿಯಲ್ಲಿ ಮಹಿಳೆಯರು ಸಿಲುಕಿ ದ್ದಾರೆ ಎಂದು ಮೈಸೂರು ಜಿಲ್ಲಾ ಪಂಚಾಯತಿ ಸಿಇಓ ಕೆ.ಜ್ಯೋತಿ ಬೇಸರ ವ್ಯಕ್ತಪಡಿದರು. ಮೈಸೂರಿನ ಸಂತ ಫಿಲೋ ಮಿನಾ ಕಾಲೇಜು ಸಭಾಂಗಣದಲ್ಲಿ ಓಡಿಪಿ ಸಂಸ್ಥೆ ಮತ್ತು ಮಹಿಳೋದಯ ಮಹಿಳಾ ಒಕ್ಕೂಟ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ `ಉತ್ತಮ ಸಮತೋಲನಕ್ಕಾಗಿ ಮಹಿಳಾ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾನತೆ ಸಾರುವ ಸಂವಿಧಾನವಿದ್ದರೂ ಮಹಿಳೆಯರಿಗೆ, ದುರ್ಬಲರಿಗೆ ನ್ಯಾಯ ದೊರೆತಿಲ್ಲ. ಇದಕ್ಕೆ ಕಾರಣ ಅರಿಯಬೇಕಿದೆ. ಮಹಿಳೆಯರು ನಿರಂತರ ಹೋರಾಟಗಳ ಮೂಲಕ ಸಮಾನತೆ ಸಾಧಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ನಡುವೆ ಹಲವಾರು ಮಹಿಳಾ ಸಾಧಕಿಯರು ಆಗಿ ಹೋಗಿದ್ದಾರೆ. ಸಮಾಜದ ಸಂಕೋಲೆಗಳನ್ನು ದಾಟಿ ಮುಂದೆ ಬಂದು ಸಾಧನೆ ಮಾಡಿದ್ದಾರೆ. ಅವರನ್ನು ಸ್ಮರಿಸಿ ಅದೇ ಹಾದಿಯಲ್ಲಿ ನಾವೂ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು. ಮಹಿಳಾ ಒಕ್ಕೂಟಗಳ ಮೂಲಕ ನಮ್ಮ ನೋವು, ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿ ನಮ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ. ಆರ್ಥಿಕ ಸ್ವಾವಲಂಬನೆ, ಸಮಾನತೆ ಸಾಧಿಸಬೇಕಿದೆ ಎಂದರು.
ನಮಗೆ ಸಿಗಬೇಕಾಗಿರುವ ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಾವು ಸೂಕ್ತ ಜನಪ್ರತಿನಿಧಿಗಳ ಆಯ್ಕೆ ಮಾಡಬೇಕಿದೆ. ಅಸಹಾಯಕರಾಗಿ ಸುಮ್ಮನೆ ಕುಳಿತರೆ ಸೌಲಭ್ಯಗಳು ತನ್ನಿಂತಾನೇ ನಮ್ಮತ್ತ ಬರುವುದಿಲ್ಲ. ಜನಾನುರಾಗಿ ವ್ಯಕ್ತಿಯನ್ನು ಆಯ್ಕೆ ಮಾಡಲು ಮತದಾನದ ಅರಿವು ಅಗತ್ಯ. ಹೆಣ್ಣಿಗೆ ಮತದಾನದ ಅರಿವು ಉಂಟಾದಲ್ಲಿ ಕುಟುಂಬ, ಸಮಾಜದ ಮೇಲೆ ಸಕಾರಾತ್ಮಕವಾಗಿ ಪ್ರಭಾವ ಬೀರಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಚುನಾ ವಣೆ ಅಧಿಕಾರಿ ಸರಸ್ವತಿ ಅವರು ಇವಿಎಂ-ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ಪ್ರಾತ್ಯಕ್ಷಿಕೆ ನೀಡಿದರು. ಮೈಸೂರು ನಿವೃತ್ತ ಧರ್ಮಾಧ್ಯಕ್ಷ ಥಾಮಸ್ ಅಂತೋಣಿ ವಾಳಪಿಳ್ಳೆ, ಓಡಿಪಿ ನಿರ್ದೇಶಕ ಸ್ಟ್ಯಾನಿ ಡಿ’ಅಲ್ಮೆಡ, ಮಹಿಳಾ ಆಯೋಗ ಮೈಸೂರು ಧರ್ಮಕೇಂದ್ರ ಕಾರ್ಯದರ್ಶಿ ಎಮಿಲಿ, ಒಕ್ಕೂಟದ ಅಧ್ಯಕ್ಷೆ ವಿಜಯಾಂಬಾ, ಜಿವಿಎಸ್‍ಎಸ್‍ಎಂಒ ಅಧ್ಯಕ್ಷ ಬಿ.ಎಂ.ಅನಿಸ್, ಸಹ ಪ್ರಾಧ್ಯಾಪಕಿ ಡಾ.ಸಪ್ನಾ ಇನ್ನಿತರರು ಉಪಸ್ಥಿತರಿದ್ದರು.