ದೇಶ ಕೃಷಿ ಸಂಶೋಧಕರ ಕೊರತೆ ಎದುರಿಸುತ್ತಿದೆ
ಮೈಸೂರು

ದೇಶ ಕೃಷಿ ಸಂಶೋಧಕರ ಕೊರತೆ ಎದುರಿಸುತ್ತಿದೆ

October 22, 2019

ಮೈಸೂರು, ಅ.21(ಪಿಎಂ)- ಭಾರತ ಕೃಷಿ ಪ್ರಧಾನ ದೇಶವಾದರೂ ನಿರೀಕ್ಷಿತ ಮಟ್ಟದಲ್ಲಿ ಕೃಷಿಗೆ ಉತ್ತೇಜನ ದೊರೆತಿಲ್ಲ. ದೇಶದಲ್ಲಿ ಕೃಷಿ ಸಂಶೋ ಧಕರ ಸಂಖ್ಯೆ ಆಶಾದಾಯಕವಾಗಿಲ್ಲ ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಮಾಜಿ ಮಹಾ ನಿರ್ದೇ ಶಕರೂ ಆದ ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (ಡಿಎಆರ್‍ಇ) ಕಾರ್ಯ ದರ್ಶಿ ಪ್ರೊ.ಎಸ್.ಅಯ್ಯಪ್ಪನ್ ವಿಷಾದಿಸಿದರು.

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋ ಧನಾ ಸಂಸ್ಥೆಯ (ಸಿಎಸ್‍ಐಆರ್-ಸಿಎಫ್‍ಟಿಆರ್‍ಐ) ಐಎಫ್‍ಟಿಟಿಸಿ ಸಭಾಂಗಣದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ ಕೇವಲ 216 ಕೃಷಿ ಸಂಶೋಧಕರು ಇದ್ದಾರೆ. ಇದು ತೀರಾ ಕಡಿಮೆ. ಆದರೆ ಇಸ್ರೇಲ್ 8,250 ಕೃಷಿ ಸಂಶೋ ಧಕರನ್ನು ಹೊಂದುವ ಮೂಲಕ ಅಗ್ರ ಸ್ಥಾನದಲ್ಲಿ ದ್ದರೆ, 7,515 ಸಂಶೋಧಕರನ್ನು ಹೊಂದಿರುವ ಡೆನ್ಮಾರ್ಕ್ ದ್ವಿತೀಯ ಸ್ಥಾನ ಹಾಗೂ 7,153 ಸಂಶೋ ಧಕರನ್ನು ಹೊಂದಿರುವ ಸ್ವೀಡನ್ ತೃತೀಯ ಸ್ಥಾನ ದಲ್ಲಿದೆ. ಹೀಗೆ ಮುಂಚೂಣಿಯಲ್ಲಿರುವ 23 ರಾಷ್ಟ್ರಗಳ ಪೈಕಿ ಭಾರತ ಕೊನೆ ಸ್ಥಾನಕ್ಕೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಸಂಶೋಧಕರ ಕೊರತೆ ಇದ್ದಲ್ಲಿ ಬೇಸಾಯದ ಸುಧಾರಣೆ ಹಾಗೂ ಅಭಿವೃದ್ಧಿ ಸಂಬಂಧದ ಆವಿಷ್ಕಾರಗಳು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗದು. ಇದರಿಂದ ಉತ್ಪನ್ನ ಹಾಗೂ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಹೀಗಾಗಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಕನಿಷ್ಠ ಸಾವಿರ ಸಂಶೋ ಧಕರಾದರೂ ಇರಬೇಕು. ಪ್ರತಿಯೊಬ್ಬರಿಗೂ ಮೂಲಭೂತ ಅಗತ್ಯವಾಗಿರುವ ಆಹಾರೋತ್ಪನ್ನದ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗುಣಮಟ್ಟದ ಆಹಾರ ಪೂರೈಕೆಗೆ ಒತ್ತು ನೀಡಬೇಕಿದೆ. ಆಹಾರದ ಕಾರಣಕ್ಕಾಗಿ ಅನೇಕ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ದೇಶದಲ್ಲಿ ಮೂರು ವರ್ಷಕ್ಕಿಂತ ಕೆಳಗಿನ ಶೇ.50ರಷ್ಟು ಮಕ್ಕಳು ತೂಕ ಕಡಿಮೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಈ ವಯೋಮಾನದ ಶೇ.20ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಗರ್ಭಾವಸ್ಥೆ ವೇಳೆಯಲ್ಲಿ ಶೇ.80ರಷ್ಟು ಮಹಿಳೆಯರು ರಕ್ತಹೀನತೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಶೇ.57ರಷ್ಟು ಮಹಿಳೆ ಯರು ಮತ್ತು ಮಕ್ಕಳು ಮಿಟಮಿನ್ `ಎ’ ಕೊರತೆ ಎದುರಿಸುತ್ತಿದ್ದಾರೆ. ಶೇ.17.2ರಷ್ಟು ಪುರುಷರು ಹಾಗೂ ಶೇ.19.2ರಷ್ಟು ಮಹಿಳೆಯರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತದಲ್ಲಿ ವಾರ್ಷಿಕ 80 ಸಾವಿರ ಕೋಟಿ ಟನ್ ಆಹಾರ ಬೇಕಿದೆ. 2030ರ ವೇಳೆಗೆ 30 ಸಾವಿರ ಕೋಟಿ ಟನ್ ಹೆಚ್ಚುವರಿ ಆಹಾರದ ಅಗತ್ಯ ಬೀಳುತ್ತದೆ. ಈ ಬೇಡಿಕೆಯನ್ನು ಪೂರೈಸಬೇಕಾದರೆ ಕೃಷಿ ತಂತ್ರಜ್ಞಾನದ ಸುಧಾರಣೆ ಆಗಲೇಬೇಕು. ಇರುವಷ್ಟು ಜಾಗದಲ್ಲೇ, ಮಿತವಿರುವ ನೀರನ್ನೇ ಬಳಸಿಕೊಂಡು ಹೆಚ್ಚು ಆಹಾರ ಉತ್ಪಾದಿಸುವ ಸವಾಲನ್ನು ಸಂಶೋಧನೆಯ ಮೂಲಕ ಮಾತ್ರವೇ ಎದುರಿಸಲು ಸಾಧ್ಯ ಎಂದು ಅವರು ವಿವರಿಸಿದರು.

ದೇಶದಲ್ಲಿ ಕೃಷಿ ತಳಿಗಳು ನಶಿಸುವತ್ತ ಸಾಗಿದ್ದು, ವಿವಿಧ ಬೆಳೆಗಳ 30 ಸಾವಿರ ಬಗೆಯ ತಳಿಗಳು ಭಾರತದಲ್ಲಿದ್ದರೂ ಅಳವಡಿತವಾಗಿರುವುದು 200 ಮಾತ್ರ. ಅವುಗಳಲ್ಲಿ ಪ್ರಧಾನವಾಗಿ ಬಳಕೆಯಲ್ಲಿರು ವುದು ಕೇವಲ 8 ತಳಿಗಳು. ತಳಿಗಳ ಬಳಕೆಯನ್ನು ಹೆಚ್ಚಿಸಿಕೊಂಡಲ್ಲಿ ಹಸಿವು ನೀಗಿಸುವ ಸವಾಲು ಸುಲಭವಾಗುತ್ತದೆ ಎಂದು ಪ್ರತಿಪಾದಿಸಿದರು.

ಇದೇ ವೇಳೆ ಯೆಸ್ ಬ್ಯಾಂಕ್‍ನ ಆಸಕ್ತ ಗ್ರಾಹಕರು ಆಹಾರೋದ್ಯಮಕ್ಕೆ ಸಂಬಂಧಿಸಿದಂತೆ ಸಿಎಫ್‍ಟಿ ಆರ್‍ಐ ತಾಂತ್ರಿಕ ಸಹಕಾರ ಪಡೆಯುವುದು ಸೇರಿ ದಂತೆ ವಿವಿಧ ಒಡಂಬಡಿಕೆಗಳಿಗೆ ಸಹಿ ಮಾಡ ಲಾಯಿತು. ಅಲ್ಲದೆ, ಸಂಸ್ಥೆಯ ವಿವಿಧ ವಿಭಾಗಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಥೆಯ 27 ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಬಳಿಕ ಆಹಾರ ಸಂಶೋಧನೆ ಕುರಿತು ಕೈಗಾರಿಕಾ ಸಮಾವೇಶ ನಡೆಯಿತು. ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳ 20 ಮಂದಿ ಆಹಾರೋದ್ಯಮ ಕ್ಷೇತ್ರದ ನವೋದ್ಯಮಿಗಳು ಹಾಗೂ ಉದ್ಯಮಿಗಳು ಸಮಾ ವೇಶದಲ್ಲಿ ಪಾಲ್ಗೊಂಡಿದ್ದರು. ಯೆಸ್ ಬ್ಯಾಂಕ್‍ನ ಆಹಾರ ಮತ್ತು ಕೃಷಿ ಕಾರ್ಯತಂತ್ರ ವಿಭಾಗದ ಜಾಗತಿಕ ಮುಖ್ಯಸ್ಥ ನಿತಿನ್‍ಪುರಿ, ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆಎಸ್‍ಎಂಎಸ್ ರಾಘವರಾವ್, ಹಿರಿಯ ವಿಜ್ಞಾನಿ ಮೀನಾಕ್ಷಿ ಸಿಂಗ್ ಮತ್ತಿತರರು ಹಾಜರಿದ್ದರು.

Translate »