ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ
ಕೊಡಗು

ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ

April 2, 2019

ಮಡಿಕೇರಿ: ಏನು ಅರಿಯದ 3 ವರ್ಷದ ಮಗುವಿನ ಕಣ್ಣ ಮುಂದೆಯೇ ಆಕೆಯ ಹೆತ್ತವರು ನೇಣು ಹಾಕಿಕೊಂಡು ಬದುಕಿಗೆ ವಿದಾಯ ಹೇಳಿದ ದಾರುಣ ಘಟನೆ ನಗರದ ಎ.ವಿ.ಶಾಲೆ ಬಳಿಯ ಪಂಪಿನ ಕೆರೆ ಬಳಿ ನಡೆದಿದೆ. ನಗರದ ಖಾಸಗಿ ಕನ್ನಡ ಮಾಧ್ಯಮದ ಅನುದಾನಿತ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಚೇತನ್ (34) ಮತ್ತು ವಾಣಿ(27) ದಂಪತಿಯೇ ಆತ್ಮಹತೈಗೆ ಶರಣಾದವರು.

ಘಟನೆ ವಿವರ: ಚೇತನ್ ಮೂಲತಃ ತಿಪಟೂರು ನಿವಾಸಿಯಾಗಿದ್ದು, ಕಳೆದ 4 ವರ್ಷದ ಹಿಂದೆ ತುಮಕೂರು ಮೂಲದ ವಾಣಿ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ 3 ವರ್ಷದ ಮುದ್ದಾದ ಮಗುವಿದ್ದು, ಕೆಲ ಸಮಯದ ಹಿಂದೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪವಾಗಿ, ಬಳಿಕ ಎರಡೂ ಕುಟುಂಬಗಳ ಸದಸ್ಯರು ಇದನ್ನು ಬಗೆಹರಿಸಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ ವಾಣಿ ತನ್ನ ಪೋಷಕರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ. ವಾಣಿಯ ಪೋಷಕರು ತಕ್ಷಣವೇ ಚೇತನ್‍ಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಆ ಕ್ಷಣವೇ ಚೇತನ್ ಮನೆಗೆ ಬಂದಾಗ ವಾಣಿ ಸೀರೆಯಿಂದ ನೇಣು ಹಾಕಿಕೊಂಡಿರು ವುದು ಕಂಡು ಬಂದಿದೆ. ವಾಣಿ ನೇಣು ಹಾಕಿಕೊಂಡಿದ್ದ ಸೀರೆಯನ್ನು ಕತ್ತರಿಸಿ ಆಕೆಯನ್ನು ಹಾಸಿಗೆಯ ಮೇಲೆ ಮಲಗಿಸಿದ ಚೇತನ್ ಬಳಿಕ ಮನೆಯ ಹೊರಗೆ ಬಟ್ಟೆ ಒಣಗಿಸಲು ಅಳವಡಿಸಿದ್ದ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ. ಸಾಯುವ ಮುನ್ನ ಚೇತನ್ ತನ್ನ ಪೋಷಕರಿಗೂ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಸಾವಿಗೆ ಶರಣಾಗಿದ್ದಾನೆ. ತಕ್ಷಣವೇ ಚೇತನ್ ಪೋಷಕರು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಚೇತನ್ ಮತ್ತು ವಾಣಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ನಗರ ಠಾಣಾಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿಗಳು ಆಗಮಿಸಿ ಸ್ಥಳ ಮಹಜರು ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ಮತ್ತು ಚೇತನ್ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಯ ಶಿಕ್ಷಕರು ಸ್ಥಳಕ್ಕಾಗಮಿಸಿ, ದಂಪತಿಯ ಸಾವಿಗೆ ಕಂಬನಿ ಮಿಡಿದರು. ಏನೂ ಅರಿಯದ 3 ವರ್ಷದ ಮಗು ಮಾತ್ರ ನೆರೆ ಮನೆಯ ಹಾಸಿಗೆಯಲ್ಲಿ ಆಟವಾಡುತ್ತಿದ್ದು, ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.

Translate »