ಮಿಮ್ಸ್ ಮಾಜಿ ನಿರ್ದೇಶಕ ಸೇರಿ 6 ಜನರ ವಿರುದ್ಧ ಎಫ್‍ಐಆರ್‍ಗೆ ಕೋರ್ಟ್ ಆದೇಶ 
ಮಂಡ್ಯ

ಮಿಮ್ಸ್ ಮಾಜಿ ನಿರ್ದೇಶಕ ಸೇರಿ 6 ಜನರ ವಿರುದ್ಧ ಎಫ್‍ಐಆರ್‍ಗೆ ಕೋರ್ಟ್ ಆದೇಶ 

May 23, 2019

ಮಂಡ್ಯ: ಮಂಡ್ಯ ಮೆಡಿಕಲ್ ಕಾಲೇಜಿನ (ಮಿಮ್ಸ್) ಹಿಂದಿನ ನಿರ್ದೇಶಕ, ಮಾಜಿ ಸಂಸದ ಜಿ.ಮಾದೇಗೌಡ ಅವರ ಪುತ್ರ ಡಾ.ಜಿ.ಎಂ. ಪ್ರಕಾಶ್ ಸೇರಿದಂತೆ 6 ಜನರ ವಿರುದ್ಧ ಸುಳ್ಳು ಬೋಧನಾ ಪ್ರಮಾಣಪತ್ರ ನೀಡಿರು ವುದೂ ಸೇರಿದಂತೆ ಹಲವು ಆರೋಪಗಳ ಮೇಲೆ ಮಂಡ್ಯದ 2ನೇ ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ.

ಮಿಮ್ಸ್ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವರಾಮ್, ಮಿಮ್ಸ್ ಮಾಜಿ ವೈದ್ಯಕೀಯ ಅಧೀಕ್ಷಕ ಡಾ.ಎಂ.ಹನುಮಂತಪ್ರಸಾದ್, ಮಾಜಿ ಆಡಳಿತಾಧಿಕಾರಿ ಕುಮಾರಿ ಜಯಾ, ಮಾಜಿ ಫಾರ್ಮಾಸಿಸ್ಟ್ ಮುದ್ದುರಂಗನಾಥ್ ಹಾಗೂ ಮಂದಾರ ಹಾಸ್ಪಿಟಾಲಿಟಿ ಸರ್ವಿಸಸ್‍ನ ಜಾನಕಿ ಆರ್. ವಿರುದ್ಧ ಕೆ.ಕೃಷ್ಣೇಗೌಡ ಎಂಬವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಡಾ.ಜಿ.ಎಂ.ಪ್ರಕಾಶ್ ಸುಳ್ಳು ಬೋಧನಾ ಅನುಭವ ಪ್ರಮಾಣಪತ್ರ ನೀಡಿ ಸರ್ಕಾರವನ್ನು ವಂಚಿಸಿ, ಮಿಮ್ಸ್‍ನ ನಿರ್ದೇಶಕರ ಹುದ್ಧೆ ಪಡೆದಿದ್ದಾರೆ. ಅಸ್ಪತ್ರೆ ಅವರಣದಲ್ಲಿ ಅಕ್ರಮವಾಗಿ ಕ್ಯಾಂಟೀನ್ ನಿರ್ಮಿಸಿದ್ದು, ಟೆಂಡರ್ ಅನುಮೋದನೆಯಾಗಿದ್ದರೂ ಹೆಚ್ಚಿನ ಬೆಲೆಗೆ ಕೊಟೇಷನ್ ಮೂಲಕ ಔಷಧಗಳನ್ನು ಖರೀದಿ ಮಾಡಲಾಗಿದೆ. ಅಲ್ಲದೆ ಔಷಧ ಸರಬರಾಜುದಾರರಿಂದ ಸಮರ್ಪಕವಾಗಿ ಔಷಧಗಳನ್ನು ಪಡೆದಿಲ್ಲ. ಖರೀದಿಸಿದ ಔಷಧಗಳನ್ನೂ ಬಳಸದೇ ಇದ್ದ ಕಾರಣ ಅವೆಲ್ಲವೂ ಅವಧಿ ಮುಗಿದು ವ್ಯರ್ಥವಾಗಿವೆ. ಇದಕ್ಕೆ ಡಾ. ಪ್ರಕಾಶ್ ಕಾರಣರಾಗಿದ್ದಾರೆ. ಅಲ್ಲದೆ ಆರೋಗ್ಯರಕ್ಷಾ ಸಮಿತಿ ಮತ್ತು ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ರಾಷ್ಟ್ರೀಕೃತ ಬ್ಯಾಂಕಿನಿಂದ ಖಾಸಗಿ ಬ್ಯಾಂಕಿಗೆ ಕಾನೂನುಬಾಹಿರವಾಗಿ ಮಿಮ್ಸ್‍ನ 10 ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿರುವ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಫಿರ್ಯಾದುದಾರರ ಪರವಾಗಿ ವಕೀಲ ಬಿ.ಟಿ.ವಿಶ್ವನಾಥ್ ಖಾಸಗಿ ದೂರಿನ ಅವಶ್ಯಕತೆ ಕುರಿತು ಕೋರ್ಟ್‍ನಲ್ಲಿ ವಾದ ಮಂಡಿಸಿದರು. ಜೆಎಂಎಫ್‍ಸಿ ಪ್ರಭಾರ ನ್ಯಾಯಾಧೀಶರು ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲು ಮಂಡ್ಯ ನಗರ ಪೂರ್ವ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್‍ಗೆ ಆದೇಶಿಸಿದರು.