ಮೈಸೂರು: ಹಸುಗಳನ್ನು ಕಳವು ಮಾಡಿ ನಿರ್ಜನ ಪ್ರದೇಶದಲ್ಲಿ ಕತ್ತರಿಸಿ, ಚರ್ಮ ಬಿಟ್ಟು ಮಾಂಸ ಕೊಂಡೊಯ್ದಿರುವ ಘಟನೆ ಮೈಸೂರು ತಾಲೂಕು, ದಡದಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ದಡದಹಳ್ಳಿ ಗ್ರಾಮದ ನಂಜಪ್ಪ ಎಂಬುವರ 80 ಸಾವಿರ ರೂ. ಬೆಲೆಯ ಜೋಡೆತ್ತು, ರೈತ ಮಹಿಳೆ ಚಿಕ್ಕಸಣ್ಣಮ್ಮ ಎಂಬುವರಿಗೆ ಸೇರಿದ 2 ಹಸು ಮತ್ತು ಶಿವರಾಮು ಎಂಬುವರ 1 ಹಸು ಸೇರಿ 2 ಲಕ್ಷ ರೂ. ಮೌಲ್ಯದ 5 ರಾಸುಗಳನ್ನು ಕಳವು ಮಾಡಲಾಗಿದೆ. ಇಂದು ಬೆಳಿಗ್ಗೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸು ಮತ್ತು ಎತ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ಹುಡು ಕಾಡುತ್ತಿದ್ದಾಗ ಊರ ಹೊರಗಿನ ನಿರ್ಜನ ಪ್ರದೇಶದ ಗಿಡದ ಪೊದೆಯೊಳಗೆ ದನಗಳ ಚರ್ಮ ಪತ್ತೆಯಾಗಿತ್ತು. ಕಳವು ಮಾಡಿದ ಹಸುಗಳನ್ನು ಕತ್ತು ಕೊಯ್ದು ಕೊಂದು, ಅಲ್ಲಿಯೇ ಚರ್ಮ ಸುಲಿದು ಬಿಸಾಡಿ, ಮಾಂಸ ಕೊಂಡೊಯ್ಯಲಾಗಿದೆ. ಈ ಸಂಬಂಧ ಮಾಲೀಕರು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಬ್‍ಇನ್‍ಸ್ಪೆಕ್ಟರ್ ಜಯಪ್ರಕಾಶ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಮಹಜರು ನಡೆಸಿದರು.
ಹೀಗೆ ಕೆಲ ದಿನಗಳ ಹಿಂದೆಯೂ ಅದೇ ಗ್ರಾಮದಲ್ಲಿ ನಾಲ್ಕು ಹಸುಗಳು ಕಾಣೆಯಾಗಿದ್ದವು. ಕಟುಕರ ಜಾಲವೊಂದು ಮಾಂಸಕ್ಕಾಗಿ ಈ ಕೃತ್ಯವೆಸಗುತ್ತಿದೆ ಎಂದು ಶಂಕಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.