ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಎಡವಟ್ಟು ಗ್ರಾಹಕರ ಕೈ ಸೇರಿತು ಐದು ಪಟ್ಟು ಹಣ
ಕೊಡಗು

ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಎಡವಟ್ಟು ಗ್ರಾಹಕರ ಕೈ ಸೇರಿತು ಐದು ಪಟ್ಟು ಹಣ

January 9, 2020

ಪೊಲೀಸರಿಗೆ ದೂರು ನೀಡಿ ಗ್ರಾಹಕರಿಂದ ಹಣ ವಸೂಲಿ ಮಾಡಿದ ಬ್ಯಾಂಕ್
ಮಡಿಕೇರಿ, ಜ.8- ನಗರದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರ ಒಂದರಲ್ಲಿ ಅದಕ್ಕೆ ಹಣ ತುಂಬುವ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ಹತ್ತು ಹಲವು ಮಂದಿ ತಾವು ಪಡೆಯಬೇಕಿದ್ದ ಹಣಕ್ಕಿಂತ ಐದು ಪಟ್ಟು ಹೆಚ್ಚು ಹಣವನ್ನು ಪಡೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಗ್ರಾಹಕರು ಹಣವನ್ನು ಹಿಂದಿರುಗಿಸಲು ಹಿಂದೇಟು ಹಾಕಿದ್ದರಿಂದ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇ ರಿತ್ತು. ಹಣವನ್ನು ಡ್ರಾ ಮಾಡಿದ್ದ ವ್ಯಕ್ತಿಗಳು ಪೊಲೀಸ ರಿಗೆ ಹೆದರಿ ಹಣವನ್ನು ಮರಳಿ ಬ್ಯಾಂಕಿಗೆ ನೀಡಿದರು.

ಘಟನೆ ಹಿನ್ನೆಲೆ: ಖಾಸಗಿ ಏಜೆನ್ಸಿಯೊಂದು ಮಡಿ ಕೇರಿಯ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಹಣ ತುಂಬುವ ಜವಾಬ್ದಾರಿ ವಹಿಸಿಕೊಂಡಿತ್ತು. ಅದರಂತೆ 2019ರ ಡಿಸೆಂಬರ್ 30 ರಂದು ಈ ಖಾಸಗಿ ಏಜೆನ್ಸಿಯ ಸಿಬ್ಬಂದಿ ಕೊಹಿನೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಹಣ ತುಂಬಿದ್ದರು. ಈ ಸಂದರ್ಭ 100ರೂ. ಹಾಕುವ ಟ್ರೇಯಲ್ಲಿ 500ರೂ. ಮುಖಬೆಲೆಯ ನೋಟುಗಳನ್ನು ತುಂಬಿದ್ದರು.

ಎಟಿಎಂ ಕೇಂದ್ರಕ್ಕೆ ಹಣ ಪಡೆಯಲು ಬಂದ ಗ್ರಾಹ ಕರು 500ರೂ. ಹಣ ಡ್ರಾ ಮಾಡಲು ಮುಂದಾದಾಗ 100ರೂ. ಮುಖ ಬೆಲೆಯ 5 ನೋಟು ಬರುವ ಬದಲು 500ರೂ. ಮುಖ ಬೆಲೆಯ 5 ನೋಟಿನಂತೆ ಒಟ್ಟು 2500ರೂ ಗ್ರಾಹಕರ ಕೈಸೇರಿದೆ. ಕೆಲವರು ಈ ಎಡವಟ್ಟನ್ನು ದುರುಪಯೋಗಪಡಿಸಿಕೊಂಡು 64 ಸಾವಿರ, 50 ಸಾವಿರದಂತೆ ಸರಣಿಯಾಗಿ ಹಣ ಪಡೆದಿದ್ದಾರೆ. ಈ ವಿಚಾರ ಅರಿತ ಒಬ್ಬ ಭೂಪ ಒಂದೇ ದಿನ ಹತ್ತು ಹಲವು ಬಾರಿ ಹಣ ಪಡೆದಿರುವುದು ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ 3 ದಿನಗಳ ಹಿಂದೆ ಶ್ರೀಧರ್ ಎಂಬ ಕೆನರಾ ಬ್ಯಾಂಕಿನ ಗ್ರಾಹಕರು ಇದೇ ಎಟಿಎಂ ಕೇಂದ್ರಕ್ಕೆ ಹಣ ಪಡೆ ಯಲು ಬಂದಾಗ ತಾವು ಪಡೆಯ ಬಯಸಿದ ಹಣಕ್ಕಿಂತ ಹೆಚ್ಚುವರಿ ಹಣ ಬಂದಿದೆ. ಇದರಿಂದ ಸಂಶಯಗೊಂಡ ಶ್ರೀಧರ್, ಬ್ಯಾಂಕಿಗೆ ಕರೆ ಮಾಡಿ ಎಟಿಎಂನಲ್ಲಿ ದೋಷವಿರುವ ಬಗ್ಗೆ ದೂರು ನೀಡಿದ್ದಾರೆ.

ಬಳಿಕ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಮತ್ತು ಖಾಸಗಿ ಏಜೆನ್ಸಿ ಸಿಬ್ಬಂದಿ ಎಟಿಎಂ ಕೇಂದ್ರವನ್ನು ಬಂದ್ ಮಾಡಿದ್ದಾರೆ. ಆದರೆ ಎಟಿಎಂ ಮಿಷಿನ್‍ನಿಂದ ಆ ಹೊತ್ತಿಗಾಗಲೇ 1.50 ಲಕ್ಷ ರೂ. ಹೆಚ್ಚುವರಿಯಾಗಿ ಸೋರಿಕೆಯಾಗಿತ್ತು. ತದನಂತರ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಲಾದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, ಹೆಚ್ಚುವರಿ ಹಣ ಪಡೆದ ಗ್ರಾಹಕ ರನ್ನು ಸಂಪರ್ಕಿಸಿ, ಹಣ ಹಿಂದಿರುಗಿಸುವಂತೆ ಬ್ಯಾಂಕ್ ಸಿಬ್ಬಂದಿ ಮನವಿ ಮಾಡಿದ್ದರು.

ಹೆಚ್ಚುವರಿ ಹಣ ಪಡೆದ ಗ್ರಾಹಕರ ಪೈಕಿ ಬಹು ತೇಕರು ಬ್ಯಾಂಕಿಗೆ ಹಣ ಹಿಂದಿರುಗಿಸಿದ್ದಾರೆ. ಮತ್ತೆ ಕೆಲವರು ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜನವರಿ 6 ರಂದು ಅನಿವಾರ್ಯವಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಈ ಸಂದರ್ಭ ಪೊಲೀಸ್ ಠಾಣೆಯಿಂದ ಹಣ ಕೊಡಲು ನಿರಾಕರಿಸಿದವರಿಗೆ ಕರೆ ಮಾಡಿ ಹಣ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಬ್ಯಾಂಕಿಗೆ ತೆರಳಿ ಹಣ ಪಾವತಿಸಿದ್ದಾರೆ. ಎಟಿಎಂ ಕೇಂದ್ರದಿಂದ ಹೆಚ್ಚುವರಿ ಯಾಗಿ ಗ್ರಾಹಕರ ಕೈ ಸೇರಿದ್ದ ಹಣ ಮತ್ತೆ ಬ್ಯಾಂಕ್‍ಗೆ ಜಮೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಕಳೆದ ಕೆಲ ತಿಂಗಳ ಹಿಂದೆ ಕೊಹಿನೂರು ರಸ್ತೆಯಲ್ಲಿ ರುವ ಹಳೆಯ ಎಟಿಎಂ ಮಿಷಿನ್ ಅನ್ನು ಬದಲಿಸಿ, ನೂತನ ತಂತ್ರಜ್ಞಾನದ ಮಿಷನ್ ಅನ್ನು ಅಳವಡಿಸಲಾಗಿತ್ತು. ಈ ಹೊಸ ಮಿಷನ್‍ನ 100, 500 ಮತ್ತು 2000 ರೂ. ಮುಖ ಬೆಲೆಯ ನೋಟುಗಳನ್ನು ತುಂಬುವ ಹಣದ ಟ್ರೇಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿದೆ. 100 ಮತ್ತು 500ರೂ.ಗಳ ನೋಟಿನ ಅಳತೆ ಒಂದೇ ಆಗಿರುವು ದರಿಂದ ಈ ಎಡವಟ್ಟು ನಡೆದಿದೆ. ಮಾತ್ರವಲ್ಲದೇ, ಹೊಸ ಮಿಷಿನ್‍ನಲ್ಲಿ ನೋಟುಗಳನ್ನು ಹಾಕುವ ಟ್ರೇಗಳ ಕಲರ್ ಕೋಡ್ ಕೂಡ ವಿಶಿಷ್ಟವಾಗಿದೆ. ಹೀಗಾಗಿ ಖಾಸಗಿ ಏಜೆನ್ಸಿ ಸಿಬ್ಬಂದಿ ಈ ಎಡವಟ್ಟು ಮಾಡಿರುವ ಸಾಧ್ಯತೆಗಳಿವೆ. ಆದರೆ ಎಟಿಎಂನಲ್ಲಿ ಇಂತಹ ಪ್ರಮಾದಗಳು ನಡೆದಾಗ ಯಾವುದೇ ಬ್ಯಾಂಕಿನಿಂದಲೂ ಹೆಚ್ಚುವರಿ ಹಣ ಪಡೆಯಲು ಗ್ರಾಹಕರಿಗೆ ಸಾಧ್ಯವಿಲ್ಲ ಎಂದು ಕೆನರಾ ಬ್ಯಾಂಕಿನ ಪ್ರದಾನ ಸಹಾಯಕ ವ್ಯವಸ್ಥಾಪಕ ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Translate »