ದಸರಾ ಕ್ರೀಡಾಕೂಟದ ವಿಜೇತರಿಗೆ ಶೀಘ್ರ ನಗದು ಬಹುಮಾನ ನೀಡಲು ಮುಂದಾದ ಇಲಾಖೆ
ಮೈಸೂರು

ದಸರಾ ಕ್ರೀಡಾಕೂಟದ ವಿಜೇತರಿಗೆ ಶೀಘ್ರ ನಗದು ಬಹುಮಾನ ನೀಡಲು ಮುಂದಾದ ಇಲಾಖೆ

December 13, 2019
  • ಕ್ರೀಡಾ ಪ್ರಾಧಿಕಾರದ ಹಣದಿಂದ ಬಹುಮಾನದ ಮೊತ್ತ ವಿತರಣೆಗೆ ನಿರ್ಧಾರ
  • ಎರಡು ತಿಂಗಳಿಂದ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಕ್ರೀಡಾ ಇಲಾಖೆ

ಮೈಸೂರು, ಡಿ.12(ಎಂಟಿವೈ)- ದಸರಾ ಕ್ರೀಡಾಕೂಟ ಮುಗಿದು ಎರಡು ತಿಂಗಳಾದರೂ ವಿಜೇತರಿಗೆ ನಗದು ಬಹುಮಾನ ನೀಡದೆ ನಿರ್ಲಕ್ಷಿಸಿದ್ದ ಯುವ ಸಬಲೀಕರಣ ಕ್ರೀಡಾ ಇಲಾಖೆ `ಮೈಸೂರು ಮಿತ್ರ’ನಲ್ಲಿ ಪ್ರಕಟವಾದ ಸುದ್ದಿಯಿಂದ ಕೊನೆಗೂ ಎಚ್ಚೆತ್ತುಕೊಂಡು, ಪರ್ಯಾಯ ಮಾರ್ಗದಲ್ಲಿ ಬಹುಮಾನದ ಮೊತ್ತ ವಿತರಿಸಲು ಮುಂದಾಗಿದೆ.

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅ.1ರಿಂದ 6ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂ ಗಣ ಸೇರಿದಂತೆ ವಿವಿಧೆಡೆ ದಸರಾ ಕ್ರೀಡಾಕೂಟ ನಡೆ ದಿತ್ತು. ಒಳಾಂಗಣ, ಹೊರಾಂಗಣ, ಗುಂಪು ಹಾಗೂ ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ 32 ಬಗೆಯ ಕ್ರೀಡಾ ಚಟುವಟಿಕೆಗಳು ನಡೆದಿದ್ದವು. ವಿವಿಧ ರಾಜ್ಯ ಹಾಗೂ ಜಿಲ್ಲೆಗಳ ಕ್ರೀಡಾಪಟು ಗಳು ವಿಜೇತರಾಗಿದ್ದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಗದು ಮೊತ್ತ ನೀಡಿರಲಿಲ್ಲ. ಕ್ರೀಡಾಧಿಕಾರಿಗಳಿಗೆ ಗೌರವ ಧನ ನೀಡಿರಲಿಲ್ಲ. ಒಂದು ಕೋಟಿ ರೂ. ನಗದು ಬಹುಮಾನ ಬಾಕಿಯಾಗಿದ್ದ ರಿಂದ ಕ್ರೀಡಾಪಟುಗಳು ಕ್ರೀಡಾ ಇಲಾಖೆಯ ಅಧಿಕಾರಿ ಗಳ ವಿರುದ್ಧ ಅಸಮಾಧಾನಗೊಂಡಿದ್ದರು.

ಪರ್ಯಾಯ ಮಾರ್ಗ: ಸರ್ಕಾರದಿಂದ ಅನುದಾನ ವಿಳಂಬವಾಗಿರುವುದರಿಂದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ಸಾಧ್ಯವಾಗಿಲ್ಲ. ಅನುದಾನಕ್ಕೆ ಕಾದು ಕುಳಿತರೆ ಬಹುಮಾನದ ಮೊತ್ತ ನೀಡಲು ಮತ್ತಷ್ಟು ತಡವಾಗಲಿದೆ. ಹಾಗಾಗಿ ಕ್ರೀಡಾ ಪ್ರಾಧಿಕಾರದಲ್ಲಿರುವ ಹಣವನ್ನೇ ಬಳಸಿಕೊಂಡು ಕ್ರೀಡಾಪಟುಗಳಿಗೆ ನಗದು ಬಹುಮಾನ ವಿತರಿಸಿ, ಸರಕಾರದಿಂದ ಅನುದಾನ ಬಂದ ಬಳಿಕ ಆ ಹಣವನ್ನು ಪ್ರಾಧಿಕಾರಕ್ಕೆ ಮರುಪಾವತಿ ಮಾಡಲು ಇಲಾಖೆ ನಿರ್ಧರಿಸಿದೆ. ಒಂದೆರಡು ದಿನದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇ ಶಕ ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಚೆಕ್ ಮೂಲಕ ವಿತರಣೆ: 2019ರ ಮುಖ್ಯಮಂತ್ರಿ ಕಪ್-ದಸರಾ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಭಾಗ ವಹಿಸಿ ವಿಜೇತರಾದ ಕ್ರೀಡಾಪಟುಗಳು, ಕ್ರೀಡಾಧಿಕಾರಿಗಳ ಬ್ಯಾಂಕ್ ಖಾತೆ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಾಧ್ಯವಾದಷ್ಟು ಬೇಗ ನಗದು ಬಹುಮಾನ ಮತ್ತು ಗೌರವ ಧನವನ್ನು ನೇರವಾಗಿ ಖಾತೆಗೆ ಜಮಾ ಮಾಡಲು ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಕ್ರಮ ವಹಿಸಲಾಗುತ್ತಿದೆ ಎಂದು ಸುರೇಶ್ ವಿವರಿಸಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಿದ, ಸಹಕರಿಸಿದ ಕ್ರೀಡಾಪಟುಗಳು, ಅಧಿಕಾರಿಗಳು, ತೀರ್ಪುಗಾರರಿಗೆ ಊಟ-ಉಪಾಹಾರ ಒದಗಿಸಿದವರಿಗೆ ಮತ್ತು ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿದ ಹೋಟೆಲ್, ವಸತಿ ಗೃಹಗಳಿಗೆ ಹಾಗೂ ಇತರೆ ಸಾಮಗ್ರಿ ಸರಬರಾಜುದಾರರಿಗೆ ಶೇ. 70ರಿಂದ ಶೇ.90ರಷ್ಟು ಹಣವನ್ನು ಪಾವತಿಸಲಾಗಿದೆ. ಉಳಿದ ಹಣವನ್ನು ಸದ್ಯದಲ್ಲಿಯೇ ಪಾವತಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »