2ನೇ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಮಂಡ್ಯ

2ನೇ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

July 22, 2018

ಕೆ.ಆರ್.ಪೇಟೆ: ಪೂಜೆ ಸಲ್ಲಿಸುವ ವೇಳೆ ಮನೆಯ 2ನೇ ಮಹಡಿಯಿಂದ ಕಾಲು ಜಾರಿಬಿದ್ದು ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಸವೇಶ್ವರ ನಗರದಲ್ಲಿ ಶನಿವಾರ ನಡೆದಿದೆ. ತಾಲೂಕಿನ ಗವಿಮಠ ಶ್ರೀ ಕ್ಷೇತ್ರದ ಉಸ್ತುವಾರಿ ಹಾಗೂ ಸ್ವತಂತ್ರ ಸಿದ್ದ ಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಬಸವರಾಜಪ್ಪ ಅವರ ಪುತ್ರ ನಂದೀಶ್ ಹಿರೇಮಠ್(47) ಮೃತಪಟ್ಟ ವ್ಯಕ್ತಿ.

ನಂದೀಶ್ ಅವರು ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸುವ ವೇಳೆ ತಾವು ವಾಸವಿದ್ದ ಮನೆಯ ಎರಡನೇ ಮಹಡಿಯ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಕೂಡಲೇ, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಂದೀಶ್ ಮೃತಪಟ್ಟಿದ್ದಾರೆ.

ನಂದೀಶ್ ಅವರ ಪತ್ನಿ ಶಿವರತ್ನಮ್ಮ ಅವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಶಾಲೆಯೊಂದರಲ್ಲಿ ಕರ್ತವ್ಯಕ್ಕೆ ಹೋಗಿದ್ದರು. ಈ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸರ್ಕಲ್ ಇನ್‍ಸ್ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್‍ಇನ್‍ಸ್ಪೆಕ್ಟರ್ ಹೆಚ್.ಎಸ್.ವೆಂಕಟೇಶ್, ಶಾಸಕ ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಕೊಲೆಯ ಶಂಕೆ: ನಂದೀಶ್ ಅವರ ತಂದೆ ಬಸವರಾಜಪ್ಪ ಅವರು ಕೊಲೆಯ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೂಜೆ ಸಲ್ಲಿಸುವ ವೇಳೆ ಯಾರೇ ಬಿದ್ದರೆ ಸಾಯುವುದಿಲ್ಲ. ನನ್ನ ಮಗನ ಮೇಲೆ ಯಾರೋ ಮೋಸದಿಂದ ಹಿಂದಿನಿಂದ ಹಲ್ಲೆ ನಡೆಸಿ ಮಹಡಿಯಿಂದ ಕೆಳಕ್ಕೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Translate »