ಮೂವರು ಜೆಸಿಬಿ ಬಿಡಿ ಭಾಗಗಳ ಕಳ್ಳರ ಬಂಧನ 36 ಲಕ್ಷ ರೂ. ಮೌಲ್ಯದ ಪರಿಕರಗಳ ವಶ
ಮಂಡ್ಯ

ಮೂವರು ಜೆಸಿಬಿ ಬಿಡಿ ಭಾಗಗಳ ಕಳ್ಳರ ಬಂಧನ 36 ಲಕ್ಷ ರೂ. ಮೌಲ್ಯದ ಪರಿಕರಗಳ ವಶ

July 22, 2018

ಮಂಡ್ಯ:  ಜೆಸಿಬಿ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಅರಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಎಸಿ ಹೈಡ್ರಾಲಿಕ್ ರಾಕ್ ಬ್ರೇಕರ್ ಮತ್ತು ಬ್ಯಾಟರಿ ಸೇರಿದಂತೆ ಸುಮಾರು 36 ಲಕ್ಷದ 80 ಸಾವಿರ ಬೆಲೆ ಬಾಳುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಕಾವೇರಿ ದೊಡ್ಡಿ ಗ್ರಾಮದ ನಿವಾಸಿ ಸಿ.ರಾಜು(29), ತಮಿಳುನಾಡು ಮೂಲದ ಪೆರುಮಾಳ್(32), ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿ ಮೊಳ್ಳೇನಹಳ್ಳಿ ಗ್ರಾಮದ ಎಂ.ಕೆ ಪ್ರದೀಪ್ ಬಂಧಿತ ಆರೋಪಿಗಳು.

ಘಟನೆ ವಿವರ: ಅರಕರೆ ಸಮೀಪದ ಹಂಗರಹಳ್ಳಿ ಗ್ರಾಮದ ಜಬ್ಬರ್ ರವಿ ಅವರಿಗೆ ಸೇರಿದ ಕಲ್ಲು ಕೋರೆಯ ಬಳಿ ಎಲ್ ಆಂಡ್ ಟಿ ಹಿಟಾಚಿಗೆ ಅಳವಡಿಸಿದ್ದ ಸುಮಾರು 18 ಲಕ್ಷದ 80 ಸಾವಿರ ಬೆಲೆಬಾಳುವ ಅಟ್ಲಾಸ್ ಕೋಪ್ಕೋ ಕಂಪನಿಯ ಎಪಿ ರಾಕ್ ಹೈಡ್ರಾಲಿಕ್ ರಾಕ್ ಬ್ರೇಕರ್, ಎರಡು ಬ್ಯಾಟರಿಗಳನ್ನು ಇದೇ ಜು.15ರಂದು ಕಳವು ಮಾಡಲಾಗಿತ್ತು. ಈ ಸಂಬಂಧ ಜಬ್ಬರ್ ರವಿ ಜು.18ರಂದು ಅರಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಅರಕೆರೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಎಸ್ಪಿ ರಾಧಿಕಾ ಸೂಚನೆ ಮೇರೆಗೆ ಎಎಸ್ಪಿ ಬಿ.ಎನ್.ಲಾವಣ್ಯ ಮತ್ತು ಶ್ರೀರಂಗಪಟ್ಟಣ ಡಿವೈಎಸ್‍ಪಿ ಕೆ.ಬಿ.ವಿಶ್ವನಾಥ್, ಮಾರ್ಗದರ್ಶ ನದಲ್ಲಿ ಸಿಪಿಐ ಸಿ.ಎಂ ರವೀಂದ್ರ ನೇತೃತ್ವದಲ್ಲಿ ಎಸ್‍ಐ ಎನ್.ಎಂ ಭವಿತ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ತನಿಖೆಯ ಜಾಡು ಹಿಡಿದ ತನಿಖಾ ತಂಡ ಪ್ರಕರಣ ಸಂಬಂಧ ಮೊಳ್ಳೇನಹಳ್ಳಿಯ ಪ್ರದೀಪನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆತ ನೀಡಿದ ಮಾಹಿತಿ ಮೇರೆಗೆÀ ರಾಜು, ತಮಿಳುನಾಡು ಮೂಲದ ಪೆರುಮಾಳ್‍ನನ್ನು ಬಂಧಿಸಲಾಯಿತು.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಳವು ಮಾಡಿದ್ದ ರಾಕ್ ಹೈಡ್ರಾಲಿಕ್ ರಾಕ್ ಬ್ರೇಕರ್ ಮತ್ತು 2 ಬ್ಯಾಟರಿ, ಕೃತ್ಯಕ್ಕೆ ಬಳಸಿದ್ದ ಹಿರೋಹೊಂಡಾ ಸ್ಪ್ಲೆಂಡರ್ ಪ್ಲಸ್(ಕೆಎ.41, ಕ್ಯೂ.1237), ಬಜಾಜ್ ಪಲ್ಸ್‍ರ್ (ಕೆಎ.04, ಇವಿ.9659) ಬೈಕ್‍ಗಳನ್ನು ಹಾಗೂ ಟಿಪ್ಪರ್ ಲಾರಿ(ಕೆಎ-51, ಎ-1424), 5 ಮೊಬೈಲ್‍ಗಳು ಸೇರಿದಂತೆ ಒಟ್ಟು, 36 ಲಕ್ಷದ 80ಸಾವಿರ ರೂ. ಬೆಲೆ ಬಾಳುವ ಉಪಕರಣಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಕೃಷ್ಣ ಶೆಟ್ಟಿ, ವಿಜಯ್ ಕುಮಾರ್, ಟಿ.ಎ.ಕುಮಾರ್, ಶಿವಕುಮಾರ್, ಕಿರಣ್, ಮಲ್ಲಪ್ಪ, ಶಿವಾನಂದ, ಆನಂದ, ಇಮ್ರಾನ್ ಖಾನ್, ಸಿದ್ದೇಗೌಡ, ಚೇತನ್ ಕುಮಾರ್ ಭಾಗವಹಿಸಿದ್ದರು.

Translate »