ಸಾರ್ವಜನಿಕರಿಂದ ಥಳಿತ: ವ್ಯಕ್ತಿ ಸಾವು
ಮೈಸೂರು

ಸಾರ್ವಜನಿಕರಿಂದ ಥಳಿತ: ವ್ಯಕ್ತಿ ಸಾವು

January 21, 2020

ಮೈಸೂರು,ಜ.20(ಆರ್‍ಕೆ)- ಮೇಕೆಗಳ ಕಳವಿಗೆ ಯತ್ನಿಸುತ್ತಿದ್ದರೆಂಬ ಆರೋಪದ ಹಿನ್ನೆಲೆ ಯಲ್ಲಿ ಸಾರ್ವಜನಿಕರಿಂದ ಥಳಿತಕ್ಕೊಳಗಾದ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ಮೈಸೂರಿನ ಬೆಲವತ್ತ ಗ್ರಾಮದ ಬಳಿ ಸಂಭವಿಸಿದೆ. ಮೈಸೂರಿನ ಉದಯಗಿರಿ ನಿವಾಸಿ ಜಹೀರುದ್ದೀನ್ (25) ಸಾವನ್ನಪ್ಪಿದವರಾಗಿದ್ದು, ಗಾಯಗೊಂಡಿರುವ ಕಾರ್ತಿಕ್‍ನನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಜಹೀರುದ್ದೀನ್ ಅವರ ಸಹೋದರ ರೆಹಮತ್ತುಲ್ಲಾ ಈ ಬಗ್ಗೆ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಅಣ್ಣ ಜಹೀರುದ್ದೀನ್ ಭಾನುವಾರ ಬೆಳಿಗ್ಗೆ 7.30 ಗಂಟೆ ವೇಳೆಗೆ ಎಂದಿನಂತೆ ಆಟೋ ತೆಗೆದುಕೊಂಡು ಮನೆಯಿಂದ ಹೊರ ಹೋದ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಶಫೀವುಲ್ಲಾ ನನಗೆ ಫೋನ್ ಮಾಡಿ ಜಹೀರುದ್ದೀನ್ ಮೃತ ದೇಹ ಕೆ.ಆರ್. ಆಸ್ಪತ್ರೆ ಶವಾಗಾರದಲ್ಲಿದೆ ಎಂದು ಹೇಳಿದ್ದರಿಂದ ನಾನು ಅಲ್ಲಿಗೆ ಹೋಗಿ ನೋಡಿದಾಗ ನನ್ನ ಅಣ್ಣ ಸತ್ತು ಹೋಗಿರುವುದು ದೃಢಪಟ್ಟಿತು ಎಂದು ರೆಹಮತ್ತುಲ್ಲಾ ದೂರಿನಲ್ಲಿ ತಿಳಿಸಿ ದ್ದಾರೆ. ಕಾರ್ತಿಕ್ ಮೇಲೆ ಹಲ್ಲೆ ಆಗಿರುವುದನ್ನು ತಿಳಿದು ದೊಡ್ಡಾಸ್ಪತ್ರೆಗೆ ತೆರಳಿ ವಿಚಾರಿಸಿ ದಾಗ ಬೆಲವತ್ತ ಗ್ರಾಮದಲ್ಲಿ ಮೇಕೆ ಕದಿಯಲು ಹೋಗಿ ಸಿಕ್ಕಿಹಾಕಿಕೊಂಡಿದ್ದರಿಂದ ಜನರು ಹಲ್ಲೆ ಮಾಡಿದರೆಂದು ಅಲ್ಲಿ ಮಾತನಾಡಿಕೊಳ್ಳುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ತಕ್ಷಣ ನಾನು ಬೆಲವತ್ತ ಗ್ರಾಮಕ್ಕೆ ಹೋದೆ. ಅಲ್ಲಿನ ಗ್ರಾಮಸ್ಥರೊಬ್ಬರು ಈ ದಿನ ಮಧ್ಯಾಹ್ನ 12.30 ಗಂಟೆ ವೇಳೆಗೆ ನನ್ನ ಅಣ್ಣ ಜಹೀರುದ್ದೀನ್ ಹಾಗೂ ಕಾರ್ತಿಕ್ ಇಬ್ಬರೂ ಆಟೋದಲ್ಲಿ ಬಂದು ಮೇಕೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದುದನ್ನು ಕಂಡ ಜನರು ಕಾರ್ತಿಕ್‍ನನ್ನು ವಾಟರ್ ಟ್ಯಾಂಕ್ ಬಳಿ ಹಿಡಿದುಕೊಂಡರು. ಜಹೀರುದ್ದೀನ್ ವೇಗವಾಗಿ ಆಟೋ ಓಡಿಸಿಕೊಂಡು ಹೋಗುತ್ತಿದ್ದಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಆಟೋ ಮಗುಚಿ ಬಿದ್ದಿತು. ಹಿಂಬಾಲಿಸಿ ಬರುತ್ತಿದ್ದ ಜನರು ಹಿಡಿದುಕೊಂಡು ಹೊಡೆದರು ಎಂದು ಹೇಳಿದರು ಎಂದು ರೆಹಮತ್ತುಲ್ಲಾ ಮೇಟಗಳ್ಳಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ವಿಷಯ ತಿಳಿಸಿದ ಪೊಲೀಸರು ಸ್ಥಳಕ್ಕೆ ಬಂದು ಆಂಬುಲೆನ್ಸ್‍ನಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ಕಳುಹಿಸಿಕೊಟ್ಟರು ಎಂದು ಗ್ರಾಮಸ್ಥರು ಹೇಳಿದರು ಎಂದು ತಿಳಿಸಿರುವ ರೆಹಮತ್ತುಲ್ಲಾ, ನನ್ನ ಅಣ್ಣನನ್ನು ಹೊಡೆದು ಹತ್ಯೆಗೈದಿರುವವರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮೇಟಗಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಲ್ಲೆ ನಡೆಸಿ ವ್ಯಕ್ತಿ ಸಾವಿಗೆ ಕಾರಣರಾಗಿರುವ ಆರೋಪಿಗಳ ಪತ್ತೆಗಾಗಿ ಇನ್ಸ್‍ಪೆಕ್ಟರ್ ರಾಘವೇಂದ್ರಗೌಡ ಅವರು ಬೆಲವತ್ತ ಗ್ರಾಮದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

Translate »