ಚಿಂತಾಮಣಿ ಗಂಗಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ  ಇಬ್ಬರು ಮಹಿಳೆಯರ ಸಾವು
ಮೈಸೂರು

ಚಿಂತಾಮಣಿ ಗಂಗಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರ ಸಾವು

January 28, 2019

ಚಿಂತಾಮಣಿ: ಹನೂರು ತಾಲೂಕು ಸುಳವಾಡಿ ಕಿಚ್‍ಗುತ್ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಚಿಂತಾಮಣಿಯ ನಾರಸಿಂಹ ಪೇಟೆಯ ಗಂಗಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಶುಕ್ರವಾರ ನಡೆದ ವಿಶೇಷ ಪೂಜೆ ಕೈಂಕರ್ಯದಲ್ಲಿ ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು, ಈ ವೇಳೆ ನೀಡಲಾದ ಸಿಹಿ ಪೊಂಗಲ್ ಪ್ರಸಾದ ಸೇವಿಸಿದ ಪರಿಣಾಮ ಕವಿತಾ ಎಂಬುವರು ಅಂದೇ ಮೃತಪಟ್ಟಿದ್ದರು. ದೇವಸ್ಥಾನಕ್ಕೆ ಹೋಗದಿದ್ದರೂ ಮಗಳ ಮನೆಗೆ ಹೋಗಿದ್ದಾಗ ಮಗಳು ತಂದು ಕೊಟ್ಟ ವಿಷ ಪ್ರಸಾದವನ್ನು ಸೇವಿಸಿ, ತೀವ್ರ ವಾಗಿ ಅಸ್ವಸ್ಥಗೊಂಡಿದ್ದ 56 ವರ್ಷದ ಸರಸ್ವತಮ್ಮ ಎಂಬುವರು ಇಂದು ಮೃತಪಟ್ಟರು.

ಈ ಘಟನೆಯಲ್ಲಿ 9 ಮಂದಿ ಅಸ್ವಸ್ಥಗೊಂಡು ಕೋಲಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಹಿ ಪೊಂಗಲ್ ತಯಾರಿಸಲು ಹಳೇ ತುಪ್ಪ ಮತ್ತು ಹಳೇ ಕೊಬ್ಬರಿ ಬಳಸಿದ್ದೇ ಪ್ರಸಾದ ವಿಷವಾಗಲು ಕಾರಣವಾಯಿತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಚಕ ಸೇರಿದಂತೆ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವ ಚಿಂತಾಮಣಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಮೃತಪಟ್ಟ ಕವಿತಾ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೇ, ವೈಯಕ್ತಿಕವಾಗಿ 20 ಸಾವಿರ ಧನ ಸಹಾಯ ಮಾಡಿದರು.

Translate »