ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಸರ್ವಾಧಿಕಾರಿ ಧೋರಣೆ
ಮೈಸೂರು

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಸರ್ವಾಧಿಕಾರಿ ಧೋರಣೆ

August 11, 2019

ಮೈಸೂರು, ಆ.10(ಪಿಎಂ)- ಜಮ್ಮು ಮತ್ತು ಕಾಶ್ಮೀರದ ಜನಾಭಿಪ್ರಾಯವನ್ನೇ ಕೇಳದೇ ಅಲ್ಲಿಗೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಬಂದೂಕು ಧಾರಿ ಸೈನಿಕರನ್ನು ನಿಯೋಜಿಸಿದ್ದು, ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ, ಸಾಮ್ರಾಜ್ಯ ಶಾಹಿ ಧೋರಣೆ ಯಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ (ಜನ್ನಿ) ಆಕ್ಷೇಪ ವ್ಯಕ್ತಪಡಿಸಿದರು.

ಮೈಸೂರಿನ ಪುರಭವನದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಮೈಸೂರು ಜಿಲ್ಲಾ ಶಾಖೆ ವತಿಯಿಂದ `ಮೋದಿಯ ನವಭಾರತದಲ್ಲಿ ಯಾರಿಗೆ ಬಂತು ಸ್ವಾತಂತ್ರ್ಯ?; ನರೇಂದ್ರ ಮೋದಿ ಆಡಳಿತದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯಗಳ ಸ್ಥಿತಿಗತಿಗಳು’ ಕುರಿತು ಶನಿವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಕೇಂದ್ರ ಸರ್ಕಾರ ಅನುಸರಿಸಿದ ಕ್ರಮದ ವಿರುದ್ಧ ಪ್ರತಿಭಟಿಸುವಂತಿಲ್ಲ ಎಂದು ಇಡೀ ದೇಶಕ್ಕೆ ಒಂದು ರೀತಿ ಸಂದೇಶ ರವಾನೆಯಾಗಿದೆ. ಇಂತಹ ದುಷ್ಟ ಕಾಲದಲ್ಲಿ ನಾವಿದ್ದು, ನಮ್ಮ ಆಲೋ ಚನೆಗಳು ಎಚ್ಚರಗೊಂಡು ಎಲ್ಲರೂ ಒಗ್ಗೂಡಬೇಕಿದೆ. ಪ್ರಸ್ತುತದ ಸ್ಥಿತಿ ಬಗ್ಗೆ ಎಚ್ಚರಗೊಂಡು ನಮ್ಮ ಮುಂದಿನ ಪೀಳಿಗೆಯ ಬದುಕಿಗೆ ದಾರಿ ಮಾಡಿಕೊಡಬೇಕಿದೆ.  ಡಾ.ಅಂಬೇಡ್ಕರ್ ಇಡೀ ಪ್ರಪಂಚದ ಜ್ಞಾನ ಸಂಕೇತ. ಅಂತಹ ಶಕ್ತಿಯ ಚಿಂತನೆಗಳು ನಮ್ಮೊಂದಿಗೆ ಇದ್ದು, ನಮ್ಮ ಶಕ್ತಿ ಅರಿತುಕೊಳ್ಳಬೇಕು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಅರ್ಥೈಸಿಕೊಳ್ಳುವ ಮೂಲಕ ಜಾಗೃತಗೊಳ್ಳಬೇಕು ಎಂದು ಹೇಳಿದರು.

ಮೂಲಭೂತವಾದಿಗಳು, ದಲಿತರು ಶ್ರಮಿಕರಾ ದರೂ ಅವರು ಗೌರವದ ಬದುಕು ಮಾಡಲಾಗದ ಪರಿಸ್ಥಿತಿ ನಿರ್ಮಿಸಿದ್ದರು. ಇವರು ಮತ್ತೆ ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿ ಸುತ್ತಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದೇಶಾದಾದ್ಯಂತ ದಲಿತರ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ. ಈ ಸಂಬಂಧ ಯಾವುದೇ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದ ಉದಾಹರಣೆ ಇಲ್ಲ ಎಂದು ಕಿಡಿಕಾರಿದರು.

ವಿಷಯ ಮಂಡಿಸಿದ ಪ್ರಗತಿಪರ ಚಿಂತಕ ಶಿವ ಸುಂದರ್, ನೆರೆ ಹಾವಳಿ ಮೂಲಕ ಕಷ್ಟಕರ ದಿನಗಳು ರೂಪಕವಾಗಿ ನಮ್ಮ ಕಣ್ಮುಂದೆ ಇವೆ. ಇಂತಹ ಪ್ರಾಕೃತಿಕ ವೈಫಲ್ಯದಲ್ಲಿ ನಲುಗುತ್ತಿರುವ ಜನತೆ ರಕ್ಷಣೆಗೆ ಮುಂದಾಗಬೇಕಾದ ಸರ್ಕಾರವೇ ರಾಜ್ಯದಲ್ಲಿಲ್ಲ. ನೆರೆ ಪರಿಹಾರಕ್ಕೆ ಅಂದಾಜು 5 ಸಾವಿರ ಕೋಟಿ ರೂ. ಬೇಕೆಂದು ಅಂದಾಜಿಸಲಾಗಿದ್ದು, ಇದಕ್ಕಾಗಿ ಪ್ರಧಾನಿ ಎದುರು ಅಂಗಲಾಚಿ ಬೇಡುವ ಪರಿಸ್ಥಿತಿ ಎದುರಾಗಿದ್ದು, ಭಾರತ ಎಂದರೆ ನರೇಂದ್ರ ಮೋದಿ ಎಂದು ಬಿಂಬಿಸಲಾಗುತ್ತಿದೆ.

ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿ ವ್ಯವಸ್ಥೆ ಗಳು ದೇಶದಲ್ಲಿ ಪ್ರಬಲವಾಗಿ ಇರುವವರೆಗೆ ಅಸಮಾ ನತೆ ಮುಂದುವರೆಯುತ್ತಲೇ ಇರುತ್ತದೆ. 2014 ಲೋಕಸಭಾ ಚುನಾವಣೆ ವೇಳೆ ಮೋದಿಯವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವು ದಾಗಿ ಹೇಳಿದ್ದರು. ಜೊತೆಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ದೇಶಕ್ಕೆ ಕಪ್ಪು ಹಣ ತರುತ್ತೇವೆ ಎಂಬಿತ್ಯಾದಿ ಸುಳ್ಳು ಭರವಸೆಗಳನ್ನು ನೀಡಿ ದ್ದರು. 2019ರ ಚುನಾವಣೆಯಲ್ಲಿ ಭಯೋತ್ಪಾದಕ ರನ್ನು ದಮನ ಮಾಡುತ್ತೇವೆ ಎಂದು ಭಾರೀ ಬೆಂಬಲ ಪಡೆದರು. ಇವರ ಪ್ರಕಾರ ಭಯೋತ್ಪಾ ದಕರು ಎಂದರೆ ಇವರು ಹೇಳಿದ್ದನ್ನು ವಿರೋಧಿಸು ವವರೇ ಆಗಿದ್ದಾರೆ ಎಂದು ಟೀಕಿಸಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಹೆಬ್ಬಾಲೆ ಲಿಂಗರಾಜು, ಹೆಚ್.ಸಿ.ಸಿದ್ದಲಿಂಗಯ್ಯ, ರಾಜ್ಯ ಸಮಿತಿ ಸದಸ್ಯ ಪ್ರೊ. ಹುಲ್ಕೆರೆ ಮಹದೇವ, ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮತ್ತಿತರರು ಹಾಜರಿದ್ದರು.

Translate »