ರಂಗಾಯಣ ನಿರ್ದೇಶಕರ ವಜಾ: ಸರ್ಕಾರದ ನಿಲುವಿಗೆ ರಂಗಕರ್ಮಿಗಳ ವ್ಯಾಪಕ ಖಂಡನೆ
ಮೈಸೂರು

ರಂಗಾಯಣ ನಿರ್ದೇಶಕರ ವಜಾ: ಸರ್ಕಾರದ ನಿಲುವಿಗೆ ರಂಗಕರ್ಮಿಗಳ ವ್ಯಾಪಕ ಖಂಡನೆ

September 17, 2019

ಮೈಸೂರು,ಸೆ.16(ಎಂಟಿವೈ)- ಯಾವುದೇ ಕಾರಣವಿಲ್ಲದೆ ರಂಗಾಯಣದ ನಿರ್ದೇ ಶರನ್ನು ವಜಾಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಮೂರ್ಖತನದ್ದಾಗಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಕಿಡಿಕಾರಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಯತ್ತ ಸಂಸ್ಥೆ ಯಾಗಿರುವ ರಂಗಾಯಣಕ್ಕೆ ರಾಜಕೀಯ ಲೇಪನ ಮಾಡುವ ಸಂಚು ನಡೆಯುತ್ತಿದೆ. ಕಲಾವಿದರನ್ನು ಬಿಜೆಪಿ, ಕಾಂಗ್ರೆಸ್ ಸದ ಸ್ಯರು ಎಂಬ ಪರಿಕಲ್ಪನೆಯಲ್ಲಿ ಯೋಚಿಸ ಬಾರದು. ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡದೇ ತನ್ನದೇ ಆದ ಮಹತ್ವ ಕಾಯ್ದುಕೊಂಡಿರುವ ಏಕೈಕ ಸಂಸ್ಥೆ ರಂಗಾಯಣ. ರಂಗ ಸಮಾಜದ ಮೂಲಕ ನಡೆಯುವ ಸಂಸ್ಥೆಯಲ್ಲಿ ಸರ್ಕಾರದ ಹಸ್ತ ಕ್ಷೇಪ ಇರಬಾರದು. ರಂಗಾಯಣ ಸ್ಥಾಪನೆ ವೇಳೆ ನೀತಿ ನಿಯಮ ರೂಪಿಸುವಾಗ ಸರ್ಕಾರದ ಹಸ್ತಕ್ಷೇಪ ಮಾಡುವಂತಿಲ್ಲ. ಮೂರು ವರ್ಷದ ಅವಧಿಗೆ ನಿರ್ದೇ ಶಕರನ್ನು ನಿಯೋಜಿಸಿ, ಯಾವುದೇ ನಿರ್ಧಾರದಲ್ಲೂ ಮುಖ್ಯಾಧಿಕಾರಿಯಂತೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿ ಕೊಡಲಾಗಿತ್ತು. ಆದರೆ ಯಾವುದೇ ಕಾರಣ ನೀಡದೆ, ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದ ರಂಗಾಯಣದ ನಿರ್ದೇ ಶಕರನ್ನು ವಜಾಗೊಳಿಸುವ ಮೂಲಕ ಸರ್ಕಾರ ಉದ್ಧಟತನ ಪ್ರದರ್ಶಿಸಿದೆ ಎಂದು ಅಸಮಾಧಾನ ಹೊರ ಹಾಕಿದರು.

ರಂಗಾಯಣದ ನಿರ್ದೇಶಕರ ವಜಾಗೊ ಳಿಸಿರುವುದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ ಎಂದು ಕಾಣುತ್ತದೆ. ಅಧಿಕಾರಿ ಗಳು ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಯಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರನ್ನು ಯಾವ ಕಾರಣ ಇಲ್ಲದೆ ಹೇಗೆ ವಜಾಗೊಳಿಸುವುದಿಲ್ಲವೋ ಅದೇ ಮಾದರಿಯಲ್ಲಿ ರಂಗಾಯಣ ನಿರ್ದೇಶ ಕರನ್ನೂ ತೆಗೆಯುವಂತಿಲ್ಲ. ನೀತಿ, ನಿಯಮ ಅರಿಯದೆ, ವಜಾಗೊಳಿಸಿರುವುದು ಕಾನೂನಾ ತ್ಮಕವಾಗಿ ತಪ್ಪು ಹೆಜ್ಜೆಯಾಗಿದೆ ಎಂದರು.

ರಂಗಭೂಮಿ ಕ್ಷೇತ್ರದಲ್ಲಿ ಕ್ರಿಯಾಶೀಲ ರಾಗಿ ಕರ್ತವ್ಯ ನಿರ್ವಹಿಸದವರನ್ನು ವಜಾ ಗೊಳಿಸಿದ್ದರೆ ಸರಿ ಎನ್ನಬಹುದಿತ್ತು. ಚೆನ್ನಾಗಿ ಕೆಲಸ ನಿರ್ವಹಿಸುವವರನ್ನೇ ತೆಗೆದರೆ ಹೇಗೆ? ಗುಲ್ಬರ್ಗಾದಲ್ಲಿ ಸರಿಯಾಗಿ ಕೆಲಸ ಮಾಡದೇ ಅಧಿಕಾರ ಕಳೆದುಕೊಳ್ಳಬೇಕಾ ದವರು ಪ್ರಧಾನಿ ಮೋದಿ ಪರವಾಗಿ ಒಂದು ನಾಟಕ ಮಾಡಿ ಸ್ಥಾನ ಉಳಿಸಿ ಕೊಂಡರು. ಅವರ ಬೇಜವಾಬ್ದಾರಿ ವಿರುದ್ಧ ಇಡೀ ರಂಗ ಸಮಾಜವೇ ತಿರುಗಿಬಿದ್ದು ವಜಾಗೊಳಿಸುವಂತೆ ಆಗ್ರಹಿಸಿದರೂ ಮಣಿಯದ ಸರ್ಕಾರ, ಈಗ ಯಾವುದೇ ಕಾರಣ ನೀಡದೇ ಅವಧಿ ಮುಗಿಯು ವುದಕ್ಕೂ ಮುನ್ನ ವಜಾಗೊಳಿಸುವ ಕ್ರಮಕೈಗೊಂಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ವಿಮರ್ಶಕ ರಾಜೇಂದ್ರ ಚೆನ್ನಿ ಮಾತ ನಾಡಿ, ಸರ್ಕಾರ ಹೊರಡಿಸಿರುವ ಆದೇಶ ವನ್ನು ಪುನರ್ ಪರಿಶೀಲಿಸಬೇಕು. ಸಾಂಸ್ಕøತಿಕವಾಗಿ ಕೆಲಸ ಮಾಡುವ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ರಂಗಾಯಣ ಸ್ಥಳೀಯ ಸಂಸ್ಕøತಿಗೆ ಅಪಾರ ಕೊಡುಗೆ ನೀಡಿದೆ. ಸಾಂಸ್ಕøತಿಕವಾಗಿ ಅರ್ಥಪೂರ್ಣ ಕೆಲಸ ಮಾಡುತ್ತಿದೆ. ಈವರೆಗೂ ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗಿಲ್ಲ. ಸರ್ಕಾರದ ಈ ನಿರ್ಧಾರಗಳಿಂದ ರಂಗ ಭೂಮಿ ಕ್ಷೇತ್ರಕ್ಕೆ ರಾಜಕೀಯ ಸ್ವರೂಪ ನೀಡುವುದು ಸರಿಯಲ್ಲ. ಸರ್ಕಾರ, ಮತ್ತೊಮ್ಮೆ ಯೋಚಿಸಿ ನಿರ್ದೇಶಕರು ಕ್ರಿಯಾಶೀಲವಾಗಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದರು.

ಕಲಾವಿದರಿಗೆ ಮಾಡಿದ ಅಪಮಾನ: ರಂಗಾಯಣದ ಮಾಜಿ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮಾತನಾಡಿ, ದೂರದ ಅಸ್ಸಾಂನಲ್ಲಿ ರಂಗ ಚಟುವಟಿಕೆ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾನು ರಂಗಾಯಣದ ಮೇಲಿನ ಪ್ರೀತಿ ಯಿಂದ ಆ ರಾಜ್ಯ, ಕುಟುಂಬದಿಂದ ದೂರಾಗಿ ಇಲ್ಲಿಗೆ ಬಂದು ರಂಗಾಯಣ ನಿರ್ದೇಶಕ ರಾಗಿ ಕೆಲಸ ಮಾಡುತ್ತಿದ್ದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಂಗಾಯಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆ. ಆದರೆ ಏಕಾಏಕಿ ಯಾವುದೇ ಕಾರಣವಿಲ್ಲದೆ ಸ್ಥಾನದಿಂದ ಬಿಡುಗಡೆಗೊಳಿಸಿರುವುದು ನೋವುಂಟು ಮಾಡಿದೆ ಎಂದು ವಿಷಾದಿಸಿದರು.

ತಾವು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿಗಳ ಪರ, ವಿರುದ್ಧವಾಗಿ ಇಲ್ಲದೇ ರಂಗಾಯಣ ಚಟುವಟಿಕೆಯನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೆ. ನನ್ನನ್ನು ಬಿಡುಗಡೆಗೊಳಿಸು ವುದಾಗಿ ಒಂದೇ ಒಂದು ಸಾಲಿನ ಪತ್ರದ ಮೂಲಕ ತಿಳಿಸಲಾಗಿದೆ. ತಾವು ರಂಗ ಭೂಮಿ ಬಗ್ಗೆ ಹೊಂದಿರುವ ಗೌರವ, ಪ್ರೀತಿ, ರಂಗಾಯಣ ಬೆಳೆದು ಬಂದ ಬಗೆ ಗಮನದಲ್ಲಿರಿಸಿಕೊಂಡು ಅಷ್ಟು ದೂರ ದಿಂದ ಬಂದುದ್ದಲ್ಲದೆ, ಬಳಿಕ ರಂಗಾ ಯಣ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿ, ಕಾಲೇಜು, ಯುವಜನರ ಬಳಿಗೂ ಕೊಂಡೊಯ್ದಿದ್ದೆ. ತಾವು ಬರುವ ಮೊದಲು ರಂಗಾಯಣಕ್ಕೆ ತರಬೇತಿಗಾಗಿ ಕೇವಲ 30- 35 ಮಂದಿ ಬರುತ್ತಿದ್ದವರು ಈಗ ಆ ಸಂಖ್ಯೆ 150 ಕ್ಕೆ ಏರಿಸಿದೆ. ಸಕ್ರೀಯತೆಯಲ್ಲಿ ತೊಡಗಿದ್ದ ವೇಳೆ ಸರ್ಕಾರ ಈ ರೀತಿ ಮಾಡಿರುವುದು ಸರಿಯೇ? ಎಂದು ಪ್ರಶ್ನಿಸಿದರಲ್ಲದೆ, ತಮ್ಮ ಅವಧಿ ಇನ್ನೂ 10 ತಿಂಗಳಿತ್ತು. ಅದು ಪೂರ್ಣ ಗೊಳ್ಳುವ ಮೊದಲೇ ಈ ಅಪಮಾನ ಹಾಗೂ ಆಘಾತಕಾರಿ ಕ್ರಮ ಕೈಗೊಳ್ಳಲಾ ಗಿದೆ ಎಂದು ನೋವಿನಿಂದ ನುಡಿದರು.

ರಂಗಕರ್ಮಿ ಜನಾರ್ಧನ್ (ಜೆನ್ನಿ) ಮಾತನಾಡಿ, ಸರ್ಕಾರಗಳು ಜೀವ ತೆಗೆಯು ವುದಕ್ಕೇ ಇರುವಂತಿದೆ. ನೆರೆ ಸಂತ್ರಸ್ತರ ಗೋಳು, ರೈತರ ಆತ್ಮಹತ್ಯೆ, ಆರ್ಥಿಕ ಕುಸಿತದ ಕಡೆ ಗಮನಹರಿಸದೇ ಮಾಡ ಬಾರದ ಕೆಲಸಕ್ಕೆ ಕೈಹಾಕಿದೆ. ರಂಗಾಯಣಕ್ಕೆ ರಾಜಕೀಯ ಉದ್ದೇಶವಿಲ್ಲ. ಜನಪರ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಅದರ ನೆಲೆ-ಹಿನ್ನೆಲೆ ಅರಿಯದೇ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸಾಂಸ್ಕøತಿಕ ವಾಗಿ ಎಸಗಿದ ದೊಡ್ಡ ಅಪರಾಧ. ಸಾಂಸ್ಕøತಿಕ ಚಟುವಟಿಕೆಯ ಹಾಗೂ ಜನ ಸಮುದಾಯ ಸಂಸ್ಥೆಯ ಲೂಟಿ ಸರಿಯಲ್ಲ. ಸರ್ಕಾರ ಆತ್ಮಾವಲೋಕನ ಮಾಡಿಕೊಂಡು ಸ್ವಾಯತ್ತತೆ ನೀಡಬೇಕು ಎಂದು ಒತ್ತಾಯಿಸಿದರು. ಧಾರವಾಡದ ರಂಗಾ ಯಣದ ಮಾಜಿ ನಿರ್ದೇಶಕ ಪ್ರಕಾಶ್ ಗರುಢ ಮಾತನಾಡಿ, ಸರ್ಕಾರದ ನಿಲುವು ಅನಿಷ್ಠ ಪದ್ಧತಿ. ಕಲಾವಿದರನ್ನು ಒಡೆಯುವ ಪ್ರಕ್ರಿಯೆ ಖೇದದ ಸಂಗತಿ. ಇಂಥ ಪರಂಪರೆಗೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.

Translate »