ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು
ಮಂಡ್ಯ

ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು

July 21, 2018

ಮಂಡ್ಯ:  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ನಗರದ ಸಂಜಯ ವೃತ್ತದ ಬಳಿಯ ಆರ್.ಪಿ ರಸ್ತೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಕಮಾನು ಗಾಳಿಗೆ ಉರುಳಿ ಬಿದ್ದ ಘಟನೆ ನಗರದಲ್ಲಿಂದು ನಡೆಯಿತು.ಇಂದು ಬೆಳಿಗ್ಗೆ 11ರ ಸುಮಾರಿನಲ್ಲಿ ಗಾಳಿಗೆ ಸ್ವಾಗತ ಕಮಾನು ಉರುಳಿ ಬಿತ್ತಾದರೂ ಸ್ಥಳದಲ್ಲಿ ಹೆಚ್ಚಿನ ಜನ ಸಂಚಾರವಿಲ್ಲ ದಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಸ್ವಾಗತ ಕಮಾನು ಉರುಳಿ ಬಿದ್ದುದನ್ನು ಕಂಡ ಸ್ಥಳದಲ್ಲಿದ್ದ ಪೊಲೀಸರು ಕುಸಿದ ಕಮಾನನ್ನು ತಕ್ಷಣವೇ ತೆರವು ಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರ್.ಪಿ.ರಸ್ತೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಈ ಮಾರ್ಗದಲ್ಲಿ ಸಂಚಾರವೂ ವಿರಳವಾಗಿತ್ತು.

ಸಿಎಂಗಾಗಿ ಕಾದು ಸುಸ್ತಾದ ಜನ: ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋ ಜಿಸಲಾಗಿದ್ದ ಜಿಲ್ಲೆಯ ಜನರಿಗೆ ಕೃತಜ್ಞತಾ ಸಭೆಗೆ ಆಗಮಿಸಿದ್ದ ಜಿಲ್ಲೆಯ ಜನರು, ಸಿಎಂಗಾಗಿ ಕಾದು ಕಾದು ಸುಸ್ತಾದ ಪ್ರಸಂಗವು ನಡೆಯಿತು. ಸಂಜೆ 4 ಗಂಟೆಯ ಕಾರ್ಯಕ್ರಮಕ್ಕೆ ಬೆಳಿಗ್ಗೆಯೇ ನಗರಕ್ಕೆ ಬಂದಿದ್ದ ಜಿಲ್ಲೆಯ ವಿವಿಧೆಡೆಯ ಜನರು ಸಂಜೆ 6.40 ಆದರೂ ಕಾರ್ಯಕ್ರಮ ಆರಂಭವಾಗದ ಹಿನ್ನಲೆಯಲ್ಲಿ ಬೇಸತ್ತು ಮನೆಯ ದಾರಿ ಹಿಡಿದ ದೃಶ್ಯ ಕಂಡುಬಂತು.

Translate »