17ನೇ ಲೋಕಸಭೆ ಚುನಾವಣೆ ಮುಕ್ತಾಯಕೊನೆಯ ಹಂತದಲ್ಲಿ ಶೇ.64.26 ದಾಖಲೆ ಮತದಾನ
ಮೈಸೂರು

17ನೇ ಲೋಕಸಭೆ ಚುನಾವಣೆ ಮುಕ್ತಾಯಕೊನೆಯ ಹಂತದಲ್ಲಿ ಶೇ.64.26 ದಾಖಲೆ ಮತದಾನ

May 20, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಶತ್ರುಘ್ನ ಸಿನ್ಹಾ, ಮನೀಷ್ ತಿವಾರಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಿಗೆ ಇಂದು ನಡೆದ ಏಳನೇ ಹಂತದ ಮತದಾನ ಅಂತ್ಯ ಗೊಂಡಿದೆ. ಈ ಮೂಲಕ 17ನೇ ಲೋಕ ಸಭೆ ಚುನಾವಣೆಯ 7 ಹಂತದ ಮತ ದಾನ ಮುಗಿದಿದ್ದು, ಭಾರತದ ಮುಂದಿನ ಐದು ವರ್ಷಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ವಾರಣಾಸಿ ಸೇರಿದಂತೆ ಎಂಟು ರಾಜ್ಯಗಳ 59 ಕ್ಷೇತ್ರಗಳಿಗೆ ನಡೆದ ಮತದಾನ ಮುಕ್ತಾಯವಾಗಿದ್ದು, ಶೇ.64.26ರಷ್ಟು (5 ಗಂಟೆಯ ವೇಳೆಗೆ) ಮತದಾನವಾಗಿದೆ. ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಏಳು ರಾಜ್ಯಗಳಲ್ಲಿ ನಡೆದ ಮತದಾನದಲ್ಲಿ 918 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರ ನಿರ್ಣಯಿಸಿದ್ದಾರೆ. ಐದು ಗಂಟೆವರೆಗೆ 59 ಲೋಕಸಭಾ ಕ್ಷೇತ್ರಗಳಲ್ಲಿ ಶೇ.64.26ರಷ್ಟು ಮತದಾನ ನಡೆದಿದೆ. ಬಿಹಾರದಲ್ಲಿ ಶೇ.53.36, ಹಿಮಾಚಲ ಪ್ರದೇಶ- ಶೇ.71.24, ಮಧ್ಯಪ್ರದೇಶದಲ್ಲಿ ಶೇ.75.53, ಪಂಜಾಬ್‍ನಲ್ಲಿ ಶೇ.65.77ರಷ್ಟು, ಉತ್ತರ ಪ್ರದೇಶದಲ್ಲಿ ಶೇ.58.01ರಷ್ಟು, ಪಶ್ಚಿಮಬಂಗಾಳದಲ್ಲಿ ಶೇ. 73.51ರಷ್ಟು, ಜಾರ್ಖಂಡ್‍ನಲ್ಲಿ ಶೇ 71.16, ಛತ್ತೀಸ್‍ಗಢದಲ್ಲಿ ಶೇ 63.57ರಷ್ಟು ಮತದಾನವಾಗಿದೆ.

ಇಂದು ಬೆಳಿಗ್ಗೆಯಿಂದ ಆರಂಭವಾದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಆದರೆ, ಪ್ರತಿ ಹಂತದ ಮತದಾನದ ವೇಳೆಯಂತೆ ಈ ಬಾರಿಯ ಮತದಾನದಲ್ಲಿಯೂ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಪಂಜಾಬಿನಲ್ಲೂ ಕೆಲವೆಡೆ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ಪಶ್ಚಿಮಬಂಗಾಳದ ಉತ್ತರ ಕೋಲ್ಕತ್ತಾದಲ್ಲಿ ಚುನಾವಣಾ ಅಧಿಕಾರಿಗಳು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಪಕ್ಷ ಅಭ್ಯರ್ಥಿಗಳ ಆರೋಪಿಸಿದ್ದಾರೆ. ಚುನಾವಣಾ ಅಧಿಕಾರಿಗಳು ನಮ್ಮನ್ನು ಥಳಿಸಿ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಸಿಪಿಐ ಅಭ್ಯರ್ಥಿ ಘೋಷ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ, ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಕೂಡ ತಮಗೆ ಚುನಾವಣಾ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ಚಿಮಬಂಗಾಳದ ಹಿಂಸಾಚಾರ ಕುರಿತು ಮಾತನಾಡಿರುವ ಮಮತಾ ಬ್ಯಾನರ್ಜಿ, ಮತದಾನದ ವೇಳೆ ಬಿಜೆಪಿ ಹಾಗೂ ಸಿಆರ್‍ಪಿಎಫ್ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ಈ ರೀತಿಯ ದೌರ್ಜನ್ಯ ನಾನು ಕಂಡಿರಲಿಲ್ಲ ಎಂದು ಮತ ಚಲಾವಣೆ ಬಳಿಕ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ನಡೆದ ಹಿಂಸಾಚಾರ ಕುರಿತು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಆಯೋಗಕ್ಕೆ 417 ದೂರನ್ನು ದಾಖಲಿಸಿದ್ದು, ಇದರಲ್ಲಿ 227 ಪ್ರಕರಣ ಬಗೆಹರಿದಿದೆ. ಇನ್ನೂ 190 ಪ್ರಕರಣ ಬಾಕಿ ಇದೆ ಎಂದಿದ್ದಾರೆ. ಪ್ರಧಾನಿ ಮೋದಿ ಸ್ಪರ್ಧಿಸಿರುವ ವಾರಣಾಸಿಯಲ್ಲಿ ಶಾಂತಿಯುತ ಮತದಾನವಾಗಿದೆ. ಏಪ್ರಿಲ್ 23ರಂದು ಕೇರಳದ ಕಣ್ಣೂರಿನ ಏಳು ಮತಗಟ್ಟೆಗಳು ಹಾಗೂ ಕಾಸರಗೋಡಿನಲ್ಲಿ ನಡೆದಿದ್ದ ಮೂರನೇ ಹಂತದ ಮತದಾನದ ವೇಳೆ ನಕಲಿ ಮತದಾನವಾದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಮತದಾನವನ್ನು ಇಂದು ನಡೆಸಲಾಯಿತು. ಲೋಕಸಭಾ ಚುನಾವಣೆ ಜೊತೆಗೆ ಇಂದು ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳು, ಗೋವಾದ ಒಂದು ಕ್ಷೇತ್ರ ಹಾಗೂ ತಮಿಳುನಾಡಿನ ನಾಲ್ಕು ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಡೆದಿದೆ.

Translate »