ನಮ್ಮನ್ನು ವ್ಯಂಗ್ಯವಾಗಿ ತೋರಿಸುವ ಹಕ್ಕು ನಿಮಗೆ ಕೊಟ್ಟಿದ್ದು ಯಾರು? ನಾವೇನು ಕಾಮಿಡಿ ಪೀಸ್‍ಗಳಾ…?
ಮೈಸೂರು

ನಮ್ಮನ್ನು ವ್ಯಂಗ್ಯವಾಗಿ ತೋರಿಸುವ ಹಕ್ಕು ನಿಮಗೆ ಕೊಟ್ಟಿದ್ದು ಯಾರು? ನಾವೇನು ಕಾಮಿಡಿ ಪೀಸ್‍ಗಳಾ…?

May 20, 2019

ಮೈಸೂರು: `ರಾಜಕಾರಣಿಗಳನ್ನು ವ್ಯಂಗ್ಯವಾಗಿ ತೋರಿ ಸುವ ಹಕ್ಕು ಕೊಟ್ಟಿದ್ದು ಯಾರು?’. `ನಾವೇನು ಕಾಮಿಡಿ ಪೀಸ್‍ಗಳಾ?’. ಎಲ್ಲದಕ್ಕೂ ಇತಿಮಿತಿ ಇರುತ್ತದೆ. ನಿಮ್ಮ ಟಿಆರ್‍ಪಿಗಾಗಿ ನಮ್ಮನ್ನೇಕೆ ಬಳಸಿಕೊಳ್ಳುತ್ತೀರಿ? ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ನೈತಿಕತೆ ಕಳೆದುಕೊಳ್ಳುತ್ತಿವೆ. ಈ ಹಿಂದೆ ಇದ್ದ ಗಾಂಭಿರ್ಯ ದೂರವಾಗು ತ್ತಿದೆ. ಇದರ ಪರಿಣಾಮದಿಂದಲೇ ಕಳೆದ ಒಂದು ತಿಂಗಳಿಂದ ಮಾಧ್ಯಮದವರಿಂದ ದೂರ ಇದ್ದೇನೆ. ಅಪಾಯಕಾರಿಯಾಗಿ ರುವ ಪತ್ರಕರ್ತರ ಸಹವಾಸ ಬೇಡವೇ ಬೇಡ. ವಿದ್ಯುನ್ಮಾನದ ಸುದ್ದಿ ನೋಡಿದರೆ ನಮಗೆ ಗಾಬರಿಯಾಗುತ್ತದೆ. ಎರಡನೇ ಶನಿವಾರ ರಜೆ ಇದ್ದುದ್ದರಿಂದ ವಿಶ್ರಾಂತಿ ಪಡೆಯಲು ರೆಸಾರ್ಟ್‍ಗೆ ಹೋದರೆ ಅದನ್ನೇ ಅಪರಾಧ ಎಂಬಂತೆ ಟಿವಿಗಳಲ್ಲಿ ಸುದ್ದಿ ಪ್ರಸಾರ ಮಾಡಿದರು. ತಿರುಪತಿ ಯಿಂದ ಶನಿವಾರ ಮೈಸೂರಿಗೆ ಬಂದು ವಾಸ್ತವ್ಯ ಹೂಡಿದರೆ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ಯಿಂದ ವಿಚಲಿತರಾದ ಸಿಎಂ ಸಚಿವ ರೊಂದಿಗೆ ಚರ್ಚಿಸಿ ರಾಜಕೀಯ ತಂತ್ರಗಾರಿಕೆ ಹೂಡುತ್ತಿದ್ದಾರೆ ಎಂದು ಪ್ರಸಾರವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಚಾನಲ್‍ಗಳು ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಲು ಇಲ್ಲ ಸಲ್ಲದ ಸುದ್ದಿ ಪ್ರಸಾರ ಮಾಡುತ್ತಿವೆ. ಟಿಆರ್‍ಪಿಗಾಗಿ ನಮ್ಮನ್ನು ಬಳಸಿಕೊಳ್ಳುತ್ತಿವೆ. ಹಾಸ್ಯಭರಿತ ಸನ್ನಿವೇಶ ಗಳಲ್ಲಿ ರಾಜಕಾರಣಿಗಳನ್ನು ತೋರಿಸುತ್ತೀರಿ. ಆ ಅಧಿಕಾರ ನಿಮಗೆ ಕೊಟ್ಟವರಾರು?. ಮಾಧ್ಯಮಗಳಿಂದ ನಾನು ಮುಖ್ಯಮಂತ್ರಿಯಾ ಗಿಲ್ಲ, ಅವುಗಳಿಂದಾಗಿ ನಾನು ಬದುಕಿಲ್ಲ. ರಾಜ್ಯದ ಆರೂವರೆ ಕೋಟಿ ಜನರ ಆಶೀ ರ್ವಾದ ನನ್ನ ಮೇಲಿದೆ.

ಅದಕ್ಕಾಗಿ ನಾನು ಮಾಧ್ಯಮಗಳಿಂದ ದೂರ ಇರಲು ನಿರ್ಧರಿಸಿದ್ದೇನೆ. ಅವುಗಳನ್ನು ಲೆಕ್ಕಕ್ಕೂ ಇಟ್ಟುಕೊಂಡಿಲ್ಲ. ಇತ್ತೀಚಿನ ಮಾಧ್ಯಮಗಳಲ್ಲಾಗುತ್ತಿರುವ ಬೆಳವಣಿಗೆ ಯನ್ನು ಗಮನಿಸಿದರೆ ಮಾಧ್ಯಮಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸಬೇಕು ಎಂದೆನಿಸುತ್ತದೆ. ಈ ಬಗ್ಗೆ ಚಿಂತನೆ ಮಾಡಲು ನಿರ್ಧರಿಸಿದ್ದೇನೆ. ಇದರಿಂದ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳನ್ನು ಮಾಧ್ಯಮಗಳು ಮಾಡಲೂಬಹುದು ಎಂದರು.
ನಿಮಗೆ ಚಾನಲ್ ನಡೆಸಲು ಆಗದಿದ್ದರೆ, ಮುಚ್ಚಿಬಿಡಿ. ನೀವು
ಉದ್ಧಾರವಾಗಲು ಇನ್ನೊಬ್ಬರ ತೇಜೋವಧೆ ಮಾಡುವ ಸುದ್ದಿ ಯಾಕೆ ಪ್ರಕಟಿಸುತ್ತೀರಿ. ಇಲ್ಲ ಸಲ್ಲದ ಸುದ್ದಿ, ತಮ್ಮ ಊಹೆ, ಕಲ್ಪನೆಯಿಂದ ನೀವು ನೀಡುವ ಸುದ್ದಿಯಿಂದ ರಾಜ್ಯಕ್ಕೇನೂ ಲಾಭವಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ದಿನದಿಂದಲೂ ಮಾಧ್ಯಮದಿಂದ ಕಿರುಕುಳ ಅನುಭವಿಸಿದ್ದೇನೆ. ನನ್ನ ನೋವು ನಿಮಗೆ ಅರ್ಥವಾಗುವುದಿಲ್ಲವೇ?, ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ರಾಜ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದು ತೀಕ್ಷ್ಣವಾಗಿ ಕಿಡಿಕಾರಿದರು.

ನಮ್ಮ ಕುಟುಂಬ ಪಂಚಾಯ್ತಿ ಸದಸ್ಯರಿಂದ ಪ್ರಧಾನಮಂತ್ರಿ ಹುದ್ದೆವರೆಗೂ ಅಧಿಕಾರ ಅನುಭವಿಸಿದೆ. 1999ರಲ್ಲಿ ಹೆಚ್.ಡಿ.ದೇವೇಗೌಡರು ಪ್ರಧಾನಿ ಮಂತ್ರಿಯಾಗಿದ್ದಾಗ ಖುಷಿ ಪಡುವವರಿಗಿಂತ ಅಸೂಯೆ ಪಡುವವರ ಸಂಖ್ಯೆಯೇ ಹೆಚ್ಚಾಗಿತ್ತು. ಅವರ ಅಧಿಕಾರದ ನಂತರ ನಡೆದ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೋಲನನುಭವಿಸಿದೆವು. ಸೋಲು-ಗೆಲುವು ನಮ್ಮ ಕುಟುಂಬಕ್ಕೆ ಹೊಸದಲ್ಲ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರೆ. ಇದರಿಂದ ಮುಖ್ಯಮಂತ್ರಿಗಳು ಹೆದರಿದ್ದಾರೆ ಎಂಬೆಲ್ಲಾ ವರದಿ ಪ್ರಸಾರವಾಗಿದೆ. ನಾನು ಯಾವುದೇ ವರದಿಯನ್ನು ಪಡೆದಿಲ್ಲ. ದೇಶದ ಯಾವುದೇ ರಾಜ್ಯದಲ್ಲಿಲ್ಲದ ನಿಯಮವನ್ನು ನಮ್ಮ ರಾಜ್ಯದಲ್ಲಿ ಚುನಾವಣಾ ಆಯೋಗ ಜಾರಿಗೆ ತಂದಿದೆ. ನೀತಿಸಂಹಿತೆ ಇರುವುದರಿಂದ ಮುಖ್ಯಮಂತ್ರಿಗೆ ಚುನಾವಣೆ ಸಂಬಂಧಿಸಿದ ವರದಿ ನೀಡದಂತೆ ಗುಪ್ತಚರ ಇಲಾಖೆಯ ಡಿಜಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ ಎಂದು ಆರೋಪಿಸಿದರು.

ನಮ್ಮ ಕುಟುಂಬ ಮೊದಲಿನಿಂದಲೂ ದೇವರನ್ನು ನಂಬಿಕೊಂಡು ಬಂದಿದೆ. ಇದರಿಂದಾಗಿ ನಾನು ಇಂದಿಗೂ ದೇವಾಲಯಕ್ಕೆ ಹೋಗುತ್ತೇನೆ. ಇದನ್ನು ಟೆಂಪಲ್ ರನ್ ಎಂದು ಸುದ್ದಿ ಮಾಡಿದ್ದೀರಿ. ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಗುಹೆ ಧ್ಯಾನ ಮಾಡಲು ಹೋಗಿದ್ದನ್ನು ಮಾತ್ರ ದೇಶದ ಜನರ ಹಿತಕ್ಕಾಗಿ ಎಂದು ಬಿಂಬಿಸುತ್ತೀರಿ. ಪ್ರಧಾನಿ ಖುರ್ಚಿ ಅಲುಗಾಡುತ್ತಿರುವುದರಿಂದಲೇ ಧ್ಯಾನದ ಹೆಸರಿನಲ್ಲಿ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಪ್ರವಾಹದಿಂದ ಕೇದಾರನಾಥದಲ್ಲಿ ಆಗಿದ್ದ ಹಾನಿಯನ್ನು ಸರಿಮಾಡುವುದಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೊನೆ ಹಂತದ ಚುನಾವಣೆಗೆ ಒಂದು ದಿನ ಬಾಕಿ ಇರುವಂತೆ ಧ್ಯಾನ ಮಾಡಲು ಹೋಗಿದ್ದನ್ನು ಮಾಧ್ಯಮಗಳು ಪ್ರಶ್ನೆ ಮಾಡಲಿಲ್ಲ ಯಾಕೆ ಎಂದು ಅಸಮಾಧಾನ ಹೊರಹಾಕಿದರು.
ಒಂದೇ ಕಲ್ಲಿಗೆ ಎರಡು ಹಕ್ಕಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ನಾನು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡಿದ್ದು ನಿಜ. ಹಳೆ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡರ ಕುಟುಂಬದ ಮೇಲೆ ನಡೆಯುತ್ತಿರುವ ದಾಳಿಯಂತೆ, ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಮೇಲೆ ದಾಳಿ ನಡೆಯುತ್ತಿದೆ. ಇದನ್ನು ಅರಿತು ಅಲ್ಲಿನ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಖರ್ಗೆ ಅವರ ಬಗ್ಗೆ ಮಾತನಾಡಿದ್ದೇನೆ. ಅದನ್ನೇ ಮಾಧ್ಯಮಗಳು ಮುಂದಿಟ್ಟುಕೊಂಡು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನ ಮಾಡಿದವು. ಸಿದ್ದರಾಮಯ್ಯ ಅವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಪ್ಪು ಮಾಹಿತಿಯುಳ್ಳ ವರದಿ ಪ್ರಸಾರ ಮಾಡಿವೆ. ಸಚಿವ ಪುಟ್ಟರಂಗಶೆಟ್ಟಿ ಇಂದು ಸಹ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆನ್ನುವುದು ನನ್ನಾಸೆಯಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ಅವರ ನೆರವಿನಿಂದಲೇ ರಾಜಕೀಯವಾಗಿ ಮೇಲ್ಮಟ್ಟಕ್ಕೇರುತ್ತಿರುವ ಪುಟ್ಟರಂಗಶೆಟ್ಟರು ತನ್ನ ಅಭಿಪ್ರಾಯವನ್ನು ಹೇಳಿರುವುದರಲ್ಲಿ ತಪ್ಪೇನಿಲ್ಲ. ಆದರೆ ಮಾಧ್ಯಮಗಳು ನಾಯಕತ್ವ ಬದಲಾವಣೆಗೆ ಒತ್ತಾಯಿಸಿದರು ಎಂದು ತಿರುಚುವುದು ಸರಿಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ್, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರುಗಳಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್.ನಾಗೇಂದ್ರ, ಅನಿಲ್ ಚಿಕ್ಕಮಾದು, ಅಶ್ವಿನ್‍ಕುಮಾರ್, ಹರ್ಷವರ್ಧನ್, ವಿಧಾನ ಪರಿಷತ್ ಸದಸ್ಯರುಗಳಾದ ಆರ್.ಧರ್ಮಸೇನಾ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ವಾಸು, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಂಕಣಕಾರ ಗುಬ್ಬಿಗೂಡು ರಮೇಶ್, ರೂಪ ಪ್ರಕಾಶನ ಸಂಸ್ಥೆ ಪ್ರಕಾಶಕ ಮಹೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಿಎಂ ಕುರ್ಚಿ ಭದ್ರವಾಗಿದೆ
ಮೇ 23ರಂದು ಪ್ರಕಟವಾಗುವ ಲೋಕಸಭಾ ಚುನಾವಣೆಯ ನಂತರ ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ವಾಹಿನಿಗಳಲ್ಲಿ ಸುದ್ದಿ ಬಂದಿದೆ. ಸಿಎಂ ಕುರ್ಚಿ ಅಲುಗಾಡುತ್ತಿದೆ. ಸಿಎಂ ಗಡಗಡ, ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವೆ ಮುನಿಸು, ಬಿರುಕುಗೊಳ್ಳುತ್ತಿದೆ ಮೈತ್ರಿ ಎಂಬೆಲ್ಲಾ ಶೀರ್ಷಿಕೆಯಲ್ಲಿ ವರದಿ ಬಂದಿದೆ. ಆದರೆ ಇವು ಸತ್ಯಕ್ಕೆ ದೂರವಾದ ಸುದ್ದಿ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸಿದ್ದರಾಮಯ್ಯ ನಮ್ಮ ನಾಯಕ. ಅವರ ಮಾರ್ಗದರ್ಶನದಲ್ಲಿ ಸರ್ಕಾರ ಮುನ್ನಡೆಸುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜಾರಿಗೊಳಿ ಸಿದ್ದ ಬಹುತೇಕ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ನನ್ನ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಫಲಿತಾಂಶದ ನಂತರ ಮುಖ್ಯಮಂತ್ರಿ ಹಾಗೂ ಮಂತ್ರಿ ಗಳಾಗುತ್ತೇವೆಂದು ಕನಸು ಕಾಣುತ್ತಿರುವ ಬಿಜೆಪಿ ಕೆಲ ನಾಯಕರು ಹೊಸದಾಗಿ ಸೂಟು ಬೂಟು ತೆಗೆದುಕೊಂಡು ಕಾಯುತ್ತಿ ದ್ದಾರೆ. ಅವರ ಕನಸು ನನಸಾಗುವುದಿಲ್ಲ. ಸರ್ಕಾರ ಸುಭದ್ರವಾಗಿದ್ದು, ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಬಫೂನ್ ರೀತಿ ತೋರಿಸ್ತಾರೆ
ಮೈಸೂರು: ಮಾಧ್ಯಮಗಳ ಮೇಲೆ ನಿಯಂ ತ್ರಣ ಕಾಯ್ದೆ ತರಬೇಕು ಎನ್ನುವ ಸಿಎಂ ಹೆಚ್.ಡಿ. ಕುಮಾರ ಸ್ವಾಮಿ ಅವರ ಮಾತಿಗೆ ನಮ್ಮ ಸಹಮತ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮಾಧ್ಯಮದವರು ಬರೆದು ತೋರಿಸ ಬೇಕು, ಮಾಧ್ಯಮದಲ್ಲಿ ವಾರಕ್ಕೆ ಒಬ್ಬರು ಜೈಲಿಗೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮಾಧ್ಯಮ ಗಳ ಮೇಲೆ ನಿಯಂತ್ರಣ ಕಾಯ್ದೆ ತರಬೇಕು ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರ ಪ್ರಸ್ತಾಪಿ ಸಿದ ವಿಶ್ವನಾಥ್, ಸಿಎಂ ಮಾತಿಗೆ ನಮ್ಮ ಸಹಮತ ಇದೆ. ಅವರು ಹೇಳಿದ್ದು ಮಾಧ್ಯಮಕ್ಕೆ ಸಂಪೂರ್ಣ ನಿಯಂತ್ರಣ ಅಲ್ಲ. ಮಾಧ್ಯಮಗಳ ಕೆಲವು ಕಾರ್ಯಕ್ರಮಗಳು ನಿಯಂ ತ್ರಣವಾಗಬೇಕಿದೆ. ರಾಜಕಾರಣಿಗಳನ್ನು ಬಫೂನ್ ರೀತಿ ತೋರಿಸಿ ನಗೆಪಾಟಲಿಗೆ ಈಡುಮಾಡಿ ಮುಜುಗರ ತರುತ್ತಾರೆ. ಇದು ಅಷ್ಟು ಸಮಂಜಸವಲ್ಲ. ರಾಜಕಾರಣಿಗಳಿಗೆ ಅವಮಾನವಾಗುವಂತಹ ಕಾರ್ಯಕ್ರಮ ಬೇಡ ಎಂದು ಕೈ ಮುಗಿದು ಮನವಿ ಮಾಡಿಕೊಂಡರು.

ಇದೇ ವೇಳೆ ಹೊರಟ್ಟಿ ಅವರ ಮೈತ್ರಿ ಸರ್ಕಾರ ವಿಸರ್ಜನೆ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಸಂದರ್ಭದಲ್ಲಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಅಧಿಕಾರ ಪಡೆದ ಕೇವಲ ಒಂದು ವರ್ಷಕ್ಕೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಮಾಡೋದು ಸರಿಯಲ್ಲ. ಅಲ್ಲದೆ ಮೈತ್ರಿ ಸರ್ಕಾರ ಎಂದರೆ ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತೆ. ಸಿದ್ದರಾಮಯ್ಯನವರು ಇವತ್ತು ಡೆಲ್ಲಿಗೆ ಹೋಗಿ ಸಮಸ್ಯೆ ಸರಿಮಾಡಿಕೊಂಡು ಬರುತ್ತಾರೆ. ಇಷ್ಟಕ್ಕೆಲ್ಲ ಸರ್ಕಾರ ವಿಸರ್ಜನೆ ಮಾಡಲು ಆಗುತ್ತಾ ಎಂದು ಮತ್ತೊಮ್ಮೆ ಹೊರಟ್ಟಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.

ಮೋದಿ ಮಾಧ್ಯಮದವರಿಗೆ ಹೆದರುತ್ತಿದ್ದಾರೆ. ಈ ಹಿಂದೆ ಯಾವ ಪ್ರಧಾನಿಯೂ ಮಾಧ್ಯಮಕ್ಕೆ ಹೆದರಿಲ್ಲ. ಆದರೆ ಯಾಕೆ ಮೋದಿ ಮಾಧ್ಯಮಕ್ಕೆ ಹೆದರುತ್ತಿದ್ದಾರೆ. ಸಿನಿಮಾ ನಟನಿಂದ ಮೋದಿ ಸಂದರ್ಶನ ಮಾಡಿಸಿಕೊಳ್ಳುತ್ತಾರೆ. ಆದರೆ ಪತ್ರಕರ್ತರ ಸಂದರ್ಶನಕ್ಕೆ ಹೆದರುತ್ತಾರೆ ಎಂದು ಪ್ರಧಾನಿ ಅವರನ್ನು ಲೇವಡಿ ಮಾಡಿದರು.

Translate »