ಭವಿಷ್ಯದ ಅಂಬಾರಿ ಆನೆ ಗುರುತಿಸುವ ಸವಾಲಿನಲ್ಲಿ ಅರಣ್ಯ ಇಲಾಖೆ
ಮೈಸೂರು

ಭವಿಷ್ಯದ ಅಂಬಾರಿ ಆನೆ ಗುರುತಿಸುವ ಸವಾಲಿನಲ್ಲಿ ಅರಣ್ಯ ಇಲಾಖೆ

September 12, 2019

ಮೈಸೂರು,ಸೆ.11- ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಆನೆಗಳನ್ನು ಸಜ್ಜುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಮಾಡುವ ಪ್ರಯತ್ನಕ್ಕೆ ಹಲವು ಅಡೆತಡೆ ವ್ಯಕ್ತವಾಗು ತ್ತಿದ್ದು, ಇದರಿಂದ ಆರೇಳು ವರ್ಷದ ನಂತರ ಯಾವ ಆನೆ ಮೇಲೆ ಅಂಬಾರಿ ಹೊರಿಸಬೇಕು ಎಂಬ ಜಿಜ್ಞಾಸೆಯಲ್ಲಿ ಸಿಲುಕಿದೆ.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ 60 ವರ್ಷ ಮೇಲ್ಪಟ್ಟ ಆನೆಗಳ ಮೇಲೆ ಭಾರ ಹೊರಿಸುವುದನ್ನು ನಿರ್ಬಂಧಿಸ ಲಾಗಿದೆ. ಇದರಿಂದ 59 ವರ್ಷದ `ಅರ್ಜುನ’ ಇದೇ ಕೊನೆ ಬಾರಿಗೆ ಅಂಬಾರಿ ಹೊರುವುದು ಖಚಿತವಾಗಿದೆ. ಮುಂದಿನ ವರ್ಷದಿಂದ 53 ವರ್ಷದ ಅಭಿಮನ್ಯು ಆರು ವರ್ಷ ಅಂಬಾರಿ ಹೊರಲು ಸಮರ್ಥನಾಗಿದ್ದಾನೆ. ನಂತರದ ವರ್ಷದಿಂದ ಯಾವ ಆನೆ ಅಂಬಾರಿ ಹೊರಲಿದೆ ಎನ್ನುವುದೇ ಇದೀಗ ಯಕ್ಷಪ್ರಶ್ನೆಯಾಗಿದೆ. ಈ ದೊಡ್ಡ ಸವಾಲನ್ನು ಮುಂದಿಟ್ಟು ಕೊಂಡಿರುವ ಅರಣ್ಯ ಇಲಾಖೆ ಗೊಂದಲದ ಗೂಡಿನೊಳಗೆ ಸಿಲುಕಿ, ಮುಂದೇನು ಎಂಬ ಚಿಂತೆಗೆ ಈಡಾಗಿದೆ.

ಎರಡನೇ ಹಂತದ ಆನೆ ತಯಾರಿಗೆ ಆದÀ್ಯತೆ: ದಸರಾ ಗಜ ಪಡೆಯಲ್ಲಿ ಅಂಬಾರಿ ಹೊರುವ ಸಾಮಥ್ರ್ಯವಿರುವ ಆನೆ ಗಳನ್ನು ಕರೆತಂದು ಐದಾರು ವರ್ಷ ತರಬೇತಿ ನೀಡಿ ಸಜ್ಜು ಗೊಳಿಸುವ ಚಿಂತನೆಯಲ್ಲಿ ಅರಣ್ಯ ಇಲಾಖೆ ತೊಡಗಿದೆ. ಮುಂದಿನ 10 ವರ್ಷದ ನಂತರ ಅಂಬಾರಿ ಹೊರುವ ಆನೆಯನ್ನು ಈಗಿನಿಂದಲೇ ಸಜ್ಜುಗೊಳಿಸಬೇಕೆಂದು ಪಣ ತೊಟ್ಟಿರುವ ಅಧಿಕಾರಿಗಳು ಸಮರ್ಥ ಹೊಸ ಆನೆಗಳಿಗೆ ಮಣೆ ಹಾಕಿ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿಭಾಯಿಸ ತೊಡಗಿ ದ್ದಾರೆ. ಎರಡು ಹಾಗೂ ಮೂರನೇ ಹಂತದ ಆನೆಗಳಿಗೆ ತಯಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ವಿಕ್ರಮ (46), ಗೋಪಿ(37), ಧನಂಜಯ(36), ಈಶ್ವರ(49), ಗೋಪಾಲಸ್ವಾಮಿ(36) ಆನೆಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ ಮೈಸೂರಿಗೆ ಬಂದಿರುವ ಜಯಪ್ರಕಾಶ್(57) ಆನೆಯನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಪರ್ಯಾಯ ಆನೆಯಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ತಲೆನೋವಾಗಿ ಪರಿಣಮಿಸಿರುವ ಅಡೆ ತಡೆ: ಹೊಸ ಹೊಸ ಆನೆಗಳನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳು ವಂತೆ ಸಜ್ಜುಗೊಳಿಸಲು ಹೊಸ ಪ್ರಯೋಗಕ್ಕೆ ಮುಂದಾಗಿ ರುವ ಅರಣ್ಯ ಇಲಾಖೆಗೆ ಸಣ್ಣ-ಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಬಿಂಬಿತವಾಗುತ್ತಿರುವುದು ನುಂಗಲಾರದ ತುತ್ತಾಗಿದೆ ಹಾಗೂ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಈ ಬಾರಿ `ಈಶ್ವರ’ ಹೊಸ ಆನೆಯನ್ನು ಮೊದಲ ತಂಡದಲ್ಲಿಯೇ ಮೈಸೂರಿಗೆ ಕರೆತರಲಾಗಿದ್ದು, ತೀವ್ರ ಹೃದಯಾಘಾತದಿಂದ ಮೃತಪಟ್ಟ `ದ್ರೋಣ’ನ ಪರ್ಯಾಯ ವಾಗಿ ಬಳಸಲು ಯೋಜಿಸಲಾಗಿದೆ. ಹೊಸದಾಗಿ ಬಂದಿ ರುವ ಆನೆ ವಾಹನಗಳ ಜೋರಾದ ಹಾರನ್ ಶಬ್ದಕ್ಕೆ ಸ್ವಲ್ಪ ಹೆದರುತ್ತಿದೆ. ಅದು ಸಹಜವೂ ಆಗಿದೆ. ಈ ಸುದ್ದಿ ದೊಡ್ಡಮಟ್ಟ ದಲ್ಲಿ ಪ್ರಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಂದಿದೆ. ಇದರಿಂದ ಆ ಆನೆಯನ್ನು ವಾಪಸ್ ಕಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವರ್ಷ ಹೊಸ ಈಶ್ವರ ಆನೆಗೆ ತರಬೇತಿ ನೀಡಿದರೆ, ಅಭಿಮನ್ಯುವಿನ ನಂತರ ಐದು ವರ್ಷ ಅಂಬಾರಿ ಹೊರುವ ಸಾಮಥ್ರ್ಯವಿದೆ. ಸದೃಢ ಮೈಕಟ್ಟು, ದಷ್ಟಪುಷ್ಟ ಶರೀರ ಹೊಂದಿ ರುವುದರಿಂದ ಸತತ ಐದು ವರ್ಷ ತರಬೇತಿ ನೀಡಿದರೆ ಮತ್ತೈದು ವರ್ಷ ಅಂಬಾರಿ ಹೊರಲು ಸಜ್ಜಾಗುತ್ತಾನೆ ಎಂಬ ಚಿಂತನೆಯೊಂದಿಗೆ ಕರೆತರಲಾಗಿದೆ. ಆತನಿಗೆ 55 ವರ್ಷವಾದರೆ ಸ್ವಭಾವ ಮತ್ತಷ್ಟು ಸೌಮ್ಯವಾಗಲಿದೆ. ಇದರಿಂದ ಆತನಲ್ಲಿ ಪ್ರಬುದ್ಧತೆ ಹೆಚ್ಚಾಗಲಿದೆ ಎಂಬ ಲೆಕ್ಕಾಚಾರ ಇಲಾಖೆ ಅಧಿಕಾರಿಗಳಲ್ಲಿದೆ. ಆದರೆ ವಾಪಸ್ ಕಳಿಸಿದರೆ ಹೊಸ ಆನೆ ಯನ್ನು ಸಜ್ಜುಗೊಳಿಸುವುದು ಹೇಗೆ ಎಂಬ ಚಿಂತೆ ಅಧಿಕಾರಿ ಗಳಲ್ಲಿ ಕಾಡುತ್ತಿದೆ. 13 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾಗಿ ರುವ ಬಲರಾಮ ಈ ವರ್ಷ ಮೆರವಣಿಗೆ ಮುಂಚೂಣಿ ಯಲ್ಲಿ ಸಾಲಾನೆಯಾಗಿ ಸಾಗಲಿದ್ದಾನೆ. ಮುಂದಿನ ವರ್ಷ ಅರ್ಜುನ ಮೆರವಣಿಗೆ ಮುಂಚೂಣಿಯಲ್ಲಿ ಸಾಗಲಿದ್ದಾನೆ.

ಎಂ.ಟಿ.ಯೋಗೇಶ್ ಕುಮಾರ್

Translate »