ಮೈಸೂರಲ್ಲಿ ಕಣ್ಮನ ಸೆಳೆಯುತ್ತಿದೆ ಬೆಳಕಿನ ವೈಭವ
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಕಣ್ಮನ ಸೆಳೆಯುತ್ತಿದೆ ಬೆಳಕಿನ ವೈಭವ

October 9, 2018

ಮೈಸೂರು:  ದಸರಾ ವಿದ್ಯುತ್ ದೀಪಾ ಲಂಕಾರ ಅದುವೇ ಬೆಳಕಿನ ಚಿತ್ತಾರ… ಕವಿದ ಕತ್ತಲ ಹಿನ್ನೆಲೆಯಲ್ಲಿ ನಾನಾ ಬಗೆಯಲ್ಲಿ ಬೆಳಕು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ತರಲಿದೆ.

ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೆ, ಇಡೀ ನಗರವೇ ಕತ್ತಲಾಗುತ್ತಿದ್ದಂತೆ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಬೆಳಕಿನ ವೈಯ್ಯಾರವನ್ನೇ ಕಣ್ಣಿಗೆ ಕಟ್ಟಲಿದೆ. ಈಗಾಗಲೇ ದಸರಾ ಮಹೋತ್ಸವಕ್ಕೆ ನಗರ ಸಜ್ಜಾಗಿದ್ದು, ವಿದ್ಯುತ್ ದೀಪಗಳ ಬಗೆಬಗೆಯ ಬಣ್ಣದ ಬೆಳಕು ಕತ್ತಲಾ ಗುತ್ತಿದ್ದಂತೆ ಮನತಣಿಸಲು ಶುರುವಾಗಿದೆ.

ದಸರಾ ದೀಪಾಲಂಕಾರ ಉಪಸಮಿತಿ ಈ ಬಾರಿ 2.75 ಕೋಟಿ ರೂ. ವೆಚ್ಚದಲ್ಲಿ (ಎರಡು ಮುಕ್ಕಾಲು ಕೋಟಿ ರೂ.) ನಗರದ ರಸ್ತೆಗಳು, ವೃತ್ತಗಳನ್ನು ಶೃಂಗಾರ ಮಾಡುತ್ತಿದ್ದು, ಈ ಪೈಕಿ ಅದಾಗಲೇ ಸಿದ್ಧಗೊಂಡಿರುವ ಮಹನೀಯರ ಹಾಗೂ ಖ್ಯಾತ ಕಟ್ಟಡ ಗಳ ಪ್ರತಿಕೃತಿಗಳು ಬೆಳಕಿನ ಪ್ರಜ್ವಲದಲ್ಲಿ ಮೂಡಿ ಬರಲು ಕ್ಷಣಗಣನೆ ಆರಂಭಗೊಂಡಿದೆ. ದೀಪಾಲಂಕಾರ ಉಪಸಮಿತಿಯ ನಿರ್ದೇಶನದಲ್ಲಿ ಬೆಂಗಳೂರು ಜಯನಗರದ ಮೋಹನ್ ಕುಮಾರ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಸಂಸ್ಥೆ ನೋಡುಗರ ಕಣ್ಮನ ತಣಿಸುವಂ ತಹ ಪ್ರಸಿದ್ಧ ಕಟ್ಟಡಗಳ ಹಾಗೂ ಹಲವು ಮಹನೀ ಯರ ಪ್ರತಿಕೃತಿಗಳನ್ನು ಬೆಳಕಿನ ಚಿತ್ತಾರದಲ್ಲಿ ಮೂಡಿಸಲು ಎಲ್ಲಾ ಬಗೆಯ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ಅ.10ರಿಂದ ಈ ಚಿತ್ತಾ ಕರ್ಷ ದೀಪಾಲಂಕಾರಗಳು ಕಂಗೊಳಿಸಲಿವೆ.

ಈ ಬಾರಿ ಐದನೇ ದಸರಾ ಮಹೋತ್ಸವದ ದೀಪಾಲಂಕಾರ ಮಾಡುತ್ತಿದ್ದು, ಎಲ್‍ಇಡಿ ವಿದ್ಯುತ್ ದೀಪಗಳಿಂದ ಪ್ರತಿಕೃತಿ ಸಿದ್ಧಪಡಿಸುವ ಕಲೆ ಕರಗತ ಮಾಡಿಕೊಂಡಿದೆ. ಈ ದಸರಾ ವಿಶೇಷವಾಗಿ ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧೀ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ದಂತೆ ಅನೇಕ ಮಹನೀಯರ ಪ್ರತಿಕೃತಿಗಳನ್ನು ನಗರದಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಮೈಸೂರು ಅರಮನೆ, ಸಂಸತ್ ಭವನ, ವಿಧಾನಸೌಧ ಒಳ ಗೊಂಡಂತೆ ಹತ್ತು ಹಲವು ಪ್ರಸಿದ್ಧ ಕಟ್ಟಡಗಳನ್ನು ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ರೀತಿಯ ಒಟ್ಟು 16 ಕಟೌಟ್ ಮಾದರಿಯ ದೀಪಾಲಂಕಾರ ಗಳನ್ನು ನಗರದ ರಸ್ತೆಗಳು ಹಾಗೂ ವೃತ್ತಗಳಲ್ಲಿ ನಿರ್ಮಿಸಲಾಗಿದೆ.

ಈ ಎಲ್ಲಾ ಪ್ರತಿಕೃತಿಗಳನ್ನು ಬಿದುರಿನ ಪಟ್ಟಿಯ ಆಧಾರದಲ್ಲಿ ಎಲ್‍ಇಡಿ ಬಲ್ಪ್‍ಗಳನ್ನು ಅಳವಡಿಸಿ ಸಿದ್ಧಪಡಿಸಲಾಗಿದೆ. ಮೈಸೂರಿನ ಕುರುಬಾರಹಳ್ಳಿ ವೃತ್ತದಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿ ಕೃತಿ ನಿಲ್ಲಿಸಲಾಗಿದೆ. ಸಿಂಹದೊಂದಿಗೆ ತಾಯಿ ಚಾಮುಂಡಿ ನಿಂತಿರುವ ಭಂಗಿಯಲ್ಲಿ ಮೂಡಿ ಬಂದಿರುವ ಈ ಪ್ರತಿಕೃತಿಯು 40 ಅಡಿ ಎತ್ತರ ಹಾಗೂ 40 ಅಡಿ ಅಗಲದ ಅಳತೆಯಲ್ಲಿ ಪ್ರಜ್ವಲಿಸುತ್ತಿದೆ. ಗನ್‍ಹೌಸ್ ವೃತ್ತದಲ್ಲಿ ಒಂದು ಕಡೆ 40 ಅಡಿ ಎತ್ತರ ಹಾಗೂ 40 ಅಡಿ ಅಗಲದಲ್ಲಿ ಜಯಚಾಮರಾಜ ಒಡೆಯರ್ ಅವರ ಪುತ್ಥಳಿ ಮಾದರಿಯ ಪ್ರತಿಕೃತಿ ನಿರ್ಮಿಸಿದ್ದರೆ, ಮತ್ತೊಂದು ಕಡೆ ಇಂಡಿಯಾ ಗೇಟ್ 40 ಅಡಿ ಎತ್ತರ ಹಾಗೂ 30 ಅಡಿ ಅಗಲದಲ್ಲಿ ಸಿದ್ಧಗೊಂಡಿದೆ.

ಅದೇ ರೀತಿ ಬೆಂಗಳೂರು-ನೀಲಗಿರಿ ರಸ್ತೆಯ ದೊಡ್ಡ ಕೆರೆ ಮೈದಾನದಲ್ಲಿ ಪ್ರತಿಕೃತಿಗಳ ಸಮೂಹ ವನ್ನೇ ನಿರ್ಮಿಸಿದ್ದಂತಾಗಿದ್ದು, ಹಲವು ಬಗೆಯ ಪ್ರತಿಕೃತಿಗಳು ಇಲ್ಲಿ ಕಾಣಸಿಗಲಿವೆ. ಇಲ್ಲಿ ನಿಲ್ಲಿಸಿ ರುವ 40 ಅಡಿ ಎತ್ತರ ಹಾಗೂ 40 ಅಡಿ ಅಗಲದ ಹಂಪಿಯ ಕಲ್ಲಿನ ರಥವು ಹಂಪಿಯ ವೈಭವವನ್ನು ಅನಾವರಣಗೊಳಿಸುತ್ತಿದ್ದರೆ, ಇದೇ ಅಳತೆಯಲ್ಲಿ ಸಿದ್ಧಗೊಂಡಿರುವ ದರ್ಪಣ ಸುಂದರಿಯ ವೈಯ್ಯಾ ರದ ಬೆಳಕಿನ ದೃಶ್ಯಾವಳಿ ನೋಡುಗರಲ್ಲಿ ರೋಮಾಂಚನ ಉಂಟು ಮಾಡಲಿದೆ. ಇದೇ ರೀತಿಯ ಮತ್ತೊಂದು ದರ್ಪಣ ಸುಂದರಿಯ ಪ್ರತಿಕೃತಿಯನ್ನು ಮಹಾರಾಜ ಕಾಲೇಜು ಮೈದಾನದ ಬಳಿಯ ಏಕಲವ್ಯ ವೃತ್ತದಲ್ಲೂ ಅಳವಡಿಸಲಾಗಿದೆ.

ದೀಪಾಲಂಕಾರದಲ್ಲಿ ಜಂಬೂ ಸವಾರಿ: ದೊಡ್ಡ ಕೆರೆ ಮೈದಾನದಲ್ಲೇ ಮತ್ತೊಂದು ಆಕರ್ಷಣೆಯ ಪ್ರತಿಕೃತಿ ಕಣ್ತುಂಬಿಕೊಳ್ಳಬಹುದಾಗಿದ್ದು, ಇಲ್ಲಿ ಚಿನ್ನದ ಅಂಬಾರಿ ಹೊತ್ತ ಗಜಪಡೆಯ ವಿನ್ಯಾಸ ಮೂಡಿಸಲಾಗಿದೆ. 45 ಅಡಿ ಎತ್ತರ ಹಾಗೂ 90 ಅಡಿ ಅಗಲದಲ್ಲಿ ಒಟ್ಟು ಮೂರು ಆನೆಗಳನ್ನು ವಿದ್ಯುತ್ ದೀಪಗಳಲ್ಲಿ ಕಟ್ಟಿಕೊಡಲಾಗಿದೆ. ಇದರ ಪಕ್ಕದಲ್ಲೇ ಕೆಆರ್‍ಎಸ್ ಜಲಾಶಯದ ಪ್ರತಿಕೃತಿ ಇದ್ದು, ಇದನ್ನು 40 ಅಡಿ ಎತ್ತರ ಹಾಗೂ 90 ಅಡಿ ಅಗಲ ವಿಸ್ತಾರದಲ್ಲಿ ನಿರ್ಮಿಸಲಾಗಿದೆ.

ಆಧುನಿಕ ಮೈಸೂರು ನಿರ್ಮಾತೃ: ಇದೇ ದೊಡ್ಡ ಕೆರೆ ಮೈದಾನದಲ್ಲಿ ಮತ್ತೊಂದು ಆಕರ್ಷಣೆಯ ಪ್ರತಿಕೃತಿ ಎಂದರೆ ಅದು ಆಧುನಿಕ ಮೈಸೂರು ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು. ರಾಜಪೋಷಾಕು ಧರಿಸಿರುವ ನಾಲ್ವಡಿಯವರ ರಾಜ ಗಾಂಭೀರ್ಯದ ನೋಟವು 40 ಅಡಿ ಎತ್ತರ ಹಾಗೂ 30 ಅಡಿ ಅಗಲದಲ್ಲಿ ಸಿದ್ಧಗೊಂಡಿದೆ.

ಸಮಾಜ ಸುಧಾರಕರ ಪ್ರತಿಕೃತಿ: ದೊಡ್ಡಕೆರೆ ಮೈದಾನದಲ್ಲಿ ಸಮಾಜ ಸುಧಾರಕರು ಹಾಗೂ ರಾಷ್ಟ್ರ ನಾಯಕರ ಕಟೌಟ್ ಮಾದರಿಯ ಪ್ರತಿಕೃತಿಗಳು ವಿದ್ಯುತ್ ದೀಪಾಲಂಕಾರದಲ್ಲಿ ಅನಾವರಣಗೊಂಡಿವೆ. ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿಯವರ ನಿಂತ ಭಂಗಿಯ ಚಿತ್ತಾರಗಳು ಈ ಮಹನೀಯರ ಸಂದೇಶ ಸಾರಲಿವೆ.

ರಾಮಸ್ವಾಮಿ ವೃತ್ತದಲ್ಲಿ ಮೈಸೂರು ಅರಮನೆ!: ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಮೈಸೂರು ಅರಮನೆ ನಿರ್ಮಿಸಲಾಗಿದೆ! ಹೌದು, ಈ ವೃತ್ತದಲ್ಲಿ ವಿದ್ಯುತ್ ದೀಪಗಳಲ್ಲಿ ಮೈಸೂರು ಅರಮನೆ ಚೆಲು ವಿನ ಚಿತ್ತಾರ ಝಗಮಗಿಸುತ್ತಿದೆ. ಇದನ್ನು 40 ಅಡಿ ಎತ್ತರ ಹಾಗೂ 90 ಅಡಿ ಅಗಲದಲ್ಲಿ ಸಿದ್ಧಪಡಿಸ ಲಾಗಿದೆ. ಜೊತೆಗೆ ಜೆಎಲ್‍ಬಿ ರಸ್ತೆಯ ಮುಡಾ ಕಚೇರಿ ವೃತ್ತದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿ ಕೃತಿಯನ್ನು 40 ಅಡಿ ಎತ್ತರ ಹಾಗೂ 20 ಅಡಿ ಅಗಲದಲ್ಲಿ ನಿರ್ಮಿಸಲಾಗಿದೆ.

ಎಂ.ಬಿ.ಪವನ್‍ಮೂರ್ತಿ

Translate »