ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು, ಮೈಸೂರು ದಸರಾ

ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ ದಸರಾ ಫಲಪುಷ್ಪ ಪ್ರದರ್ಶನ

October 9, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಜರ್‍ಬಾದ್‍ನ ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ 21ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಾವರಿ ಅಲಂಕಾರಿಕ ಹೂವಿನ ಗಿಡಗಳ ಮಧ್ಯ ದಲ್ಲಿ ಹೂವಿನಿಂದಲೇ ತಯಾರಿಸುವ ದೆಹಲಿಯ ಲೋಟಸ್ ಟೆಂಪಲ್, ಅಶೋಕ ಸ್ತಂಭ, ಪೆಂಗ್ವಿನ್,ಫಿರಂಗಿ, ಅಮರ್ ಜವಾನ್ ಸ್ತಂಭ ಸೇರಿದಂತೆ ವಿವಿಧ 13 ಆಕೃತಿಗಳು ಪ್ರವಾಸಿಗರ ಮನ ಸೆಳೆಯಲು ಸಜ್ಜಾಗಿವೆ ಎಂದು ಮೈಸೂರು ಜಿಪಂ ಸಿಇಓ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷರಾದ ಕೆ.ಜ್ಯೋತಿ ತಿಳಿಸಿದರು.

ನಜರ್‌ಬಾದಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಹ ಯೋಗದೊಂದಿಗೆ ಆಯೋಜಿಸಿರುವ 12 ದಿನಗಳ ಫಲಪುಷ್ಪ ಪ್ರದರ್ಶನವನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಉದ್ಘಾಟಿಸಲಿದ್ದು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಉಪಾ ಧ್ಯಕ್ಷರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿರುತ್ತಾರೆ ಎಂದರು.

ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 45 ತಳಿಗಳ 85 ಸಾವಿರ ಹೂವಿನ ಕುಂಡಗಳಲ್ಲಿ ಬೆಳೆಸಲಾಗಿರುವ ಹೂವಿನ ಗಿಡಗಳನ್ನು ವ್ಯವಸ್ಥಿತ ವಾಗಿ ಜೋಡಿಸಲಾಗುತ್ತಿದೆ. ಈ ನಡುವೆ ಪೂರ್ಣಗೊಂಡಿರುವ ಗಾಜಿನ ಮನೆಯಲ್ಲಿ ದೆಹಲಿಯಲ್ಲಿರುವ ಲೋಟಸ್ ಟೆಂಪಲ್ ಅನ್ನು ಗುಲಾಬಿ ಹೂವುಗಳಿಂದ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಆಕರ್ಷಣೆಯೊಂದಿಗೆ ಫಲಪುಷ್ಪ ಪ್ರದರ್ಶನದಲ್ಲಿ 12 ಆಕೃತಿಗಳನ್ನು ಗುಲಾಬಿ ಹಾಗೂ ಇನ್ನಿತರ ಹೂವುಗಳಿಂದ ರಚಿಸುವ ಮೂಲಕ ಸಸ್ಯ ಕಾಶಿಯನ್ನು ನೋಡಲು ಬರುವ ಪ್ರವಾಸಿಗರು ಸಂತೋಷಗೊಳ್ಳುವಂತೆ ಮಾಡಲು ತೋಟಗಾರಿಕಾ ಇಲಾಖೆ ಕಾರ್ಯಕ್ರಮ ರೂಪಿಸಿದೆ.

ಮುದ ನೀಡಲಿವೆ ಆಕೃತಿಗಳು: ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆ ಗಾಜಿನ ಮನೆಯಲ್ಲಿ ಗುಲಾಬಿಯಿಂದ ಅರಳಲಿರುವ ಲೋಟಸ್ ಟೆಂಪಲ್ ಆಗಿದೆ. ಈ ನಡುವೆ ಸಂಗೀತ ಕಾರಂಜಿ ಬಳಿ ಹೂವುಗಳಿಂದ ಅರಮನೆಯ ದ್ವಾರ, ಅಶೋಕ ಸ್ತಂಭ ತಲೆ ಎತ್ತಿ ನಿಲ್ಲಲಿದೆ. ಅಲ್ಲದೆ ಪಾರ್ಕ್‍ನ ವಿವಿಧೆಡೆ ಆಯಾ ಕಟ್ಟಿನ ಸ್ಥಳದಲ್ಲಿ ಹೂವಿ ನಿಂದಲೇ ಸಿದ್ಧಪಡಿಸಲಾಗುವ ಪೆಂಗ್ವಿನ್, ಅಮರ್‍ಜವಾನ್ ಸ್ತಂಭ, ಫಿರಂಗಿ, ಡಾಲ್ಫಿನ್, ಟಿ ಕಪ್ಪು, ಸಾಸರ್, ಜಗ್ಗು, ಟ್ರೀ ಹೌಸ್, ಡೋರ್ಮೋನ್, ಹೆಲ್ಪಿಂಗ್ ಹ್ಯಾಂಡ್, ಡ್ಯಾನ್ಸಿಂಗ್ ಡಾಲ್ಸ್, ಕುಂಬಾರಿಕೆ ಕಲೆ ಸೇರಿದಂತೆ ವಿವಿಧ ಆಕೃತಿಗಳು ನೋಡುಗರ ಮನಸೂರೆಗೊಳ್ಳಲಿವೆ.

ಆಟಿಕೆಗಳು: ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳಿಗೆ ಮನಸೋತವರು ವಿವಿಧ ಆಟಿಕೆಗಳಲ್ಲಿ ಮೈಮರೆತು ಸಂಭ್ರಮಿಸುವುದಕ್ಕೆ ಬೇಕಾಗುವ ತರಹಾವರಿ ಆಟಿಕೆಗಳಿ ರುವ ಅಮ್ಯೂಸ್‍ಮೆಂಟ್ ಪಾರ್ಕ್ ಸಿದ್ಧಪಡಿಸಲಾಗುತ್ತಿದೆ. ಮಕ್ಕಳಿಂದ ಹಿರಿಯರು ಪಾಲ್ಗೊಂಡು ಸಂಭ್ರಮಿಸಬಹುದಾಗಿದ್ದು, ಉದ್ಯಾನವನದಲ್ಲಿ ಮಿನಿ ಸಂಗೀತ ಕಾರಂಜಿ ಇರುವುದರಿಂದ ಇದರ ವೀಕ್ಷಣೆಗೆ ಸಮಯ ನಿಗದಿಗೊಳಿಸಲಾಗಿದ್ದು, ಪ್ರತಿ ದಿನರಾತ್ರಿ 7 ರಿಂದ 7.30 ಹಾಗೂ 8 ರಿಂದ 8.30 2 ಬಾರಿ ಪ್ರದರ್ಶನವಿರಲಿದೆ. ಅಕಸ್ಮಾತ್ ಮಳೆ ಬಂದರೆ, ವೀಕ್ಷಕರು ತಾತ್ಕಾಲಿಕ ನಿಲುಗಡೆಗೂ ಶೆಡ್ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಟೈಟಾನಿಕ್ ಬೋಟ್, ಬ್ರೇಕ್ ಡಾನ್ಸ್, ಮಕ್ಕ ಳಿಗೆ ಬೋಟಿಂಗ್, ಸನ್‍ಮೂನ್ ಸೇರಿ ದಂತೆ ವಿವಿಧ ಆಟಿಕೆಗಳನ್ನು ಅಳವಡಿಸಿದ್ದು, 50 ಸ್ಟಾಲ್‍ಗಳಲ್ಲಿ ಡೆಲ್ಲಿ ಹಪ್ಪಳ, ಬಜ್ಜಿ, ದಾವಣೆಗೆರೆ ದೋಸೆ, ರಾಜಸ್ತಾನ್ ಚಾಟ್ಸ್ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಬಾರಿ ವಿಶ್ವ ಬ್ರಾಹ್ಮಿನ್ ಕೆಫೆಯ ಮಳಿಗೆಯೂ ಫಲಪುಷ್ಪ ಪ್ರದರ್ಶನದಲ್ಲಿ ಇರುತ್ತದೆ. ಆಟಿಕೆಗಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 12ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಿ, ವೀಕ್ಷಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಆಸಕ್ತರಿಗೆ ಸ್ಪರ್ಧೆ ಆಯೋಜನೆ: ಅ.12 ರಂದು ಪುಷ್ಪ ರಂಗೋಲಿ ಸ್ಪರ್ಧೆ, ಅ.14ರಂದು ಚಿತ್ರಕಲಾ ಸ್ಪರ್ಧೆ, ಅ.16ರಂದು ಭಾರ ತೀಯ ಪುಷ್ಪಕಲಾ ಸ್ಪರ್ಧೆ, ಅ.21ರಂದು ಕುಪ್ಪಣ್ಣ ಪಾರ್ಕ್‍ನಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಮುಕ್ತಾಯ ಸಮಾರಂಭ ನಡೆಯ ಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ ನಾಗರಾಜ್, ಜಿಲ್ಲಾ ತೋಟಗಾರಿಕಾ ಸಂಘದ ಡಾ.ಡಿ. ಪ್ರಭಾಮಂಡಲ್, ಹೆಚ್.ಹನುಮಂತಯ್ಯ, ಎಂ.ವಿಜಯಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »