ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಗ್ರಂಥಾಲಯ  ಕರ ಕುರಿತ ಮಾಹಿತಿ ಕೇಳಿದ ಸರ್ಕಾರ
ಮೈಸೂರು

ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಗ್ರಂಥಾಲಯ ಕರ ಕುರಿತ ಮಾಹಿತಿ ಕೇಳಿದ ಸರ್ಕಾರ

December 8, 2018

ವಿಧಾನಸಭಾ ಸದಸ್ಯರ ಚುಕ್ಕೆ ಪ್ರಶ್ನೆಗಳಿಗೆ ಅವಕಾಶ
ಮೈಸೂರು:  ಮೈಸೂರು ನಗರಪಾಲಿಕೆ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬರಬೇಕಾದ ಗ್ರಂಥಾಲಯ ಕರ ಎಷ್ಟು? (ಗ್ರಂಥಾಲಯ ಕರದ ಬೇಡಿಕೆ, ಸಂಗ್ರಹ ಹಾಗೂ ಇದರ ಬಾಕಿ ಮೊತ್ತದ ಕುರಿತು) ಮಾಹಿತಿ ಒದಗಿಸುವಂತೆ ವಿಧಾನಸಭೆಯ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.

ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಲಿದ್ದು, ಡಿ.18ರಂದು ಅಧಿವೇಶನದಲ್ಲಿ ಉತ್ತರಿಸಬೇಕಾದ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಂಥಾ ಲಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು, ಅಂತೆಯೇ ಮೈಸೂರು ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಿಂದಲೂ ಮೈಸೂರು ಮಹಾನಗರಪಾಲಿಕೆ ಉಳಿಸಿಕೊಂಡಿರುವ ಗ್ರಂಥಾಲಯ ಕರ ಕುರಿತಂತೆ ಸರ್ಕಾರಕ್ಕೆ ಮಾಹಿತಿ ರವಾನಿಸಿದ್ದಾರೆ.

ಗ್ರಂಥಾಲಯ ಕರ ಸಂಗ್ರಹವನ್ನು ರಾಜ್ಯದ ಯಾವ ಸ್ಥಳೀಯ ಸಂಸ್ಥೆಗಳ ಮೂಲಕ ಸಂಗ್ರಹಿಸಲಾಗುತ್ತದೆ. ಕರ ಸಂಗ್ರಹವು ಸಮರ್ಪಕವಾಗಿ ಆಗದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ, ಇದಕ್ಕೆ ಕಾರಣಗಳೇನು? ಗ್ರಂಥಾಲಯ ಕರ ಸಂಗ್ರಹಕ್ಕೆ ಹಾಗೂ ಅದರ ಉದ್ದೇಶಕ್ಕೆ ಪಾವತಿಯಾಗಿರುವ ಹಣ ಎಷ್ಟು? ಪಾವತಿಯಾಗಬೇಕಿದ್ದಲ್ಲಿ ಕಾರಣಗಳೇನು? ಈ ಬಾರಿ ಮೊತ್ತವನ್ನು ಯಾವಾಗ ಯಾವ ಉದ್ದೇಶಕ್ಕಾಗಿ ನೀಡಲಾಗುತ್ತಿದೆ ಎಂಬಿತ್ಯಾದಿ ವಿವರಗಳನ್ನು ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಈ ಕುರಿತಂತೆ ಮೈಸೂರು ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್ ಅವರು ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಮೈಸೂರು ನಗರಪಾಲಿಕೆ ಸಂಗ್ರಹಿಸಿದ 17 ಕೋಟಿ ರೂ.ಗಳಷ್ಟು ಗ್ರಂಥಾಲಯ ಕರವನ್ನು ಇದುವರೆಗೂ ಪಾವತಿಸಿಲ್ಲ. ಅಲ್ಲದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹ ಅಂದಾಜು 20 ಕೋಟಿ ಯಷ್ಟು ಗ್ರಂಥಾಲಯ ಕರ ಪಾವತಿಸಿಲ್ಲ. ಈ ಸಂಬಂಧ ಡಿಸಿಬಿ (ಡಿಮ್ಯಾಂಡ್ ಕಲೆಕ್ಷನ್ ಅಂಡ್ ಬ್ಯಾಲೆನ್ಸ್)ನ ಮಾಹಿತಿಯನ್ನು ನೀಡಿಲ್ಲದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ ವರದಿ ಪ್ರಕಟವಾಗಿತ್ತು.

Translate »