ಮೈಸೂರು, ಆ.10(ಪಿಎಂ)- ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರಧ್ವಜ ಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಭಾರತ ಸೇವಾದಳದ ಮಾಜಿ ದಳಪತಿ ಹ.ಸಂ.ಕಾಶಿನಕುಂಟಿ ತಿಳಿಸಿದರು. ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಸೇವಾದಳದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಘ -ಸಂಸ್ಥೆಗಳು ರಾಷ್ಟ್ರಧ್ವಜ ಸಂಹಿತೆ ನಿಯಮಗಳನ್ನು ತಿಳಿದುಕೊಂಡು ಅದರ ಅನುಸಾರವೇ ಧ್ವಜಾರೋಹಣ ಮಾಡ ಬೇಕು ಹಾಗೂ ಇಳಿಸಬೇಕು. ಆದರೆ ಧ್ವಜ ಸಂಹಿತೆ ನಿಯಮಗಳನ್ನು ಬಹು ತೇಕ ಶಾಲಾ-ಕಾಲೇಜುಗಳಲ್ಲಿ ಪಾಲಿಸ ಲಾಗುತ್ತಿಲ್ಲ. ಇದಕ್ಕೆ ಅರಿವಿನ ಕೊರತೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಧ್ವಜ ಸಂಹಿತೆ ಅನುಸಾರ ರಾಷ್ಟ್ರಧ್ವಜ ಹಾರಿಸಿದಾಗ ಅದಕ್ಕೆ ಸನ್ಮಾನ ಪೂರ್ವಕ ವಾಗಿ ಉಚ್ಛ ಸ್ಥಾನ ನೀಡಬೇಕು. ರಾಷ್ಟ್ರ ಧ್ವಜವನ್ನು ಸ್ಫೂರ್ತಿಯಿಂದ ಏರಿಸಬೇಕು ಹಾಗೂ ಗೌರವದಿಂದ ಕೆಳಗಿಳಿಸಬೇಕು ಎಂದರು. ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಡಿ.ಆರ್.ಶೇಷಾಚಲ ವಿಶೇಷ ಉಪನ್ಯಾಸ ನೀಡಿ, ಭಾರತದ ಧ್ವಜ ಬೆಳೆದು ಬಂದ ಹಾದಿಯನ್ನು ತಿಳಿಸಿಕೊಟ್ಟರು. ಸೇವಾದಳದ ಮಾಜಿ ರಾಜ್ಯಾಧ್ಯಕ್ಷ ಡಿ.ಮಾದೇಗೌಡ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಸೇವಾದಳದ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಜಿಲ್ಲಾ ಖಜಾಂಚಿ ಕೆ.ಎಂ.ಬಸವೇಗೌಡ, ಯೋಜನಾಧಿಕಾರಿ ಕೆ.ಎಸ್.ರವಿಶಂಕರ್, ಸದಸ್ಯರಾದ ಬಿ.ಶಂಭುಲಿಂಗಪ್ಪ, ಪದ್ಮ ಇದ್ದರು.