ಕೊಡಗಿನ ಪ್ರಕೃತಿ ವಿಕೋಪ ನೈಸರ್ಗಿಕ ಪ್ರಕ್ರಿಯೆ ಇದಕ್ಕೂ ಮಾನವನ ಚಟುವಟಿಕೆಗೂ ಸಂಬಂಧವಿಲ್ಲ
ಕೊಡಗು

ಕೊಡಗಿನ ಪ್ರಕೃತಿ ವಿಕೋಪ ನೈಸರ್ಗಿಕ ಪ್ರಕ್ರಿಯೆ ಇದಕ್ಕೂ ಮಾನವನ ಚಟುವಟಿಕೆಗೂ ಸಂಬಂಧವಿಲ್ಲ

October 14, 2018

ಮಡಿಕೇರಿ:  ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಾನವನ ಚಟುವಟಿಕೆಗೂ ಪ್ರಕೃತಿ ವಿಕೋಪಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನ್ಯೂಜಿಲ್ಯಾಂಡ್‍ನ ಖ್ಯಾತ ಭೂಗರ್ಭ ಶಾಸ್ತ್ರ ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಪ್ರತಿಪಾದಿಸಿದ್ದಾರೆ.

ನಗರದ ಬಾಲಭವನದಲ್ಲಿ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ‘ಪ್ರಕೃತಿ ವಿಕೋಪದ ವಾಸ್ತವಗಳು ಮತ್ತು ಮುಂದಿನ ಹೆಜ್ಜೆಗಳು’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಗಸ್ಟ್ 14 ರಿಂದ 17ರ 48 ಗಂಟೆ ಅವಧಿಯಲ್ಲಿ 30 ಇಂಚು ಮಳೆ ಸುರಿದಿರುವುದು ಭೂ ಕುಸಿತ ಮತ್ತು ಪ್ರವಾಹ ಉಕ್ಕೇರಲು ಕಾರಣವೆಂದು ವೈಜ್ಞಾನಿಕ ಅಂಶಗಳ ಮೂಲಕ ಮಾಹಿತಿ ನೀಡಿದ ವಿಜ್ಞಾನಿ ಐಚೆಟ್ಟಿರ ಮಾಚಯ್ಯ ‘ನ್ಯಾಷನಲ್ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ’ದ ವಿಜ್ಞಾನಿಗಳು ನೀಡಿರುವ ವರದಿಯಲ್ಲಿ ಹಲವು ಲೋಪಗಳಿರುವ ಸಾಧ್ಯತೆಗಳಿದ್ದು, ಎನ್.ಜಿ.ಎಸ್ ಕೇಂದ್ರದಲ್ಲಿರುವ ಹಿರಿಯ ಭೂಗರ್ಭ ವಿಜ್ಞಾನಿಗಳಿಂದ ಭೂಕುಸಿತದ ಅಧ್ಯಯನ ನಡೆಸಿದರೆ ಸತ್ಯಾಂಶ ಹೊರ ಬರಲಿದೆ ಎಂದು ಅಭಿಪ್ರಾಯಪಟ್ಟರು.

12 ಸಾವಿರ ಕೋಟಿ ವರ್ಷಗಳ ಹಿಂದೆ ಭೂಮಿಯ ಉಗಮವಾಗಿದ್ದು, 450 ಕೋಟಿ ವರ್ಷಗಳ ಹಿಂದಿನಿಂದ ಮಾನ್ಸೂನ್ ಮಾರುತಗಳು ಪ್ರಾರಂಭವಾಗಿದೆ. ತದನಂತರ ಇಂದಿನವರೆಗೆ ಪ್ರಕೃತಿಯಲ್ಲಿ ಇಂತಹ ಸಹಸ್ರಾರು ವಿಕೋಪಗಳು ಘಟಿಸಿವೆ. ಇಂತಹ ವಿಕೋಪಗಳಿಂದಲೇ ಗಿರಿ, ಕಂದರ, ಬೆಟ್ಟ ಶ್ರೇಣಿಗಳಾಗಿ ರೂಪುಗೊಂಡಿವೆ.

ನದಿಗಳು, ಜರಿ, ತೊರೆಗಳು ಸೇರಿದಂತೆ ಜಲಮೂಲಗಳೂ ಕೂಡ ಪ್ರಕೃತಿಯ ನೈಸರ್ಗಿಕವಾದ ವಿಕೋಪ ಸಂಭವಿಸಿದಾಗ ದಿಕ್ಕು ಬದಲಿಸಿ ಹರಿಯುತ್ತವೆ. ಇದು ಕೂಡ ಸಹಜ ಪ್ರಕ್ರಿಯೆಯಾಗಿದ್ದು, ನೀರು ಹರಿಯುವ ನದಿ ತೊರೆಗಳ ಎರಡೂ ಬದಿಗಳೂ ಭೌಗೋಳಿಕವಾಗಿ ಬದಲಾಗುತ್ತದೆ ಎಂದು ತಿಳಿಸಿದರು.

ಪ್ರಪಂಚದ ವಿವಿಧ ಭಾಗಗಳಲ್ಲಿ ಇಂದಿಗೂ ಭೂಕಂಪ, ಜ್ವಾಲಾಮುಖಿ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಘಟಿಸುತ್ತಿವೆ. ಅಂತಹ ರಾಷ್ಟ್ರಗಳೆಲ್ಲವೂ ಭವಿಷ್ಯದ ದೃಷ್ಟಿಯನ್ನು ಮುಂದಿಟ್ಟುಕೊಂಡು ಅಭಿವೃದ್ದಿ ಪರ ಯೋಜನೆ ರೂಪಿಸುತ್ತವೆ. ಇಂತಹ ಯೋಜನೆಗಳು ಭಾರತದಲ್ಲಿ ಅನುಷ್ಠಾನವಾಗಬೇಕೆಂದು ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಪ್ರತಿಪಾದಿಸಿದರು.

ಅಭಿವೃದ್ಧಿಯಿಂದ ಮಾತ್ರವೇ ಪ್ರಕೃತಿ ವಿಕೋಪದ ಮುಂಜಾಗ್ರತೆ ಕೈಗೊಳ್ಳಬಹುದುದೆಂದು ಸಲಹೆ ನೀಡಿದ ಅವರು, ಪರಿಸರ, ಮರ, ಗಿಡ, ಕಾಡುಗಳ ನೆಪದಲ್ಲಿ ಅಭಿವೃದ್ಧಿಗೆ ತಡೆ ಒಡ್ಡುತ್ತಿರುವುದು ವಿಷಾಧನೀಯ. ಪ್ರಕೃತಿ ವಿಕೋಪಗಳು 150-200 ವರ್ಷಗಳಿಗೊಮ್ಮೆ ಘಟಿಸಿಯೇ ತೀರುತ್ತದೆ. ಅದನ್ನು ತಡೆಯುವುದು ಅಸಾಧ್ಯವಾಗಿದ್ದು, ಕೋಟ್ಯಾಂತರ ವರ್ಷಗಳಿಂದ ಈ ಪ್ರಕ್ರಿಯೆ ನಿರಂತರವಾಗಿ ಸಾಗಿ ಬಂದಿದೆ ಎಂದು ಹಲವು ಉದಾಹರಣೆಗಳ ಸಹಿತ ವಿವರಿಸಿದರು.

ಪುಷ್ಪಗಿರಿ ಬೆಟ್ಟ ಸಾಲುಗಳಲ್ಲಿ ಅತೀ ಹೆಚ್ಚಿನ ಹಾನಿ ಸಂಭವಿಸಲು ಅಲ್ಲಿನ ಮಣ್ಣು ಕಾರಣವಾಗಿದೆ. ಆದರೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಪುಷ್ಪಗಿರಿಗಿಂತ ಬ್ರಹ್ಮಗಿರಿ ಬೆಟ್ಟಶ್ರೇಣಿ ಅತೀ ಹೆಚ್ಚು ಮಳೆ ಪಡೆದಿದ್ದರೂ ಕೂಡ ಅಲ್ಲಿನ ಬೆಟ್ಟ ಶ್ರೇಣಿಗಳು ಮಳೆ ನೀರನ್ನು ಸುಲಭವಾಗಿ ಹರಿದು ಬಿಡುವ ಸಾಮಥ್ರ್ಯವನ್ನು ಪಡೆದುಕೊಂಡಿವೆ. ಇದು ಕೂಡ ನೈಸರ್ಗಿಕವಾಗಿಯೇ ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳು ಹೊಂದಿರುವ ಲಕ್ಷಣವಾಗಿದೆ ಎಂದು ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಮಾಹಿತಿ ನೀಡಿದರು.

ಜುಲೈ 29 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಘು ಭೂಕಂಪನವಾಗಿದ್ದು ಇದಕ್ಕೂ ಭೂ ಕುಸಿತಕ್ಕೂ ಯಾವುದೇ ಸಂಬಂಧವಿಲ್ಲ. ಮುಂದಿನ 10 ರಿಂದ 15 ವರ್ಷಗಳ ಕಾಲ ಈಗ ಸಂಭವಿಸಿದ ಪ್ರಕೃತಿ ವಿಕೋಪದ ಅಡ್ಡ ಪರಿಣಾಮಗಳು ಮುಂದುವರಿಯುವ ಸಾಧ್ಯತೆಯಿದ್ದು, ಭಾರಿ ಅನಾಹುತಗಳು ಘಟಿಸಲಾರದು ಎಂದು ಐಚೆಟ್ಟಿರ ಮಾಚಯ್ಯ ಅಭಯ ನೀಡಿದರು.

ಪ್ರಕೃತಿ ವಿಕೋಪಕ್ಕೆ ಮಾನವನ ಚಟುವಟಿಕೆ ಕಾರಣವೆಂದು ಬಿಂಬಿಸಲು ಕೆಲವು ನಕಲಿ ಪರಿಸರವಾದಿಗಳು ಯಶಸ್ವಿಯಾಗಿದ್ದಾರೆ. ಪರಿಸರ ತಜ್ಞ ಮಾದವ ಗಾಡ್ಗೀಲ್ ಕೂಡ ತನ್ನ ವರದಿಯನ್ನು ಅನುಷ್ಠಾನ ಮಾಡಿದಿರುವುದೇ ಪ್ರಕೃತಿ ವಿಕೋಪ ಘಟಿಸಲು ಕಾರಣವೆಂದು ಹೇಳಿಕೆ ನೀಡಿದ್ದಾರೆ. ಈ ವರದಿ ಅನುಷ್ಟಾನ ಮಾಡಿದ್ದರೂ ಕೂಡ ಪ್ರಕೃತಿ ವಿಕೋಪ ಘಟಿಸುತ್ತಿತ್ತು. ಭಾರೀ ಮಳೆಯಿಂದಾಗಿ ಅನಾಹುತ ಸಂಭವಿಸಿದೆ ಎಂಬುದನ್ನು ಮಾದವ ಗಾಡ್ಗೀಲ್ ಮೊದಲು ಅರಿತುಕೊಂಡು, ಸುಳ್ಳು ಹೇಳುವುದನ್ನು ಬಿಡಲಿ. ನಕಲಿ ಪರಿಸರವಾದಿಗಳು ಮತ್ತು ಅರಣ್ಯ ಇಲಾಖೆಯವರಿಂದಲೇ ಜಿಲ್ಲೆಯಲ್ಲಿ ಅರಣ್ಯ ಮತ್ತು ಪ್ರಕೃತಿ ನಾಶವಾಗಿದೆ. ಜಿಲ್ಲೆಯ ಜನರು ಕೃಷಿಯೊಂದಿಗೆ ಪರಿಸರದ ಸಮತೋಲನ ಕಾಪಾಡಿಕೊಂಡು ಬಂದಿದ್ದಾರೆ. ಹೀಗಿದ್ದರು ನಕಲಿ ಪರಿಸರವಾದಿಗಳು ಪ್ರಕೃತಿ ವಿಕೋಪಕ್ಕೆ ಬೆಳೆಗಾರರು, ಕೃಷಿಕರು ಕಾರಣವೆಂದು ಗೂಬೆ ಕೂರಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ದ ಜಿಲ್ಲೆಯ ಜನ ಎಚ್ಚೆತ್ತು ಕೊಳ್ಳಬೇಕು. – ಎ.ಕೆ. ಸುಬ್ಬಯ್ಯ, ಮಾಜಿ ಎಂಎಲ್‍ಸಿ

Translate »