ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸುವ ಅಗತ್ಯ ಈಗ ಹೆಚ್ಚಾಗಿದೆ
ಮೈಸೂರು

ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸುವ ಅಗತ್ಯ ಈಗ ಹೆಚ್ಚಾಗಿದೆ

January 5, 2020

ಮೈಸೂರು, ಜ.4(ಎಂಟಿವೈ)- ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ಹವಾಮಾನ ವೈಪರೀತ್ಯ ಹೆಚ್ಚಾಗಿದ್ದು, ಜನಜೀವನದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಗಟ್ಟಲು ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಅಗತ್ಯವಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಆರ್.ಟಿ.ನಗರದ ಯುಎಸ್‍ಎ ಫಾರಂ ನಲ್ಲಿ ಶನಿವಾರÀ ರೋಟರಿ ಜಿಲ್ಲೆ 3181 ಸಂಸ್ಥೆ ಆಯೋಜಿ ಸಿದ್ದ ಸಂಕಲ್ಪ-2020ರ `4ನೇ ಜಿಲ್ಲಾ ಸಮಾವೇಶ’ ದಲ್ಲಿ ಮಾತನಾಡಿದ ಅವರು, ಹಲವು ಕಾರಣದಿಂದ ಈಗಾಗಲೇ ಹವಾಮಾನದಲ್ಲಿ ತೀವ್ರ ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತಿವೆ. ಇದರಿಂದ ಋತುಗಳಲ್ಲಿ ವ್ಯತ್ಯಾಸ ವಾಗಿ ಕಾಲಕ್ಕೆ ಮಳೆ ಬರದಂತಹ ಸಂಕಷ್ಟದ ಸ್ಥಿತಿ ತಲೆದೋರಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ವಾಯು ಮಾಲಿನ್ಯದಿಂದ ಸಮಾಜಕ್ಕೆ ಸಂಚಕಾರವಿದೆ. ಅರಣ್ಯ ದಲ್ಲೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ರೋಟರಿ ಯಂತಹ ಸಂಸ್ಥೆಗಳು ಪರಿಸರ ಕಾಳಜಿಯೊಂದಿಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.

ಯಾವುದೇ ಕೆಲಸವನ್ನು ಪ್ರತಿಫಲಕ್ಕಾಗಿ ಅಪೇಕ್ಷಿಸದೆ ಮಾಡಬೇಕು. ಮೈಸೂರು ರಾಜಮನೆತನವೂ ಪರಿಸರ ಸಂರಕ್ಷಣೆಗೇ ಆದ್ಯತೆ ನೀಡುತ್ತದೆ. ರೋಟರಿ ಸಂಸ್ಥೆ ಉದ್ದೇಶವೂ ಪರಿಸರ ಸಂರಕ್ಷಣೆಗೆ ಒತ್ತು ನೀಡು ವುದೇ ಆಗಿದೆ. ಎಲ್ಲರೂ ಸಾಮಾಜಿಕ, ಪರಿಸರ ಕಾಳಜಿ ಬಗ್ಗೆಯೂ ಗಮನಹರಿಸಿ ಸಮಾಜಕ್ಕೆ ಸೇವೆ ಮಾಡಲು ಮುಂದಾಗಬೇಕು ಎಂದರು.

ಒಂದು ಸಂಸ್ಥೆ 100 ವರ್ಷ ಪೂರೈಸುವುದು ಸಣ್ಣ ವಿಷಯವಲ್ಲ. ರೋಟರಿ ಆ ಸಾಧನೆ ಮಾಡಿರು ವುದು ಶ್ಲಾಘನೀಯ. ಇದು ರೋಟರಿ ಶತಮಾ ನೋತ್ಸವದ ಜೊತೆ ಜಯಚಾಮರಾಜ ಒಡೆಯರ್ ಅವರ ಶತಮಾನೋತ್ಸವ ಸಹ. ರೋಟರಿ ಸಂಸ್ಥೆ ಯೊಂದಿಗೆ ನಮ್ಮ ಕುಟುಂಬಕ್ಕೆ ನಂಟಿದೆ ಎಂದು ಹೇಳಿ ಕೊಳ್ಳುವುದಕ್ಕೆ ಖುಷಿಯಾಗುತ್ತದೆ ಎಂದು ಸ್ಮರಿಸಿದರು.

ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ನಿಯೋ ಜಿತ ಅಧ್ಯಕ್ಷ ಶೇಖರ್ ಮೆಹ್ತಾ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ಜಿಲ್ಲಾ ಮಟ್ಟದ ಸಮ್ಮೇಳನ ಅತ್ಯಂತ ಅವಶ್ಯಕ. ಪ್ರತಿಯೊಬ್ಬರಲ್ಲೂ ಹೃದಯವಂತಿಕೆ ಇರಬೇಕು. ಸ್ನೇಹಿತರನ್ನು ಸಂಪಾದಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಿಂದ ಪ್ರಪಂಚದಾದ್ಯಂತ ಎಷ್ಟೋ ಜನ ನನಗೆ ಪರಿಚಿತರಾಗಿದ್ದಾರೆ. ರೋಟರಿ ಸಂಸ್ಥೆಗೆ ಸೇರಿದ ನಂತರ ಅತ್ಯಂತ ಕಷ್ಟದಲ್ಲಿರುವ ಜನರನ್ನು ನೋಡಿದಾಗ ಜೀವನದ ಇನ್ನೊಂದು ಮುಖ ತಿಳಿ ಯಿತು. ಗುಡಿಸಲು, ಮಣ್ಣಿನ ಮನೆಗಳನ್ನು ನೋಡಿ ದ್ದೇನೆ. ನಾವು ಅಲ್ಲಿ ಕಟ್ಟಿಸಿದ ಶೌಚಾಲಯಗಳು ಅವರ ಮನೆಗಿಂತ ಚೆನ್ನಾಗಿ ಕಾಣುತ್ತವೆ. ಜನ ಅಷ್ಟು ಕಷ್ಟ ದಲ್ಲಿದ್ದಾರೆ. ಅವರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರು.

ಇದೇ ವೇಳೆ ಹಾಸ್ಯ ಸಾಹಿತಿ ಡುಂಡಿರಾಜ್ `ಜೀವನದಲ್ಲಿ ಹಾಸ್ಯ’ ಎಂಬ ವಿಚಾರದ ಬಗ್ಗೆ ಮಾತ ನಾಡಿ ಹಾಸ್ಯದ ಮೂಲಕವೇ ಜೀವನದ ಪ್ರಮುಖ ವಿಚಾರಗಳನ್ನು ಹೇಳಿ ಪ್ರೇಕ್ಷಕರನ್ನು ಮನರಂಜಿಸಿದರು.

ಅದಮ್ಯ ಚೇತನ ಸಂಸ್ಥಾಪಕರಾದ ತೇಜಸ್ವಿನಿ ಅನಂತ ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿ ಣಾಮ ಕುರಿತಂತೆ ಹಾಗೂ ಅದಮ್ಯ ಚೇತನ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಮಾಡಿದ ಸಾಧನೆ ಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಐಎಫ್ ಎಸ್‍ನ ಮಾಜಿ ರಾಯಭಾರಿ ಪ್ರಭು ದಯಾಳ್, ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ, ದಮನ್‍ಜಿತ್ ಸಿಂಗ್, ಎಂ.ರಂಗನಾಥ ಭಟ್, ಎ.ಆರ್.ರವೀಂದ್ರ ಭಟ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »