ಮಡಿಕೇರಿ: ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಕಟ್ಟಡ ಕೆಡವಲಾದ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶವನ್ನು ಕೈ ಬಿಡಲಾಗಿದ್ದು, ಆ ಸ್ಥಳದಲ್ಲಿ ವಿದೇಶಿ ಮಾದರಿಯ ಪಾರಂಪರಿಕ ತಾಣವೊಂದು ತಲೆ ಎತ್ತಲಿದೆ.
ಈ ಸ್ಥಳವನ್ನು ಪ್ರವಾಸೋದ್ಯಮಕ್ಕೆ ಪೂರಕ ವಾದ ತಾಣವನ್ನಾಗಿಸಿ ನಗರದ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆಯವಂತೆ “ಮೈಸೂರು ಮಿತ್ರ” ಮತ್ತು “ಸ್ಟಾರ್ ಆಫ್ ಮೈಸೂರು” ಪತ್ರಿಕೆಯ ಪ್ರಧಾನ ಸಂಪಾದಕರಾದ ಕಲ್ಯಾಟಂಡ ಬಿ. ಗಣಪತಿ ಅವರು ತಮ್ಮ ಪ್ರಖ್ಯಾತ ಅಂಕಣ “ಛೂ ಮಂತ್ರ”ದ ಮೂಲಕ ಸಲಹೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನ.1 ರಂದು ಪ್ರಕಟವಾದ “ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ಬೇಡ-ಅಲ್ಲಿ ಬೇಕು ಸಾರ್ವಜನಿಕ ಚೌಕ” ಎಂಬ ಲೇಖನಕ್ಕೆ ರಾಜ್ಯ ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಪೂರಕ ವಾಗಿ ಸ್ಪಂದಿಸಿ ಕೆಬಿಜಿ ಅವರ ನಿಲುವು, ಸಲಹೆಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ನಗರ ಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಂದ ಕುಮಾರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿ ಉದ್ದೇಶಿತ ಪಾರಂಪರಿಕ ತಾಣಕ್ಕೆ ರೂಪರೇಷೆ ಸಿದ್ಧಪಡಿಸುವ ಹೊಣೆಯನ್ನು ಸ್ಥಳೀಯಾಡಳಿತದ ಹೆಗಲಿಗೆ ವಹಿಸಿದ್ದಾರೆ.
ವಾಸ್ತುಶಿಲ್ಪ ಮೊರೆ: ಹಳೇ ಖಾಸಗಿ ಬಸ್ ನಿಲ್ದಾಣದ ಸ್ಥಳವನ್ನು ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗೆ ಮೀಸಲಿಟ್ಟಿದ್ದು, ಉದ್ದೇಶಿತ ಸ್ಥಳದಲ್ಲಿ ಕೊಡಗಿನ ಪರಂಪರೆ ಬಿಂಬಿಸುವ ಹಾಗೂ ಪ್ರವಾಸಿಗರಿಗೆ ಪೂರಕವಾದ ಮಾತ್ರವಲ್ಲದೆ ವಿದೇಶಿ ಮಾದರಿಯ ಪಾರಂಪರಿಕ ತಾಣ ರೂಪಿಸಲು ಸದ್ದಿಲ್ಲದೆ ಕಾರ್ಯ ಯೋಜನೆ ನಡೆಸಲಾಗುತ್ತಿದೆ.
ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಂದ ಕುಮಾರ್, ಶಕ್ತಿ ದಿನ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಮತ್ತು ಹೆಸರು ಹೇಳಲಿಚ್ಚಿಸದ ಮತ್ತಿಬ್ಬರು ಪ್ರಮುಖ ವ್ಯಕ್ತಿಗಳು ಕಲ್ಯಾಟಂಡ ಗಣಪತಿ ಅವರ ಛೂಮಂತ್ರ ಅಂಕಣದಲ್ಲಿ ಪ್ರಕಟವಾದ ಲೇಖನದ ಸಲಹೆಯಂತೆ “ಸಾರ್ವಜನಿಕ ಚೌಕ” ನಿರ್ಮಿಸಲು ಉತ್ಸುಕತೆ ತೋರಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ನಿರ್ಮಿಸಬೇಕಾದ ಸಾರ್ವಜನಿಕ ಚೌಕದ ವಿನ್ಯಾಸ ರೂಪಿಸಲು ಬೆಂಗಳೂರು ಮತ್ತು ಕೇರಳ ರಾಜ್ಯದ ವಾಸ್ತುಶಿಲ್ಪ ತಜ್ಞರನ್ನು ಸಂಪರ್ಕಿಸ ಲಾಗಿದ್ದು, ಮುಂದಿನ 2 ದಿನದಲ್ಲಿ ವಾಸ್ತುಶಿಲ್ಪ ತಜ್ಞರು ವರದಿ ನೀಡಲಿದ್ದಾರೆ. ಈ ವರದಿ ಮತ್ತು ನೀಲನಕ್ಷೆಯನ್ನಾಧರಿಸಿ ಕೊಡಗಿನ ಪರಂಪರೆ, ಪ್ರವಾಸೋದ್ಯಮ ಪೂರಕವಾಗಿ ಪಾರಂಪರಿಕ ಸಾರ್ವಜನಿಕ ತಾಣ ನಿರ್ಮಿಸಲು ಯೋಜನೆ ರೂಪಿಸಲಾಗುತ್ತದೆ. ಪ್ರಸ್ತುತ ಈ ಸ್ಥಳದಲ್ಲಿ ಗ್ರಾಫಿಕ್ ಮಾದರಿಯ ಕಾರಂಜಿ ಮತ್ತು ಗ್ಯಾಲರಿ ನಿರ್ಮಿಸುವ ಮೊದಲ ಹಂತದ ಚಿಂತನೆಯನ್ನು ನಡೆಸಲಾಗಿದೆ.
ವಿದೇಶ ಅಧ್ಯಯನ: ವಿದೇಶಗಳಲ್ಲಿರುವ ಸಾರ್ವ ಜನಿಕ ಚೌಕಗಳ ವಿನ್ಯಾಸ, ಅವುಗಳ ಹಿನ್ನೆಲೆ ಮತ್ತು ವಾಸ್ತುಶಿಲ್ಪವನ್ನು ಅಧ್ಯಯನ ನಡೆಸಿ ಅ ಮಾದರಿಯ ತಾಣವನ್ನು ನಿರ್ಮಿಸಲು ಅಗತ್ಯವಿದ್ದರೆ ವಿದೇಶ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಯೋಜನೆಗೆ ಉತ್ಸುಕತೆ ತೋರಿರುವ ನಗರಸಭೆ ಸದಸ್ಯ ನಂದಕುಮಾರ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.
‘ಮೈಸೂರು ಮಿತ್ರ’ದ ಪ್ರಧಾನ ಸಂಪಾದಕ ಕಲ್ಯಾಟಂಡ ಗಣಪತಿ ಅವರ ಲೇಖನವನ್ನು ಗಮನಿಸಿ ಶಕ್ತಿ ಪ್ರತಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಕೂಡ ಸಾರ್ವಜನಿಕ ಚೌಕ ನಿರ್ಮಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದು, ಅದರಂತಯೇ ಸಂಘ-ಸಂಸ್ಥೆಗಳ ಸಲಹೆ ಪಡೆದು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕ ಚೌಕ ಎಂಬ ಪಾರಂಪರಿಕ ತಾಣದೊಂದಿಗೆ ಚೌಕದ ಎರಡೂ ಬದಿ ಕಟ್ಟಡ ನಿರ್ಮಿಸುವ ಚಿಂತನೆಯೂ ಇದ್ದು, ವಾಸ್ತು ಶಿಲ್ಪ ತಜ್ಞರ ಅಭಿಪ್ರಾಯವನ್ನು ಪಡೆಯ ಲಾಗುತ್ತದೆ. ಈ ಎರಡೂ ಕಟ್ಟಡಗಳು ಪ್ರವಾಸೋದ್ಯಮ ಪೂರಕವಾಗಿಯೂ ನಿರ್ಮಿಸುವ ಚಿಂತನೆ ಇದೆ ಎಂದು ನಂದಕುಮಾರ್ ಮಾಹಿತಿ ನೀಡಿದರು. ಸಚಿವ ಸಾ.ರಾ. ಮಹೇಶ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಕೂಡ ಇದೆ ಚಿಂತನೆ ಹೊಂದಿದ್ದಾರೆ ಎಂದೂ ನಂದಕುಮಾರ್ ಹೇಳಿದರು. ಈ ನಿವೇಶನವನ್ನು ಈಗಾಗಲೇ ಖಾಸಗಿ ಸಂಸ್ಥೆಯ ಮೂಲಕ ಗೂಗಲ್ ಸರ್ವೆ ನಡೆಸಲಾಗಿದೆ. ಪ್ರತೀ ಇಂಚು ಸ್ಥಳವನ್ನು ಕೂಡ ಗೂಗಲ್ ಮೂಲಕ ದಾಖ ಲಿಸಲಾಗಿದೆ ಎಂದು ನಂದಕುಮಾರ್ ತಿಳಿಸಿದರು.
ತಡೆಗೋಡೆ ನಿರ್ಮಾಣ: ನಿವೇಶನ ಸಮತಟ್ಟು ಗೊಳಿಸಿರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು ಮೊದಲು ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ ಜಿಲ್ಲಾಡಳಿತ 2 ಕೋಟಿ ರೂಪಾಯಿ ಅನುದಾನ ನೀಡಲಿದೆ. ತಡೆಗೋಡೆಯನ್ನು ಕೂಡ ಸಾರ್ವಜನಿಕ ಚೌಕಕ್ಕೆ ಪೂರಕವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕ ಚೌಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ನಿರ್ಮಾಣ ವಾಗಲಿರುವುದರಿಂದ ಪ್ರವಾಸೋದ್ಯಮ ಇಲಾಖೆಯ ಹೆಚ್ಚಿನ ಪ್ರೋತ್ಸಾಹ ಮತ್ತು ಅನುದಾನವನ್ನು ನಿರೀಕ್ಷೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ನಗರದ ಹೃದಯ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರತಿಬಿಂಬಿಸುವ ಸಾರ್ವಜನಿಕ ತಾಣವೊಂದು ಸದ್ದಿಲ್ಲದೆ ಶೀಘ್ರದಲ್ಲಿಯೇ ನಿರ್ಮಾಣವಾಗಲಿದೆ.
ಅದ್ಭುತ ಸಲಹೆ: ನ.1 ರಂದು “ಮೈಸೂರು ಮಿತ್ರ” ಪತ್ರಿಕೆಯ ಛೂ ಮಂತ್ರ ಅಂಕಣದಲ್ಲಿ ಪ್ರಧಾನ ಸಂಪಾದಕ ಕಲ್ಯಾಟಂಡ ಬಿ.ಗಣಪತಿ ಅವರು ಬರೆದ ಲೇಖನ ಓದಿದ ಬಳಿಕ ಕೆ.ಬಿ.ಜಿ ಅವರಿಗೆ ಮೊಬೈಲ್ ಮೂಲಕ ಮೆಚ್ಚುಗೆಯ ಸಂದೇಶವನ್ನು ಕಳುಹಿಸಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಆದರೆ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಪತ್ರಿಕಾ ಕಚೇರಿಗೆ ಕರೆ ಮಾಡಿದ ಸಂದರ್ಭ ಕೆ.ಬಿ.ಜಿ ಅವರು ಜಪಾನ್‍ಗೆ ತೆರಳಿರುವ ಮಾಹಿತಿ ದೊರೆಯಿತು. ತಕ್ಷಣವೇ ಜಿಲ್ಲಾಧಿಕಾರಿಗಳ ಬಳಿಗೆ ತೆರಳಿ ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ ಅವರ ಗಮನ ಸೆಳೆದಾಗ ಸಕಾರಾತ್ಮಕ ಸ್ಪಂದನೆ ನೀಡಿದರು. ಬಳಿಕ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಂದಕುಮಾರ್ ಅವರಿಗೂ ಕರೆ ಮಾಡಿ ವಿಚಾರ ಪ್ರಸ್ತಾಪಿಸಿದೆ. ಅದೇ ದಿನ ಸಂಜೆ ನಾನು, ನಂದಕುಮಾರ್, ಕ್ಲೀನ್ ಕೂರ್ಗ್ ಸಂಚಾಲಕ ಸತ್ಯ ಮತ್ತು ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರುಗಳೊಂದಿಗೆ ಸ್ಥಳ ಪರಿಶೀಲನೆಯನ್ನು ಮಾಡಿ ನನ್ನ ಸಲಹೆ ನೀಡಿ ದ್ದೇನೆ ಎಂದು ಶಕ್ತಿ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಮಾಹಿತಿ ನೀಡಿದರು.
ತಡೆಗೋಡೆಯನ್ನು ಕೂಡ ಪಾರಂಪರಿಕ ರೀತಿಯಲ್ಲಿ ನಿರ್ಮಿಸಿ ರಾತ್ರಿಯ ವೇಳೆಯಲ್ಲಿ “ಲೇಜರ್ ಷೋ” ನಡೆಸಲು ಕೂಡ ಬಳಸಿಕೊಳ್ಳಬಹುದು. ತಡೆಗೋಡೆಯ ಮೇಲ್ಭಾಗದ ರಸ್ತೆ ಬದಿಗೆ ಕಬ್ಬಿಣದ ಗ್ರಿಲ್ಲಿಂಗ್ ಅಳವಡಿಸಿ ನಗರದ ಸೌಂದರ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾದ ತಾಣವನ್ನಾಗಿ ರೂಪಿಸಬಹುದೆಂಬ ಸಲಹೆಯನ್ನು ನೀಡಿದ್ದೇನೆ. ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕೇಂದ್ರ ಪುರಾತತ್ವ ಇಲಾಖೆ ಅನುಮತಿ ನೀಡುವುದು ಕೂಡ ಸಂಶಯ ವಿದೆ. ಕೋಟೆಯ ಸುತ್ತಲ 100 ಮೀಟರ್ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ರಾಜಕೀಯ ರಹಿತವಾಗಿ, ಜನಪರ ಪ್ರವಾಸೋದ್ಯಮ ಪೂರಕ ಯೋಜನೆ ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರು ಮನಸ್ಸು ಮಾಡಬೇಕಿದೆ ಎಂದು ಜಿ.ಚಿದ್ವಿಲಾಸ್ ಅಭಿಮತ ವ್ಯಕ್ತಪಡಿಸಿದರು.