ಅರಮನೆ ಆನೆಗಳ ಕಣ್ಣೀರು ಒರೆಸಿದ ಅರ್ಜುನ
ಮೈಸೂರು

ಅರಮನೆ ಆನೆಗಳ ಕಣ್ಣೀರು ಒರೆಸಿದ ಅರ್ಜುನ

October 22, 2018

ಮೈಸೂರು: ಸ್ವಸ್ಥಾನಗಳಿಗೆ ದಸರಾ ಆನೆಗಳು ತೆರಳುವ ವೇಳೆ ಅರಮನೆ ಆವರಣದಲ್ಲಿ ಭಾವನಾತ್ಮಕ ಸನ್ನಿವೇಶಗಳು ಕಂಡುಬಂದವು. ಅರಮನೆ ಆವರಣದಿಂದ ಆನೆಗಳು ಲಾರಿ ಏರಿ ಕಾಡಿನತ್ತ ಪಯಣ ಬೆಳೆಸುವುದಕ್ಕೆ ಮುಂದಾಗುತ್ತಿದ್ದಂತೆ ಅಲ್ಲಿದ್ದ ಕೆಲವರಲ್ಲಿ ಕಣ್ಣಾಲಿಗಳು ತೇವಗೊಂಡವು. ಅಂಬಾರಿ ಆನೆ ಅರ್ಜುನ ಲಾರಿ ಏರುವ ಮುನ್ನ ಅರಮನೆಯ ಆನೆಗಳ ಕಣ್ಣೀರು ಒರೆಸಿ ತಾನೂ ಭಾವುಕನಾದ. ಪ್ರತೀ ವರ್ಷದಂತೆ ಈ ಬಾರಿಯೂ ದಸರಾ ಆನೆ ಅರ್ಜುನನ ಮೇಲೆ ಅರಮನೆಯ ಆನೆಗಳು ವ್ಯಾಮೋಹ ಬೆಳೆಸಿಕೊಂಡಿದ್ದವು.

ಪ್ರತೀ ದಿನ ತಮ್ಮ ಕಣ್ಣ ಮುಂದೆಯೇ ಇರುತ್ತಿದ್ದ ಅರ್ಜುನನನ್ನು ನೋಡಿ ಸಂಭ್ರಮಿಸುತ್ತಿದ್ದ ಈ ಆನೆಗಳು ಇಂದು ಅರ್ಜುನ ಲಾರಿ ಏರಲು ಹೋಗುತ್ತಿದ್ದಂತೆ ವಿಚಲಿತಗೊಂಡವು. ಇದನ್ನು ಗಮನಿಸಿದ ಅರ್ಜುನ, ಅರಮನೆ ಆನೆಗಳಾದ ಪ್ರೀತಿ, ಸೀತಾ, ಚಂಚಲ, ರೂಬಿ ಮತ್ತಿತರ ಆನೆಗಳ ಸಮೀಪಕ್ಕೆ ಬಂದು ಸೊಂಡಿಲಿನಿಂದ ಮೈಸವರಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ. ಈ ವೇಳೆ ಅರಮನೆಯ ಆನೆ ಪ್ರೀತಿ ಮತ್ತು ಚಂಚಲಳ ಕಣ್ಣಲ್ಲಿ ನೀರು ಜಿನುಗುತ್ತಿದ್ದುದನ್ನು ಕಂಡ ಅರ್ಜುನ, ಸೊಂಡಿಲಿನಿಂದ ಕಣ್ಣೀರು ಒರೆಸಿ ಮತ್ತೆ ಬರುವೆ ಎಂಬ ಸಂದೇಶವನ್ನು ನೀಡಿದಂತೆ ವರ್ತಿಸಿದ. ಬಳಿಕ ಲಾರಿ ಹತ್ತುವ ವೇಳೆ ಸ್ವತಃ ಅರ್ಜುನನೂ ಭಾವುಕನಾಗಿ ಕಣ್ಣಲ್ಲಿ ನೀರು ತುಂಬಿಕೊಂಡ. ಈ ವೇಳೆ ಅರ್ಜುನನ ಮಾವುತ ವಿನು, ಸಹಾಯಕ ಅರ್ಜುನ ಇನ್ನಿತರರು ಅರ್ಜುನನ ಮೈಸವರಿ, `ನಿನ್ನೊಂದಿಗೆ ನಾವೂ ಬರುತ್ತಿದ್ದೇವೆ. ಯಾಕೆ ಅಳುತ್ತೀಯಾ’ ಎಂದು ಹೇಳುತ್ತಾ ಸಮಾಧಾನಪಡಿಸಿದರು.

ಒಲ್ಲೆ ಎಂದ ಧನಂಜಯ: ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳಲು ಆಗಮಿಸಿದ್ದ ಧನಂಜಯ ಮೊದಲಿಗೆ ಲಾರಿ ಏರಲು ನಿರಾಕರಿಸಿದ. ಮಾವುತರು ಮತ್ತು ಕಾವಾಡಿಗಳು ಎಷ್ಟೇ ಪ್ರಯತ್ನಿಸಿದರೂ ಲಾರಿ ಮೇಲೆ ಕಾಲಿಡದೇ ಹಿಂಜರಿಯುತ್ತಿದ್ದ. ಈ ವೇಳೆ ಆತನ ಮುಂಗಾಲಿಗೆ ಕಟ್ಟಿದ್ದ ಸರಪಳಿಯನ್ನು ಕಾವಾಡಿಗಳು, ಮಾವುತರು ಎಳೆದು ಹರಸಾಹಸ ಮಾಡಿ ಕೊನೆಗೂ ಧನಂಜಯ ನನ್ನು ಲಾರಿ ಹತ್ತಿಸುವಲ್ಲಿ ಯಶಸ್ವಿಯಾದರು.

Translate »