ಮಡಿಕೇರಿ: ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ 6 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ನಾಪೋಕ್ಲು ಮೂಲದ ನಿವಾಸಿ ಬಿ.ಎ. ಸುಂದರ ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ.
ಆಸ್ತಿ ಹಂಚಿಕೆ ವಿಚಾರದಲ್ಲಿ 2016ರ ಏಪ್ರಿಲ್ 2 ರಂದು ರಾತ್ರಿ 8 ಗಂಟೆಯ ವೇಳೆಗೆ ಬಿ.ಎ.ಸುಂದರ ಕತ್ತಿ ಮತ್ತು ದೊಣ್ಣೆ ಸಹಿತ ನಾಪೋಕ್ಲು ಚೇಲಾವರ ಗ್ರಾಮದ ಬಿ.ಎ. ಮುತ್ತಮ್ಮಯ್ಯ ಎಂಬವರ ಮನೆಗೆ ಬಂದಿದ್ದಾನೆ.
ಆಸ್ತಿಯಲ್ಲಿ ಹೆಚ್ಚಿನ ಪಾಲು ಪಡೆದುಕೊಂಡಿ ದ್ದೀಯ ಎಂದು ಜಗಳ ಪ್ರಾರಂಭಿಸಿದ ಸುಂದರ, ಮುತ್ತಮ್ಮಯ್ಯ ಅವರ ತಲೆ, ಭುಜ ಮತ್ತು ಬೆನ್ನಿನ ಭಾಗಕ್ಕೆ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ್ದ. ಹಲ್ಲೆ ತಡೆಯಲು ಮಧ್ಯ ಪ್ರವೇಶಿಸಿದ ಮುತ್ತಮ್ಮಯ್ಯ ಅವರ ಪತ್ನಿ ಕಾವೇರಮ್ಮ ಅವರ ಮೂಗಿಗೆ ಕಡಿದು, ಸ್ಥಳದಲ್ಲಿದ್ದ ರತ್ನಮ್ಮ ಎಂಬವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಜಗಳ ಬಿಡಿಸಲು ಮುಂದಾದ ಅನುಪಮ ಎಂಬವರಿಗೆ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತು ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾ ರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್, ಆರೋಪಿ ಬಿ.ಎ. ಸುಂದರನ ವಿರುದ್ದದ ಆರೋಪಗಳು ಸಾಕ್ಷಿ ಆಧಾರಗಳಿಂದ ಸಾಬೀತಾಗಿದೆ ಎಂದು ತಿಳಿಸಿ ತೀರ್ಪು ಪ್ರಕಟಿಸಿದರು.
ತೀರ್ಪಿನ ಪ್ರಕಾರ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಅಪರಾಧಕ್ಕಾಗಿ 2 ವರ್ಷ ಕಠಿಣ ಸಜೆ ಮತ್ತು 5 ಸಾವಿರ ದಂಡ, ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ ಅಪರಾಧಕ್ಕಾಗಿ 6 ವರ್ಷ ಕಠಿಣ ಶಿಕ್ಷೆ ಮತ್ತು 15 ಸಾವಿರ ರೂ. ದಂಡ, ಕೊಲೆ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ ಮತ್ತು 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ವಸೂಲಾಗುವ ದಂಡದ ಹಣದಲ್ಲಿ 17,500 ರೂ.ಗಳನ್ನು ಗಾಯಾಳು ಮುತ್ತಮ್ಮಯ್ಯ ಮತ್ತು 2,500 ರೂ.ಗಳನ್ನು ರತ್ನಮ್ಮ ಎಂಬವರಿಗೆ ನೀಡುವಂತೆ ತೀರ್ಪಿನಲ್ಲಿ ಸೂಚಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದರು.