ಆರೋಗ್ಯವಂತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ
ಮಂಡ್ಯ

ಆರೋಗ್ಯವಂತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ

January 9, 2020

ಭಾರತೀನಗರ, ಜ.8(ಅ.ಸತೀಶ್)- ಆರೋಗ್ಯವಂತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗಿದೆ. ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಸಲಹೆ ನೀಡಿದರು.

ಸಮೀಪದ ಅಣ್ಣೂರು ಗ್ರಾಮದಲ್ಲಿ ಬುಧವಾರ ನಡೆದ ವಿಶೇಷ ಮಹಿಳಾ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಾಗಿರುತ್ತದೆ. ಹಾಗೆಯೇ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅದು ಎಂದಿಗೂ ವ್ಯರ್ಥ ವಾಗುವುದಿಲ್ಲ ಎಂದರು.

ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕಾದರೆ ಸೊಪ್ಪು, ತರಕಾರಿ ಸೇವಿಸಬೇಕು. ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಯ ರಿಗೆ ಉತ್ತಮ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಅದನ್ನು ಸದುಪ ಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ತಾಪಂ ಹಾಗೂ ಗ್ರಾಪಂ ಉತ್ತಮವಾಗಿ ಕಾರ್ಯ ನಿರ್ವಹಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮಟ್ಟಿಗೆ ಅರ್ಹತೆ ಹೊಂದಬೇಕು. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಪಂಗಳಿಗೆ ಕೇಂದ್ರ ಸರ್ಕಾರ ಪಂಚಾ ಯಿತಿ ಸಶಕ್ತಿಕರಣ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಜಿಲ್ಲೆಯ ಅಣ್ಣೂರು, ನಗುವನಹಳ್ಳಿ, ಹೆಮ್ಮನಹಳ್ಳಿ, ಅಗ್ರಹಾರ, ಬಾಚಹಳ್ಳಿ ಗ್ರಾಮ ಪಂಚಾಯಿತಿಗಳು ಈ ಪ್ರಶಸ್ತಿ ಪಡೆಯುವ ಅರ್ಹತೆ ಹೊಂದಿದ್ದು ಪುರಸ್ಕಾರ ದೊರೆಯಲಿ ಎಂದು ಶುಭ ಹಾರೈಸಿದರು.

ಮಹಿಳಾಪರ ಚಿಂತಕಿ, ರೈತ ಸಂಘದ ಮುಖಂಡೆ ಸುನಂದಾ ಜಯರಾಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಶಿವಾನಂದ್, ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯ, ಡಯಟ್ ಸಂಸ್ಥೆಯ ಪ್ರಾಂಶುಪಾಲ ಜಯಶಂಕರ್, ತಾಲೂಕು ಸಂಯೋಜಕರಾದ ವೀರಣ್ಣ, ಅಮೃತ್ ಮಾತನಾಡಿದರು.

ಈ ವೇಳೆ ಅಂಗವಿಕಲರಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ಹಸಿಕಸ ಮತ್ತು ಒಣಕಸ ವಿಲೇವಾರಿಗೆ ಬಕೇಟ್ ವಿತರಣೆ, ಪರಿಸರ ಸಂರಕ್ಷಣೆ ಗಾಗಿ ಪ್ಲಾಸ್ಟಿಕ್ ಬ್ಯಾಗ್ ನಿಷೇಧಿಸುವಂತೆ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಯಿತು. ಪರಿಸರ ಜಾಗೃತಿ ವೇದಿಕೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕೆ.ಎಸ್.ರಾಜೀವ್, ತಾಪಂ ಸದಸ್ಯರಾದ ಲಲಿತಾಕುಮಾರ್, ಬಿ.ಗಿರೀಶ್, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕೆ ಶ್ವೇತಾ, ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಪರಿಸರ ಜಾಗೃತಿ ವೇದಿಕೆಯ ತಾ.ಅಧ್ಯಕ್ಷ ಅಣ್ಣೂರು ಸತೀಶ್, ಉಪಾಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಮುಖಂಡರಾದ ಎ.ಟಿ.ಬಲ್ಲೇಗೌಡ, ಆನಂದ್, ರಘು ಸೇರಿದಂತೆ ಇತರರಿದ್ದರು.

Translate »