ಕೂಲಿ ಕಾರ್ಮಿಕರ ನೆರವಿಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಕೂಲಿ ಕಾರ್ಮಿಕರ ನೆರವಿಗೆ ಆಗ್ರಹಿಸಿ ಪ್ರತಿಭಟನೆ

October 6, 2018

ಮಡಿಕೇರಿ: ಹಣಕಾಸು ಸಂಸ್ಥೆಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಕಾರ್ಮಿಕರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೂಲಿಯನ್ನು ಸೃಷ್ಟಿಸಬೇಕೆಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಎಐಯುಟಿಯುಸಿ ಸಂಘಟನೆಗಳು ಜಂಟಿಯಾಗಿ ಜಿಲ್ಲಾಡಳಿತ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದವು.

ಎಐಯುಟಿಯುಸಿ ಸಂಚಾಲಕ ಬಿ.ರವಿ, ಆರ್.ಕೆ.ಎಸ್‍ನ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಮಿಕರು ಪ್ರತಿಭಟನೆ ನಡೆಸಿ, ಬೇಡಿಕೆಗಳ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಈ ಸಂದರ್ಭ ಎಐಯುಟಿಯುಸಿ ಸಂಚಾಲಕ ಬಿ.ರವಿ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯುಂಟಾ ಗಿದೆ. ಇದರಿಂದ ಕೆಲಸ ಕಾರ್ಯಗಳು ಇಳಿಮುಖಗೊಂಡು, ಕೂಲಿ ಕೆಲಸವನ್ನು ನಂಬಿದ್ದ ಕಾರ್ಮಿಕ ವರ್ಗ ಕೆಲಸವಿಲ್ಲದೆ ಕಂಗಾಲಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮನೆ, ಆಸ್ತಿ ಕಳೆದುಕೊಂಡವರನ್ನು ಮಾತ್ರ ಸಂತ್ರಸ್ತರೆಂದು ಪರಿಗಣಿಸಿ, ಕೂಲಿ ಕಳೆದುಕೊಂಡವರನ್ನು ಸಂತ್ರಸ್ತರೆಂದು ಪರಿಗಣಿಸದೆ ಇರುವುದು ಖಂಡನೀಯ ಎಂದರು. ಪ್ರತಿಭಟನೆಯಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆಯ ಸದಸ್ಯರಾದ ಸುಮ, ಸುನಿಲ್, ಆಶಿಯ, ನಾಗಮಣಿ ಹಾಗೂ ಆಶಾ ಕಾರ್ಯಕರ್ತೆ ಲೀಲಾ ಮತ್ತಿತರರು ಪಾಲ್ಗೊಂಡಿದ್ದರು.

Translate »