ಭೂಮಾಪನ ಅಧಿಕಾರಿ ವರ್ಗಾವಣೆಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹ
ಕೊಡಗು

ಭೂಮಾಪನ ಅಧಿಕಾರಿ ವರ್ಗಾವಣೆಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹ

January 5, 2019

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಚೇರಿಗೆ ವಾರಕ್ಕೊಮ್ಮೆ ಮಡಿಕೇರಿಯಿಂದ ಬರುತ್ತಿರುವ ಸರ್ವೆ ಇಲಾಖೆಯ ಭೂ ಮಾಪನ ಅಧಿಕಾರಿ ಶಂಶುದ್ದೀನ್ ಅವರು ಅಧಿಕಾರ ದರ್ಪದಿಂದ ರೈತರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದಲ್ಲದೆ ಮನವಿಗೆ ಸ್ಪಂದಿಸು ತ್ತಿಲ್ಲ ಹಾಗೂ ರೈತರನ್ನು ನಿಂದಿಸುತಿದ್ದಾರೆ ಇವರ ಬಗ್ಗೆ ಮೇಲಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವುದರೊಂದಿಗೆ ಈ ಅಧಿಕಾರಿಯನ್ನು ಕೂಡಲೆ ಹೊರಜಿಲ್ಲೆಗೆ ವರ್ಗಹಿಸಬೇಕು ಇಲ್ಲವಾ ದಲ್ಲಿ ಜ.23 ರಂದು ರೈತ ಪರ ವಿವಿಧ ಸಂಘಟನೆಗಳು ವಿರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ ಎಚ್ಚರಿಸಿದ್ದಾರೆ. ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಡಿಕೇರಿಯಿಂದ ವಾರಕ್ಕೊಮ್ಮೆ ವಿರಾಜಪೇಟೆ ಕಚೇರಿಗೆ ಬರುತ್ತಿರುವ ಎಡಿಎಲ್‍ಆರ್ ಅಧಿಕಾರಿ ಶಂಶುದ್ದಿನ್ ಅವರು ಕಛೇರಿಯಲ್ಲಿ ನೂರಾರು ಕಡತಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇದರ ಬಗ್ಗೆ ರೈತರು ವಿಚಾರಿಸಿದಾಗ ಅವಾಚ್ಯ ಶಬ್ಧ ಬಳಸುತ್ತಾರೆ ಇವರ ವರ್ತನೆಗಳು ಬದಲಾಗುತ್ತಿಲ್ಲ. ಕಡತಗಳ ಬಗ್ಗೆ ರೈತರು ಕೇಳಿದಾಗ ತನಗೆ ರಾಜಕೀಯ ಪ್ರಭಾವಿಗಳಿದ್ದಾರೆ ಯಾವುದೇ ಅಧಿಕಾರಿ ಗಳಿಗೆ ದೂರು ನೀಡಿದರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ ಹಾಗೂ ಹೆಚ್ಚಿಗೆ ಮಾತನಾಡಿದರೆ ಪೊಲೀಸ್‍ಗೆ ದೂರು ನೀಡುವುದಾಗಿ ರೈತರಿಗೆ ಬೆದರಿಕೆ ಹಾಕುತ್ತಾರೆ.

ಈ ಹಿಂದೆ ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲೆ ಸಾರ್ವಜನಿಕ ಕುಂದು ಕೊರತೆಯ ಬಗ್ಗೆ ತುರ್ತು ಸಭೆಯಲ್ಲಿ ಈ ಅಧಿಕಾರಿ ವಿರುದ್ಧ ಹಲವಾರು ದೂರುಗಳು ಬಂದಿತ್ತು ಎಂದ ಕುಶಾಲಪ್ಪ ಅವರು ಈ ಅಧಿಕಾರಿಯನ್ನು ಜಿಲ್ಲೆಯಿಂದಲೇ ವರ್ಗಯಿಸಬೇಕೆಂದು ಒತ್ತಾಯಿಸಿದ್ದಾರೆ. ಗೋಷ್ಠಿಯಲ್ಲಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಸದಸ್ಯರಾದ ಕಾಳಮಂಡ ತಂಗಮ್ಮ, ಬೊಟ್ಟಂಗಡ ಮಾಚಯ್ಯ, ಬೊಳ್ಳಚಂಡ ಕಾಳಪ್ಪ, ಉದ್ದಪಂಡ ಅಜೀತ್, ಮೊಣ್ಣಂಡ ಮೋತಿ ಕಾರ್ಯಪ್ಪ, ಕುಟ್ಟಂಡ ಪ್ರಭು, ಬಿ.ಪಿ.ತಮ್ಮಯ್ಯ, ಹಸೈನರ್, ಇಸ್ಮಾಯಿಲ್, ಕೊಕ್ಕಂಡ ಕಾವೇರಪ್ಪ ಇತರರು ಉಪಸ್ಥಿತರಿದ್ದರು.

Translate »