ಮುಂದಿನ ಹಾದಿ ಕಂಡುಕೊಳ್ಳುವುದೇ ಮಹಿಳಾ ದಿನಾಚರಣೆಯ ಉದ್ದೇಶ
ಮೈಸೂರು

ಮುಂದಿನ ಹಾದಿ ಕಂಡುಕೊಳ್ಳುವುದೇ ಮಹಿಳಾ ದಿನಾಚರಣೆಯ ಉದ್ದೇಶ

March 11, 2020

ಮೈಸೂರು, ಮಾ.10(ಆರ್‍ಕೆಬಿ)- ಮಹಿಳಾ ದಿನಾಚರಣೆ ಎಂದರೆ ನಮ್ಮ ಮೌನ ಮುರಿ ಯುವ ದಿನ. ನಮ್ಮ ಹಕ್ಕುಗಳನ್ನು ಸ್ಥಾಪಿ ಸುವ ದಿನ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ದಿನ. ಮುಂದಿನ ಹಾದಿ ಕಂಡುಕೊಳ್ಳುವ ದಿನ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ವನಜ ವೆಮ್ ಅಭಿಪ್ರಾಯಪಟ್ಟರು.

ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಅಭಿಯಾನ ನಿರ್ದೇಶನಾಲಯ, (ಡೇ ನಲ್ಮ್) ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆ ಜಂಟಿ ಆಶ್ರಯದಲ್ಲಿ ಮೈಸೂರು ಪುರಭವನ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು. ಹುಟ್ಟುವ ಮೊದಲೇ ಹೆಣ್ಣು ಮಗುವಿನ ಭ್ರೂಣ ಹತ್ಯೆ ನಡೆಯುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ರಾಜಾಸ್ತಾನ, ಗುಜರಾತ್, ಉತ್ತರಪ್ರದೇಶ ಇನ್ನಿತರ ಕಡೆಗಳಲ್ಲಿ ಹೆಚ್ಚು ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ. ಇದನ್ನು ತಡೆಗಟ್ಟುವುದು ಮಹಿಳೆಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ತಸ್ನೀಂ ಮಾತನಾಡಿ, ಆತ್ಮಗೌರವಕ್ಕಾಗಿ ಆತ್ಮ ಸ್ಥೈರ್ಯದಿಂದ ಹೋರಾಡುವ ಮಹಿಳೆ ಯರು ದೈಹಿಕ, ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸಬೇಕು. ಮಹಿಳೆಯರಿಗಾಗಿಯೇ ಸರ್ಕಾರದಿಂದ ನೀಡಲಾಗಿರುವ ಹಲವು ಯೋಜನೆಗಳನ್ನು ಬಳಸಿಕೊಳ್ಳಬೇಕು. ಸ್ವಾವಲಂಬಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಮೈಸೂರು ಮಹಾನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ಮಹಿಳೆ ವಿದ್ಯಾವಂತಳಾದರೆ ಸಮಾಜಕ್ಕೆ ಹೆಚ್ಚು ಉಪ ಯುಕ್ತ ಆಗಿರುವುದನ್ನು ಇದುವರೆಗೆ ಕಂಡು ಕೊಂಡಿದ್ದೇವೆ. ಹಾಗಾಗಿ ಮಹಿಳೆಯರು ತಮ್ಮ ಹೆಣ್ಣು ಮಕ್ಕಳ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕು ಎಂದು ಹೇಳಿದರು. ಪಾಲಿಕೆ ಹೆಚ್ಚುವರಿ ಆಯುಕ್ತ ಎಂ.ಎನ್.ಶಶಿಕುಮಾರ್ ಅವರು ‘ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಕುರಿತು ಮಹಿಳೆಯ ರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಉಪಮೇಯರ್ ಸಿ.ಶ್ರೀಧರ್, ಹೆಚ್ಚುವರಿ ಆಯುಕ್ತ ಎಂ.ಎನ್.ಶಶಿಕುಮಾರ್, ಸಾರ್ವ ಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜೆ.ಗೋಪಿ, ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ನಿರ್ಮಲಾ, ಲೆಕ್ಕ ಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಪಲ್ಲವಿ ಬೇಗಂ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಂ.ಎನ್.ಶಿವಣ್ಣ, ಡೇ-ನಲ್ಮ್ ವಿಭಾಗದ ಸಿಇಓ ಎ.ಶಿವಪ್ಪ ಇತರರು ಉಪಸ್ಥಿತರಿದ್ದರು.

Translate »