`ಕನ್ನಡ ಭಾಷಾ ಅಸ್ಮಿತೆ’ ಕಾಪಾಡುವಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಾತ್ರ ಬಹುಮುಖ್ಯ
ಮೈಸೂರು

`ಕನ್ನಡ ಭಾಷಾ ಅಸ್ಮಿತೆ’ ಕಾಪಾಡುವಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಾತ್ರ ಬಹುಮುಖ್ಯ

December 10, 2019

ಮೈಸೂರು, ಡಿ.9(ಎಸ್‍ಪಿಎನ್)-ದೇಶದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿನ ಜ್ಞಾನ ಸಂಪತ್ತಿಗೆ ಸರಿ ಸಮಾನನಾಗಿ `ಕನ್ನಡ ಭಾಷಾ ಅಸ್ಮಿತೆ’ಯನ್ನು ಕಾಪಾಡಿಕೊಳ್ಳುವಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಾತ್ರ ಬಹಳ ಮುಖ್ಯವಾದುದು ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಶ್ರೀ ಬಸವ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಬಸವಣ್ಣ ಕುರಿತಾದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕನ್ನಡ ಭಾಷಾ ಅಸ್ಮಿತೆಯ ಕೀರ್ತಿಯನ್ನು ದೇಶ, ವಿದೇಶಗಳಲ್ಲಿ ಹೆಚ್ಚಿಸಿದೆ. ಇಲ್ಲಿನ ವಿದ್ವಾಂಸರು ಕನ್ನಡ ಅಸ್ಮಿತೆ ವಿಚಾರದಲ್ಲಿ ಹೊರತಂದಿರುವ ಪುಸ್ತಕ ಸಂಪತ್ತು ಪ್ರಪಂಚದ ಯಾವುದೇ ಭಾಷೆಗಳಿಗೂ ಕಡಿಮೆ ಇಲ್ಲದಂತೆ ಸಂಪಾದಿಸಿ, ಜೋಪಾನ ಮಾಡಲಾಗಿದೆ. ಇದರಿಂದಾಗಿ ನಮ್ಮ ಕನ್ನಡ ಭಾಷಾ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದೆ ಎಂದರು.

ಹಿರಿಯ ವಿಮರ್ಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಸಾಮಾಜಿಕ ವ್ಯವಸ್ಥೆ ಕುರಿತು ಆದಿ ಕವಿ ಪಂಪ `ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೇಳಿದರೆ, ಕ್ರಾಂತಿಕಾರಿ ಬಸವಣ್ಣ ಬೇರೊಂದು ಅರ್ಥದಲ್ಲಿ `ಸಕಲ ಜೀವಿಗಳಿಗೂ ಲೇಸ ಬಯಸಬೇಕು’ ಎಂದು ವಚನಗಳಲ್ಲಿ ತಿಳಿಸಿದ್ದಾರೆ. ಲೇಖಕ ಕರ್ಪೂರ ಕೃಷ್ಣಮೂರ್ತಿ ರಚಿತ `ಜಗಜ್ಯೋತಿ ಬಸವೇಶ್ವರ ಚರಿತಾಮೃತ’, ಲೇಖಕಿ ಶಾಂತಾದೇವಿ ಮಾಳವಾಡ ರಚಿತ `ಬಸವ ಪ್ರಕಾಶ’, ಬಿ.ಪುಟ್ಟಸ್ವಾಮಯ್ಯ ರಚಿತ `ಕಲ್ಯಾಣೇಶ್ವರ’, ಡಾ.ಎಚ್.ತಿಪ್ಪೇರುದ್ರಸ್ವಾಮಿ, ಪ್ರೊ.ಜಿ.ಎಚ್.ಹನ್ನೆರಡು ಮಠ ರಚಿತ `ಉಳವಿಯಲ್ಲಿ ಓಂಕಾರ’, ಪ್ರೊ.ಚಂದ್ರಶೇಖರಯ್ಯ ಅವರ `ಜಗದನಂಟ’ ಪುಸ್ತಕಗಳಲ್ಲಿ ಬಸವಣ್ಣನವರ ವ್ಯಕ್ತಿತ್ವ, ಸಾಮಾಜಿಕ ಪ್ರಜ್ಞೆ ಮತ್ತು ನಡವಳಿಕೆ, ಜೀವನ ತುಡಿತ, ಸಮಾನತೆ ಚಿಂತನೆ ಸೇರಿದಂತೆ ಅನೇಕ ಆಯಾಮಗಳಲ್ಲಿ ವಿಮರ್ಶೆಯಾಗಿದೆ ಎಂದರು. ವೇದಿಕೆ ಯಲ್ಲಿ ಪ್ರೊ.ಚಂದ್ರಶೇಖರಯ್ಯ, ಡಾ.ಕೆ.ಪಿ.ಲಲಿತಾ, ಪ್ರೊ.ನೀಲಗಿರಿ ತಳವಾರ ಇದ್ದರು.

Translate »