ವನ್ಯಜೀವಿಗಳ ಬಗ್ಗೆ ಮಾಹಿತಿ ಹೊಂದಿರುವ ಪಶುವೈದ್ಯರ ಕೊರತೆ ಹೆಚ್ಚಾಗಿದೆ
ಮೈಸೂರು

ವನ್ಯಜೀವಿಗಳ ಬಗ್ಗೆ ಮಾಹಿತಿ ಹೊಂದಿರುವ ಪಶುವೈದ್ಯರ ಕೊರತೆ ಹೆಚ್ಚಾಗಿದೆ

October 26, 2019

ಮೈಸೂರು,ಅ.25(ಎಂಟಿವೈ)- ರಾಜ್ಯದಲ್ಲಿ ವನ್ಯ ಜೀವಿಗಳ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ಹೊಂದಿ ರುವ ಪಶುವೈದ್ಯರ ಕೊರತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಾಗಾರಗಳ ಮೂಲಕ ನುರಿತ ಪಶುವೈದ್ಯರನ್ನು ಸಜ್ಜುಗೊಳಿಸುವ ಅಗತ್ಯವಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿಗೆ ಒಡಿಸ್ಸಾದ ನಂದನ್‍ಕಾನನ್ ಹಾಗೂ ರಾಜ್ಯದ ಶಿವಮೊಗ್ಗ, ಸಕ್ರೆಬೈಲು ಆನೆ ಕ್ಯಾಂಪ್‍ನಲ್ಲಿ `ಎಂಡೋ ಥೆಲಿಯೋಟ್ರೋಫಿಕ್ ಹರ್ಪಿಸ್’ ಸೋಂಕು ತಗುಲಿ ಆನೆಗಳ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಶುಕ್ರವಾರ ಪಶು ವೈದ್ಯರು, ಆನೆ ಪಾಲಕರು, ಸಹಾಯಕರು ಹಾಗೂ ಪಶುವಿಜ್ಞಾನದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಎಂಡೋಥೆಲಿಯೋಟ್ರೋಫಿಕ್ ಹರ್ಪಿಸ್ ವೈರಸ್ ಅಪಾಯಕಾರಿಯಾಗಿದ್ದು, ಬೇಗ ಹರಡುತ್ತದೆ. ಇದರ ಪರಿಣಾಮದಿಂದಲೇ ಶಿವಮೊಗ್ಗ, ಸಕ್ರೆಬೈಲ್ ಕ್ಯಾಂಪ್ ನಲ್ಲಿ ಆನೆಗಳ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಲವು ಗ್ರೂಪ್‍ಗಳಲ್ಲಿ ವನ್ಯಜೀವಿಗಳ ಬಗ್ಗೆ ಮೃಧುಧೋರಣೆ ಹಾಗೂ ಕಾಳಜಿ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಾಗಿದೆ. ಮೃಗಾಲಯ ಗಳಲ್ಲಿ ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಪಾಲಕರ ಮೇಲಿದೆ. ಸಣ್ಣಪುಟ್ಟ ಸಮಸ್ಯೆಗಳಾದರೂ ಅದೇ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ ಎಂದರು.

ನಮ್ಮಲ್ಲಿ ಆನೆ ಕ್ಯಾಂಪ್‍ಗಳು ಹೆಚ್ಚಾಗಿವೆ. ಸಾಕಷ್ಟು ಆನೆಗಳನ್ನು ಸೆರೆ ಹಿಡಿದು ಪಳಗಿಸಲಾಗುತ್ತಿದೆ. ಮಾನವ -ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚಾಗುತ್ತಿದ್ದು, ವಿವಿಧ ಕಾರ್ಯಾಚರಣೆ ನಡೆಸುವ ವೇಳೆ ನುರಿತ ವೈದ್ಯರ ಅಗತ್ಯವಿರುತ್ತದೆ. ರಾಜ್ಯದಲ್ಲಿ ಪಶುವೈದ್ಯರ ಸಂಖ್ಯೆ ಹೆಚ್ಚಾಗಿದೆ. ಆದರೆ ವನ್ಯಜೀವಿಗಳ ಬಗ್ಗೆ ಸಂಪೂರ್ಣ ವಾಗಿ ತಿಳಿದುಕೊಂಡಿರುವ ಪಶುವೈದ್ಯರ ಸಂಖ್ಯೆ ಕಡಿಮೆ ಯಿದೆ. ಆದ್ದರಿಂದ ಕಾರ್ಯಾಗಾರದ ಮೂಲಕ ಪರಿ ಣಿತರನ್ನು ಸಜ್ಜುಗೊಳಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಪಶುವಿಜ್ಞಾನ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ವನ್ಯಜೀವಿಗಳ ಬಗ್ಗೆ ಹೆಚ್ಚು ಆಸಕ್ತಿಯಿಟ್ಟು ಅಧ್ಯಯನ ಮಾಡುವುದರಿಂದ ಮುಂದಿನ ದಿನಗಳಲ್ಲಿ ನುರಿತ ಪಶು ವೈದ್ಯರ ಕೊರತೆ ಇಲ್ಲದಂತೆ ನೋಡಿಕೊಳ್ಳಬಹುದು. ಪಶು ವೈದ್ಯ ವಿಜ್ಞಾನ ಹಾಗೂ ವನ್ಯಜೀವಿ ವಿಜ್ಞಾನದ ನಡುವೆ ವ್ಯತ್ಯಾಸವಿದೆ. ವನ್ಯಜೀವಿ ವಿಜ್ಞಾನವನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ರಾಜ್ಯದಲ್ಲಿನ ಮೃಗಾಲಯ ಗಳಲ್ಲಿ ಸುಮಾರು 40 ಆನೆಗಳಿವೆ. ಮೈಸೂರು ಮೃಗಾ ಲಯದಲ್ಲಿ 15 ಆನೆಗಳಿವೆ. ರಾಜ್ಯದ ಎಲ್ಲಾ ಮೃಗಾಲಯ ಗಳಲ್ಲೂ ಪಶುವೈದ್ಯಕೀಯ ಆಸ್ಪತ್ರೆ ಸ್ಥಾಪಿಸಲಾಗಿದ್ದು, ನುರಿತ ವೈದ್ಯರನ್ನು ನಿಯೋಜಿಲಾಗಿದೆ. ಪ್ರಾಣಿ-ಪಕ್ಷಿ ಗಳಿಗೆ ವಿವಿಧ ವೈರಸ್ ತಗುಲಿದಾಗ ಕಟ್ಟೆಚ್ಚರ ವಹಿಸಲಾ ಗಿತ್ತು. ಹಕ್ಕಿ ಜ್ವರ ಬಂದಾಗ ಮೃಗಾಲಯವನ್ನು 1 ತಿಂಗಳು ಬಂದ್ ಮಾಡಲಾಗಿತ್ತು. ಹರ್ಪಿಸ್ ವೈರಸ್ ಮರಿಯಿಂದ 4 ವರ್ಷದ ಆನೆಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ಸಾಕಾನೆಗಳನ್ನು ಆನೆ, ಹುಲಿ ಸೆರೆ ಹಿಡಿ ಯುವ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುವ ಸಂದರ್ಭ ದಲ್ಲಿ ಹರ್ಪಿಸ್ ವೈರಸ್ ಸಾಕಾನೆಗಳಿಗೆ ತಗುಲಬಹುದು ಎಂಬ ಆತಂಕವೂ ಇದೀಗ ನಮ್ಮಲ್ಲಿ ಕಾಡುತ್ತಿದೆ. ಆದರೂ ಕಟ್ಟೆಚ್ಚರವಹಿಸುವ ಅಗತ್ಯವಿದೆ ಎಂದರು.

ಗಾರ್ಡ್‍ಗಳಿಗೂ ತರಬೇತಿ ಅಗತ್ಯ: ಹುಲಿ, ಕಾಡಾನೆ ಸೆರೆ ಹಿಡಿಯುವ ಸಂದರ್ಭದಲ್ಲಿ ಅರವಳಿಕೆ ಚುಚ್ಚು ಮದ್ದು ಡಾಟ್(ಶೂಟ್) ಮಾಡಲು ಗಾರ್ಡ್‍ಗಳಿಗೂ ತರಬೇತಿ ನೀಡುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಿಬ್ಬಂದಿಗಳು ಅರಣ್ಯ ಇಲಾಖೆಗೆ ಸೇರುತ್ತಿದ್ದು, ಉತ್ಸಾಹಿಗಳಾಗಿದ್ದಾರೆ. ಗಾರ್ಡ್‍ಗಳಿಗೆ ಡಾಟ್ ಮಾಡಲು ಗೊತ್ತಿದ್ದರೆ ಕಡಿಮೆ ಸಮಯದಲ್ಲಿ ಕಾರ್ಯಾಚರಣೆ ಮುಗಿಸಬಹುದು. ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ನೀಡಿದರೆ, ಒಂದು ಹುಲಿ ಹಿಡಿಯಲು 25ರಿಂದ 30 ಸಿಬ್ಬಂದಿಗಳು ಸಾಕಾಗುತ್ತದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕರ್ನಾಟಕ ಪಶು ವೈದ್ಯ ಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾ ಲಯದ ವನ್ಯಜೀವಿ ಪಶುವೈದ್ಯಕೀಯ ಸಂಶೋ ಧನಾ ನಿರ್ದೇಶಕ ಎಲ್.ರಂಗನಾಥ್, ಕೇರಳ ಅರಣ್ಯ ಇಲಾಖೆ ವನ್ಯಜೀವಿ ಪಶುವೈದ್ಯ ಡಾ.ಅರುಣ್ ಜಕಾರಿಯಾ ಹರ್ಪಿಸ್ ವೈರಸ್ ಹಾಗೂ ಇನ್ನಿತರ ರೋಗಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಸಿಎಫ್ ಟಿ.ಹೀರಾ ಲಾಲ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಎಂ.ಕುಲಕರ್ಣಿ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಬಿಳಿಗಿರಿರಂಗನ ಬೆಟ್ಟ ಹುಲಿ ಯೋಜನೆ ನಿರ್ದೇಶಕ ಶಂಕರ್, ಡಿಸಿಎಫ್ ಗಳಾದ ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ಅಲೆಗ್ಸಾಂಡರ್, ಚಂದ್ರಶೇಖರ್ ಇನ್ನಿತರರು ಪಾಲ್ಗೊಂಡಿದ್ದರು.

Translate »