ಕೇಂದ್ರದ `ಆಯುಷ್ಮಾನ್ ಭಾರತ್’ ಆರೋಗ್ಯ  ಯೋಜನೆ ಸಮರ್ಪಕ ಜಾರಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ
ಮೈಸೂರು

ಕೇಂದ್ರದ `ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆ ಸಮರ್ಪಕ ಜಾರಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ

March 19, 2019

ಮೈಸೂರು: ಬಡವರು, ಜನ ಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದವರಿಗೆ ಆರೋಗ್ಯ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಆಯುಷ್ಮಾನ್ ಭಾರತ್’ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕ ವಾಗಿ ಅನುಷ್ಠಾನಕ್ಕೆ ತರದೆ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಟ್ಟ ಹೆಸರು ತರಲು ಸಂಚು ನಡೆಸುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‍ವೊಂದರ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಬಡ ರೋಗಿಗಳಿಗೆ 5 ಲಕ್ಷ ರೂ. ವರೆಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಈ ಯೋಜನೆ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗ ಲಿದೆ. ಇದರ ಮಹತ್ವವನ್ನು ಅರಿತು ದೇಶದ ಎಲ್ಲಾ ರಾಜ್ಯಗಳೂ ಅನುಷ್ಠಾನಗೊಳಿಸಿವೆ. ಆದರೆ ಕರ್ನಾಟಕ ದಲ್ಲಿ ಮಾತ್ರ ಕೇಂದ್ರದ ಮಾರ್ಗ ಸೂಚಿಯೊಂದಿಗೆ ಹೊಸ ನಿಯಮಾ ವಳಿ ರೂಪಿಸಿ, `ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಜಾರಿಗೆ ತರಲಾಗಿದೆ. ನಿಯಮಗಳಲ್ಲಿ ದೋಷ ವಿರುವುದರಿಂದ ಅರ್ಹರಿಗೆ ಆರೋಗ್ಯ ಸೇವೆ ನೀಡಲು ಸಾಧ್ಯ ವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮಾರ್ಗಸೂಚಿ ಗೊಂದಲಮಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಬದಲಿಸಿ, ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಂತೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಈ ಹಿಂದೆ ರಾಜ್ಯ ದಲ್ಲಿ ಜಾರಿಯಲ್ಲಿದ್ದ ವಾಜಪೇಯಿ ಆರೋಗ್ಯಶ್ರೀ ಯೋಜನೆ, ಯಶಸ್ವಿನಿ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ, ಮುಖ್ಯ ಮಂತ್ರಿಗಳ ಸಾಂತ್ವ್ವನ ಹರೀಶ್ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ಹಿರಿಯ ನಾಗರಿಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆ ಜಾರಿಯಲ್ಲಿತ್ತು. ಆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಆರೋಗ್ಯ ಸೌಲಭ್ಯ ಸಮರ್ಪಕವಾಗಿ ದೊರೆಯು ತ್ತಿತ್ತು. ಇದೀಗ ಈ ಎಲ್ಲಾ ಯೋಜನೆ ಗಳನ್ನು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನ ಗೊಳಿಸಲಾಗಿದೆ. ಈಗ ಅರ್ಹರಿಗೂ ಆರೋಗ್ಯ ಸೌಲಭ್ಯ ಸಿಗದಂತಾಗಿದೆ. ಈ ಯೋಜನೆಯನ್ನು ದಂಧೆಯಾಗಿ ಮಾರ್ಪಡಿ ಸಲಾಗುತ್ತಿದೆ. ವೈದÀ್ಯರು ಸೂಚಿಸಿದ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಬೇಕಾಗಿದೆ. ಇದಕ್ಕೆ ಎನ್‍ಒಸಿ ಪಡೆಯಬೇಕಾಗಿದೆ. ಇದಕ್ಕೆ ಲಂಚ ನೀಡಬೇಕಾದ ಅನಿವಾರ್ಯತೆ ಎದುರಾ ಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆಯುಷ್ಮಾನ್ ಭಾರತ್ ಬಡವರಿಗಲ್ಲ, ಬರೀ ಶ್ರೀಮಂತರಿಗೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಮಾತಿನ ಪ್ರಕಾರ ರಾಜ್ಯದಲ್ಲಿರುವ ಬಿಪಿಎಲ್ ಕುಟುಂಬ ದವರು ಶ್ರೀಮಂತರೇ? ಎಂದು ಪ್ರಶ್ನಿಸಿ ದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆಯುಷ್ಮಾನ್ ಭಾರತ್ ಯೋಜನೆ ಯಲ್ಲಿ ಕೇಂದ್ರ ಸರ್ಕಾರ 450 ಕೋಟಿ ರೂ. ನೀಡಿದ್ದರೆ, ರಾಜ್ಯ ಸರ್ಕಾರ 600 ಕೋಟಿ ರೂ. ನೀಡಿದ್ದೇವೆ ಎಂದಿದ್ದಾರೆ. ಪ್ರಸ್ತುತ 1.20 ಕೋಟಿ ಬಿಪಿಎಲ್ ಕಾರ್ಡು ದಾರರಿರುವುದರಿಂದ `ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ’ ಯೋಜನೆ ಪರಿಣಾಮ ಕಾರಿಯಾಗಿ ರಾಜ್ಯದಲ್ಲಿ ಅನುಷ್ಠಾನ ಗೊಳಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಪಿಎಎಲ್: ಬಡ ಜನರಿಗೆ ಅನುಕೂಲವಾಗುವ ಆರೋಗ್ಯ ಕರ್ನಾಟಕ ಯೋಜನೆಯ ನ್ಯೂನತೆ ಗಳನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಯವರಿಗೆ ಮೂರು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಜನರಿಗೆ ಆಯು ಷ್ಮಾನ್ ಕಾರ್ಡ್ ಕೂಡ ಸಿಗದೇ, ಆರೋಗ್ಯ ಸೌಲಭ್ಯವೂ ದೊರಕದೇ ತೊಂದರೆ ಅನುಭವಿಸುತ್ತಿದ್ದಾರೆ.
ಬಿಪಿಎಲ್ ಕಾರ್ಡ್ ದಾರರಿಗೆ ಹಿಂದಿ ನಂತೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವಾಗಿ ಚಿಕಿತ್ಸೆ ದೊರೆಯಬೇಕು. ಇಲ್ಲದಿ ದ್ದರೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪಿಎಎಲ್ ಸಲ್ಲಿಸುವುದಾಗಿ ಎಚ್ಚರಿಸಿದರು.

ಕೇಂದ್ರದ ಯೋಜನೆ ಸ್ಥಗಿತ: ಇದೇ ವೇಳೆ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಆರೋಗ್ಯಕ್ಕೆ ಸಂಬಂಧಿಸಿ ದಂತೆ ಹಲವು ಯೋಜನೆಗಳನ್ನು ಅನು ಷ್ಠಾನಕ್ಕೆ ತಂದರೂ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿಯೇ ಅವು ಗಳನ್ನು ಜಾರಿಗೊಳಿಸುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದು 5 ಲಕ್ಷ ರೂ. ವರೆಗೆ ಆರೋಗ್ಯ ಸೌಲಭ್ಯ ನೀಡುವ ಮಹತ್ತರ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳು ಅನುಷ್ಠಾನ ಗೊಳಿಸಿದ್ದರೂ ಕರ್ನಾಟಕದಲ್ಲಿ ಮಾತ್ರ ಮಾರ್ಗಸೂಚಿಯನ್ನು ಕಠಿಣಗೊಳಿಸ ಲಾಗಿದೆ. ರೋಗಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸದೇ ಇರುವುದು ಅನು ಮಾನಕ್ಕೆಡೆ ಮಾಡಿದೆ. ಮೈಸೂರು ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಕೆ.ಆರ್.ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ವೆಂಟಿಲೇಟರ್ ಇರಬೇಕಾಗಿತ್ತು. ಆದರೆ 15 ವೆಂಟಿಲೇಟರ್ ಇವೆ. ಅದರಲ್ಲಿಯೂ ಮೂರ್ನಾಲ್ಕು ಸದಾ ಕೆಟ್ಟಿರುತ್ತವೆ. ಮೈಸೂ ರಿನ ಸರ್ಕಾರಿ ಆಸ್ಪತ್ರೆಗಳಲ್ಲಿ 1200ಕ್ಕೂ (ವೈದÀ್ಯರನ್ನು ಹೊರತುಪಡಿಸಿ) ಹೆಚ್ಚು ಸಿಬ್ಬಂದಿಗಳಿರಬೇಕಾಗಿತ್ತು. ಆದರೆ ಬರೀ 260 ಸಿಬ್ಬಂದಿಗಳಿದ್ದಾರೆ. ಗುಣ ಮಟ್ಟದ ಆರೋಗ್ಯ ಸೇವೆ ನೀಡಲು ಸಾಧ್ಯವೇ?. ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

Translate »