ಮೈಸೂರು ಮೂಲದ ಪೌರ ಕಾರ್ಮಿಕರ ಆತ್ಮಹತ್ಯೆ
ಕೊಡಗು

ಮೈಸೂರು ಮೂಲದ ಪೌರ ಕಾರ್ಮಿಕರ ಆತ್ಮಹತ್ಯೆ

September 6, 2018

ಮಡಿಕೇರಿ: ಮಡಿಕೇರಿ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ ಹಿಂಬದಿಯಲ್ಲಿ ವಾಸ ವಾಗಿದ್ದ ಪೌರ ಕಾರ್ಮಿಕರಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳ ಕಿಗೆ ಬಂದಿದೆ. ಮಡಿಕೇರಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸತೀಶ (38) ಮತ್ತು ಉಷಾ(29) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.

ಘಟನೆ ವಿವರ: ಮೂಲತಃ ಮೈಸೂರಿನ ಅಶೋಕಪುರಂನ ಅಂಬೇಡ್ಕರ್ ಕಾಲೋನಿ ನಿವಾಸಿ ಸತೀಶ್ ಮತ್ತು ಹೆಚ್.ಡಿ.ಕೋಟೆ ರಸ್ತೆಯ ಸಿಲ್ಕ್ ಫ್ಯಾಕ್ಟರಿ ಸಮೀಪದ ನಿವಾಸಿ ಉಷಾ ಕಳೆದ 8 ವರ್ಷಗಳಿಂದ ಮಡಿಕೇರಿ ನಗರ ಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದರು. ನಗರದ ರಂಗಮಂಟಪದ ಹಿಂಬದಿಯ ವಸತಿ ಯೊಂದರಲ್ಲಿ ಜೊತೆಯಲ್ಲೇ ವಾಸಿಸುತ್ತಿದ್ದ ಈ ಇಬ್ಬರು, ವಿವಾಹಿತರಾಗಿದ್ದು ಪತಿ, ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ಬದುಕು ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಅನಾರೋಗ್ಯ ಪೀಡಿತೆಯಾಗಿದ್ದ ಉಷಾ ಈ ಹಿಂದೆ ಮೈಸೂರಿನಲ್ಲಿದ್ದು, ಸೆ.2 ರಂದು ಸತೀಶನೊಂದಿಗೆ ಮಡಿಕೇರಿಗೆ ಬಂದಿದ್ದಳು. ಆ ಬಳಿಕ ಸತೀಶ ಮತ್ತು ಉಷಾ ಕೆಲಸಕ್ಕೂ ತೆರಳದೇ ಮನೆಯಲ್ಲೆ ಉಳಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಆದರೆ, ಕಳೆದ 2 ದಿನಗಳಿಂದ ಕೆಲಸಕ್ಕೂ ಬಾರದೆ, ಮನೆಯ ಬಾಗಿಲನ್ನು ತೆರೆಯದೇ ಇದ್ದ ಹಿನ್ನೆಲೆ ಯಲ್ಲಿ ಪಕ್ಕದ ಮನೆಯ ನಿವಾಸಿ ಮೀನಾಕ್ಷಿ ಎಂಬಾಕೆ ಇಂದು ಸಂಜೆ ಕಿಟಕಿಯಿಂದ ನೋಡಿದಾಗ ಇಬ್ಬರ ದೇಹಗಳು ನಿಶ್ಚಲವಾಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣವೇ ಮೀನಾಕ್ಷಿ ನಗರ ಸಭೆಗೆ ತೆರಳಿ ಪ್ರವೀಣ ಎಂಬಾತನಿಗೆ ಮಾಹಿತಿ ನೀಡಿದ್ದಾರೆ. ಅತ್ತ ತೆರಳಿದ ಪ್ರವೀಣ ಮನೆಯ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಮೃತಪಟ್ಟಿರುವುದು ಕಂಡು ಬಂದಿದೆ. ಮಾಹಿತಿ ಅರಿತು ಸ್ಥಳಕ್ಕೆ ಧಾವಿಸಿದ ಮಡಿಕೇರಿ ನಗರ ಪೊಲೀಸರು ಮೃತದೇಹಗಳ ಪರಿಶೀಲನೆ ನಡೆಸಿದ್ದು, ಎರಡು ದಿನಗಳ ಹಿಂದೆ ಇಬ್ಬರೂ ಕೂಡ ಜೊತೆ ಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು, ಮೃತರ ಕುಟುಂಬ ವರ್ಗಕ್ಕೆ ಮಾಹಿತಿ ನೀಡಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Translate »