ಧರೆಗುರುಳಿದ ಕೋಟೆ ಕಟ್ಟಡದ ಹೆಂಚುಗಳು
ಕೊಡಗು

ಧರೆಗುರುಳಿದ ಕೋಟೆ ಕಟ್ಟಡದ ಹೆಂಚುಗಳು

January 29, 2019

ಮಡಿಕೇರಿ: ಅರಸರ ಆಳ್ವಿಕೆಯ ಕುರುಹು ಆಗಿ ಉಳಿದಿರುವ ಮಡಿಕೇರಿ ಕೋಟೆಯ ಕಟ್ಟಡಗಳು ಮುರಿದು ಬೀಳುತ್ತಿದೆ. ಈ ಬಾರಿಯ ಮಳೆಗಾಲದಲ್ಲಿ ಸುರಿದ ಅತಿಯಾದ ಮಳೆ ಮತ್ತು ಬಿರುಗಾಳಿಗೆ ಕೋಟೆ ವಿಧಾನ ಸಭಾಂಗಣದ ಮೇಲ್ಚಾವಣಿಯ ಹೆಂಚುಗಳು ಹಾರಿಹೋಗಿದ್ದು, ಅಳಿದು ಉಳಿದಿರುವ ಸುಮಾರು 3 ಸಾವಿರಕ್ಕೂ ಹೆಚ್ಚು ಹೆಂಚುಗಳು ಇಂದು ಮಧ್ಯಾಹ್ನ 4 ಗಂಟೆಯ ಸಮಯದಲ್ಲಿ ಭಾರೀ ಸದ್ದಿ ನೊಂದಿಗೆ ಧರೆಗುರುಳಿ ಚೂರು ಚೂರಾಗಿವೆ.

ಹೆಂಚುಗಳು ಬಿದ್ದ ಸದ್ದಿಗೆ ಕೋಟೆ ಒಳಗೆ ಕರ್ತವ್ಯ ನಿರತರಾಗಿದ್ದ ವಿವಿಧ ಇಲಾಖೆಗಳ ನೌಕರರು ಮತ್ತು ಕಟ್ಟಡದ ಪಕ್ಕದಲ್ಲಿರುವ ಕೋರ್ಟ್‍ನ ಸಿಬ್ಬಂದಿಗಳು ಹಾಗೂ ವಕೀಲರು ಬೆಚ್ಚಿ ಬಿದ್ದು, ಕಚೇರಿಯಿಂದ ಹೊರಗೆ ಓಡಿ ಬಂದಿದ್ದಾರೆ. ಮೇಲ್ಭಾಗದಿಂದ ಹೆಂಚುಗಳು ಕೋಟೆಯ ವರಾಂಡದಲ್ಲಿ ಬೀಳುವ ಸಂದರ್ಭ ನೌಕರರು ಮತ್ತು ಸಾರ್ವಜನಿಕರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಭಾರೀ ಅನಾಹುತವೊಂದು ತಪ್ಪಿ ದಂತಾಗಿದೆ. ಇನ್ನು ಕೂಡ ಹೆಂಚುಗಳು ಜಾರಿ ಬೀಳುವ ಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಎಲ್ಲಾ ಲಕ್ಷಣಗಳಿವೆ.

ಕೇಂದ್ರ ಪುರಾತತ್ವ ಇಲಾಖೆ ಕೋಟೆಯ ಸಂರಕ್ಷಣೆಯ ಹೊಣೆ ಹೊತ್ತಿದ್ದು, ಕೋಟೆಯ ಸುತ್ತಲು ಆಸ್ತಿ ರಕ್ಷಣೆಗಾಗಿ ತಂತಿ ಬೇಲಿ ಅಳವಡಿಸಿದೆ. ಆದರೆ ದಿನದಿಂದ ದಿನಕ್ಕೆ ಶಿಥಿಲಾವಸ್ಥೆಗೆ ತಲುಪುತ್ತಿರುವ ಕೋಟೆಯ ಕಟ್ಟಡಗಳನ್ನು ಮಾತ್ರ ನಿರ್ಲಕ್ಷಿಸಿದೆ. ಮುಂಬ ರುವ ಮಳೆಗಾಲದಲ್ಲಿ ಕೋಟೆ ಕಟ್ಟಡ ಸಂಪೂರ್ಣ ಧರಾಶಾಹಿಯಾದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Translate »