ಮೈಸೂರು ಪಾಲಿಕೆಯ ಅವೈಜ್ಞಾನಿಕ ಕಾಮಗಾರಿ
ಮೈಸೂರು

ಮೈಸೂರು ಪಾಲಿಕೆಯ ಅವೈಜ್ಞಾನಿಕ ಕಾಮಗಾರಿ

January 11, 2020

ಮೈಸೂರು,ಜ.10(ವೈಡಿಎಸ್)-ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಮನೆಯ ವಾಟರ್ ವೈಪ್, ಕೇಬಲ್ ಗಳು ತುಂಡಾಗಿವೆ. ಹಳೇ ಯುಜಿಡಿ ಲೈನ್‍ಗೆ ಹಾನಿಯಾ ಗಿದ್ದು, ದುರ್ವಾಸನೆ ಬೀರುತ್ತಿದೆ. ರಸ್ತೆಯೆಲ್ಲಾ ಧೂಳಿನಿಂದ ಕೂಡಿದ್ದು, ಅನಾರೋಗ್ಯಕ್ಕೆ ತುತ್ತಾಗುವ ಭೀತಿ ಕಾಡುತ್ತಿದೆ. ಇದು ವಿದ್ಯಾರಣ್ಯಪುರಂ ನಿವಾಸಿಗಳ ಅಳಲು.

ನಗರಪಾಲಿಕೆಯು ಸುಮಾರು 4 ಕೋಟಿ ರೂ. ವೆಚ್ಚ ದಲ್ಲಿ ಯುಜಿಡಿ ಲೈನ್ ಅಳವಡಿಕೆ ಕಾಮಗಾರಿಯನ್ನು ಕೈಗೆತ್ತಿ ಕೊಂಡಿದ್ದು, ಇದು ಸೂಯೇಜ್ ಫಾರಂನಿಂದ ಆರಂಭ ವಾಗಿ ವಿದ್ಯಾರಣ್ಯಪುರಂನ 23ನೇ ಅಡ್ಡ ರಸ್ತೆ ಮೂಲಕ 4ನೇ ಮುಖ್ಯ ರಸ್ತೆಯ ಶಿವಗ್ಯಾಸ್- ಸಾರ್ವಜನಿಕರ ಹಾಸ್ಟೆಲ್- ಶಾರದಾವಿಲಾಸ ಕಾಲೇಜು ಮೂಲಕ ಸಾಗಿ ಬಲ್ಲಾಳ್ ವೃತ್ತದ ಸಮೀಪದಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ, ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಸುತ್ತ ಮುತ್ತಲಿನ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಯುಜಿಡಿ ಪೈಪ್ ಅಳವಡಿಸಲು ವಿದ್ಯಾರಣ್ಯಪುರಂನ 23ನೇ ಅಡ್ಡರಸ್ತೆ, 3ನೇ ಮುಖ್ಯ ರಸ್ತೆಯನ್ನು ಮನಸ್ಸಿಗೆ ತೋಚಿ ದಂತೆ ಅಗೆದು, ಮಣ್ಣನ್ನು ರಸ್ತೆಯಲ್ಲೇ ಬಿಟ್ಟಿರುವುದರಿಂದ ವಾಹನ ಸವಾರರು, ಸ್ಥಳೀಯರು ತಿರುಗಾಡಲು ತೊಂದರೆ ಅನುಭವಿಸುವಂತಾಗಿದೆ. ಒಟ್ಟಾರೆ, ಈ ಕಾಮಗಾರಿಯಿಂದ ಜನರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲವಾಗಿದ್ದೇ ಹೆಚ್ಚು ಎಂದು ಪಾಲಿಕೆ ಮಾಜಿ ಸದಸ್ಯ ಸುನಿಲ್ ಆರೋಪಿಸಿದರು.

The unscientific work of MCC-1

ಕುಸಿದ ಮ್ಯಾನ್‍ಹೋಲ್: ಕಾಮಗಾರಿಯ ವೇಳೆ ಮನ ಬಂದಂತೆ ರಸ್ತೆ ಅಗೆದಿದ್ದರಿಂದ ವಿದ್ಯಾರಣ್ಯಪುರಂ 3ನೇ ಮುಖ್ಯ ರಸ್ತೆಯಲ್ಲಿದ್ದ 3 ಮ್ಯಾನ್‍ಹೋಲ್‍ಗಳು ಸಂಪೂರ್ಣ ಕುಸಿದಿದ್ದು, ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಧೂಳುಮಯ: ಅಗೆದ ಮಣ್ಣನ್ನು ರಸ್ತೆಯ ತುಂಬೆಲ್ಲಾ ಹರಡಿದ್ದು, ಮಳೆಯಾದರೆ ಕೆಸರುಗದ್ದೆಯಾಗಿ ಮಾರ್ಪ ಡಲಿದೆ. ಜತೆಗೆ ಧೂಳಿನಿಂದ ಕೂಡಿದ್ದು, ಅನಾರೋಗ್ಯದ ಭೀತಿ ಎದುರಾಗಿದೆ.

ಒಡೆದ ವಾಟರ್, ಯುಜಿಡಿ ಪೈಪ್: ಕಾಮಗಾರಿಯ ವೇಳೆ ಮನೆಗೆ ಸಂಪರ್ಕ ಕಲ್ಪಿಸಿದ್ದ ವಾಟರ್, ಯುಜಿಡಿ ಪೈಪ್ ಗಳಿಗೆ ಹಾನಿಯಾಗಿದೆ. ಜತೆಗೆ ನೆಲದೊಳಗಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಕೇಬಲ್‍ಗಳು ತುಂಡಾಗಿವೆ.

ಕಾಂಪೌಂಡ್‍ಗೆ ಹಾನಿ: ಕಾಮಗಾರಿ ವೇಳೆ ಜೆಸಿಬಿ ಯಂತ್ರ ಮನೆಯ ಕಾಂಪೌಂಡ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕಾಂಪೌಂಡ್‍ಗೆ ಹಾನಿಯಾಗಿದೆ. ಜತೆಗೆ ವಿದ್ಯಾರಣ್ಯಪುರಂ-ಸುಯೇಜ್‍ಫಾರಂ ರಸ್ತೆಯ ಎರಡೂ ಬದಿಗಳಲ್ಲಿ ಮಣ್ಣಿನ ರಾಶಿ ಹಾಕಲಾಗಿದೆ.

ಗುಂಡಿ: ಸುಯೇಜ್ ಫಾರಂ-ವಿದ್ಯಾರಣ್ಯಪುರಂ ರಸ್ತೆಯಲ್ಲಿ ಮ್ಯಾನ್‍ಹೋಲ್ ನಿರ್ಮಿಸಲು ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು, ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಮನವಿ ಸಲ್ಲಿಕೆ: ಮೈಸೂರು ನಗರಕ್ಕೆ 24×7 ನೀರು ಸರಬರಾಜು ವಿತರಣಾ ಜಾಲ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಡಿಎಂಎ 0911ರಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಹಾಗೂ ಮನೆ ನೀರಿನ ಸಂಪರ್ಕಗಳನ್ನು ಅಳವಡಿಸುವ ಕಾಮಗಾರಿ ಮುಗಿದಿದ್ದು, ಚಾಲನೆ ಕಾರ್ಯ ಪ್ರಗತಿಯಲ್ಲಿದೆ.

The unscientific work of MCC-3

ಆದರೆ, ಪಾಲಿಕೆಯು ಒಳಚರಂಡಿ ಕಾಮಗಾರಿ ವೇಳೆ ವಿದ್ಯಾರಣ್ಯಪುರಂ ಬಡಾವಣೆಯ 4ನೇ ಮುಖ್ಯರಸ್ತೆಯ ಅಡ್ಡ ರಸ್ತೆಗಳು ಹಾಗೂ ಸೂಯೇಜ್ ಫಾರಂ ರಸ್ತೆಯಲ್ಲಿ ಹೊಸ ದಾಗಿ ಅಳವಡಿಸಿರುವ ನೀರಿನ ಸಂಪರ್ಕದ ಪೈಪ್‍ಗಳಿಗೆ ಹಾನಿಯಾಗಿದೆ. ಹಾಗಾಗಿ ಮುಂದಿನ ಬಾರಿ ಕಾಮಗಾರಿ ಕೈಗೆತ್ತಿ ಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವಂತೆ ಗುತ್ತಿಗೆದಾರರಿಗೆ ತಿಳಿಸಬೇಕು. ಜತೆಗೆ ಕಾಮಗಾರಿಯಿಂದ ಹಾನಿಯಾಗಿರುವ ಕೊಳವೆ ಮಾರ್ಗ ಹಾಗೂ ಮನೆಯ ನೀರಿನ ಸಂಪರ್ಕ ಗಳನ್ನು ದುರಸ್ತಿಪಡಿಸುವಂತೆ ಅಧಿಕಾರಿ ಗಳು, ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪಾಲಿಕೆಯ ಒಳ ಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಜೆ.ಎನ್ ನರ್ಮ್) ಸಹಾಯಕ ಕಾರ್ಯಪಾಲಕ ಅಭಿಯಂತರರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

Translate »